ಹಾಸನ

ಸ್ವಚ್ಛತೆ ಮಾಡದಿದ್ರೂ ಬಿಲ್ ಪಾವತಿ

Published On :

ಕನ್ನಡಪ್ರಭ ವಾರ್ತೆ ಹಾಸನ ಸೆ. 18
ನಗರದ ಸ್ವಚ್ಚತೆ ಕಾರ್ಯವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅನೈರ್ಮಲ್ಯ ಹೆಚ್ಚಾಗಿದ್ದರೂ ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಮಾತ್ರ ಪಾವತಿ ಮಾಡಲಾಗುತ್ತಿದೆ ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.
ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಬುಧವಾರ ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯ ಗೋಪಾಲ್, ಅನಿಲ್‌ಕುಮಾರ್ ಸೇರಿ ಇತರೆ ಸದಸ್ಯರು, ನಗರದ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಖಾಸಗಿಯವರು ಸರಿಯಾಗಿ ಕಾರ್ಯ ಮಾಡುತ್ತಿಲ್ಲ.
ನಗರದ ಕಸ್ತೂರಿ ಬಾ ರಸ್ತೆಯಲ್ಲಿ ತರಕಾರಿ, ಹೂ, ಹಣ್ಣನ್ನು ಮಾರಾಟ ಮಾಡುತ್ತಾರೆ. ಅಲ್ಲಿ ಕಸ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ಆಗಿದೆ. ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆಗಳಲ್ಲಿ ಹರಿದಾಡುತ್ತಿದೆ.
ಕೇವಲ ಬೆರಳೆಣಿಕೆಷ್ಟು ಮಂದಿ ಮಾತ್ರ:   ಜೊತೆಗೆ ಗುತ್ತಿಗೆದಾರರು ಪೌರಕಾರ್ಮಿಕರ ಸುಳ್ಳು ಹಾಜರಾತಿ ನೀಡುತ್ತಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹಾಜರಾದರೆ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ನಿರ್ವಹಿಸಬೇಕು. ಆದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುತ್ತಾರೆ.
ಕಡಿಮೆ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೂ ಹೆಚ್ಚಿನ ಹಾಜರಾತಿಯನ್ನು ಪುಸ್ತಕದಲ್ಲಿ ತೋರಿಸಲಾಗುತ್ತಿದೆ. ಆದರೆ ವಾರ್ಡ್‌ಗಳ ಸ್ವಚ್ಛತೆಗೆ ಪೌರ ಕಾರ್ಮಿಕರನ್ನು ಕಳುಹಿಸುವಂತೆ ಸೂಚಿಸಿದರೆ ಯಾವೊಬ್ಬ ಪೌರಕಾರ್ಮಿಕ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಬಯೋವುಟ್ರಿಕ್ ವ್ಯವಸ್ಥೆ ತನ್ನಿ:  ಈ ಸಮಸ್ಯೆ ನಿವಾರಣೆಗೆ ಬಯೋವುಟ್ರಿಕ್ ವ್ಯವಸ್ಥೆ ತರಬೇಕು ಎಂದ ಅವರು, ಒಂದು ವಾರದೊಳಗೆ ನಗರದೊಳಗೆ ಸೃಷ್ಟಿಯಾಗಿರುವ ಕಸದ ರಾಶಿಯನ್ನು ವಿಲೇವಾರಿ ಮಾಡದಿದ್ದಲ್ಲಿ ಕಸವನ್ನು ತೆಗೆದುಕೊಂಡು ಅಧಿಕಾರಿಗಳ ಮನೆ ಮುಂದೆ ಸುರಿಯುವುದಾಗಿ ಎಚ್ಚರಿಕೆ ನೀಡಿದರು.
ಅಷ್ಟೇ ಅಲ್ಲದೆ ಹೆಲ್ತ್ ಇನ್ಸ್‌ಪೆಕ್ಟರ್ ಕೊರತೆಯಿದ್ದು, ವಾರ್ಡ್‌ಗಳ ಸಮಸ್ಯೆಗೆ ಸರಿಯಾಗಿ ಅವರು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂತಹ ಅಧಿಕಾರಿಗಳನ್ನು ಅಮಾನತು  ಮಾಡುವಂತೆ ಒತ್ತಾಯಿಸಿದರು.
ಸದಸ್ಯ ಸುರೇಶ್‌ಕುಮಾರ್ ಮಾತನಾಡಿ, ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಗೊರೂರಿನ ಹೇಮಾವತಿ ಜಲಾಶಯದಿಂದ ಕುಡಿಯುವ ನೀರನ್ನು ನಗರಕ್ಕೆ ಒದಗಿಸುತ್ತಿರುವುದು ಸಾಕಾಗುತ್ತಿಲ್ಲ. ಈ ಹಿಂದೆ 80ರಿಂದ 1 ಲಕ್ಷ ನಗರದಲ್ಲಿ ಜನಸಂಖ್ಯೆ ಇದ್ದಾಗ ಜಲಾಶಯಿಂದ ಪೈಪ್‌ಲೈನ್ ಅಳವಡಿಸಲಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಾಗಿರುವುದು ಇಲ್ಲಿಗೆ ಅರಸೀಕೆರೆ ಮಾದರಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕು. ಈ ಬಗೆ ಸದಸ್ಯರೆಲ್ಲರೂ ಒಟ್ಟಾಗಿ ಮುಖ್ಯಮಂತ್ರಿ ಬಳಿ ನಿಯೋಗ ಬೇಕಾದರು ತೆರಳೊಣ ಎಂದರು.
ಹೆಚ್ಚಿರುವ ಬೀದಿನಾಯಿಗಳ ಉಪಟಳ:  ಸದಸ್ಯ ಯಶ್ವಂತ್ ಮಾತನಾಡಿ, ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ನಾಯಿಗಳನ್ನು ಹಿಡಿ ಸಂತಾನಹರಣ ಶಸ್ತ್ರಚಿಕಿತ್ಸೆ ಟೆಂಡರ್ ಕರೆಯಲಾಗಿತ್ತು. ಆದರೆ ಇದನ್ನು ಸರ್ಕಾರಿ ಪಶುವೈದ್ಯಕೀಯ ಕಾಲೇಜಿಗೆ ನೀಡುವ ಮುನ್ನ ಅದರ ಆಗು ಹೋಗುಗಳನ್ನು ಪರಿಶೀಲಿಸಿ ನೀಡಬೇಕು ಎಂದ ಅವರು, ನಗರ ನೀರು ಸರಬರಾಜು ವ್ಯವಸ್ಥೆಯಲ್ಲಿ ಎಚ್‌ಡಿಪಿಇ ಪೈಪ್‌ಗಳನ್ನು ಎಲ್ಲಾ ವಾರ್ಡ್‌ಗಳಿಗೆ ಅವಳಡಿಸುವಂತಹ ಅವಶ್ಯಕತೆ ಇಲ್ಲ. ಅವಶ್ಯಕತೆ ಇರುವಂತಹ ವಾರ್ಡ್‌ಗಳಲ್ಲಿ ಈ ಯೋಜನೆಯನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಈ ಹಿಂದೆ ನಗರಸಭೆಯಲ್ಲಿ ವಾಸ ದೃಢೀಕರಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ ಅದನ್ನು ಪ್ರಸ್ತುತ ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಆದ್ದರಿಂದ ಮತ್ತೆ ನಗರಸಭೆಯಲ್ಲಿಯೇ ವಾಸ ದೃಢೀಕರಣ ಪತ್ರ ಲಭ್ಯವಾಗುವಂತಾಗಬೇಕು ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಚ್.ಎಸ್.ಪ್ರಕಾಶ್, ಗೊರೂರಿನಿಂದ ಹಾಸನ ನಗರಕ್ಕೆ ನೀರನ್ನು ಒದಗಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಮತ್ತೊಂದು ಹೊಸ ಪೈಪ್‌ಲೈನ್‌ಗೆ ಯೋಜನೆಯನ್ನು ಈ ಹಿಂದೆ ಸಿದ್ದಪಡಿಸಿ, ಸಾಕಷ್ಟು ಕಾರ್ಯ ನಡೆಸಲಾಗಿದೆ. ಮತ್ತೆ ಈ ಯೋಜನೆಯನ್ನು ಮುಂದಿನ ಸಭೆಯಲ್ಲಿ ಇಟ್ಟು ಕ್ರಮಕೈಗೊಳ್ಳೋಣ ಎಂದರು.
ವಾಸ ದೃಢೀಕರಣ ಪತ್ರ ನೀಡಿ ದುರುಪಯೋಗ:   ವಾಸ ದೃಢೀಕರಣ ಪತ್ರವನ್ನು ನಾವು ಇಲ್ಲಿ ನಿಲ್ಲಿಸಿಲ್ಲ. ಆರ್‌ಟಿಐ ಅಡಿಯಲ್ಲಿ ಬರುವಂತಹ ಶಾಲೆಗಳಲ್ಲಿ ಕೆಲ ಪೋಷಕರು ಒಂದೇ ಹೆಸರಿನಲ್ಲಿ ಎರಡು ಮೂರು ವಾಸ ದೃಢೀಕರಣ ಪತ್ರವನ್ನು ನೀಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದದ್ದು ಬಯಲಾಗಿದ್ದರಿಂದ ಜಿಲ್ಲಾಧಿಕಾರಿಗಳೆ ನಗರಸಭೆಯಿಂದ ಒಂದೇ ಹೆಸರಿನಲ್ಲಿ ಬೇರೆ ವಾರ್ಡ್‌ಗಳಲ್ಲಿ ವಾಸವಾಗಿದ್ದಾರೆ ಎಂದು ದೃಢೀಕರಣ ಪತ್ರವನ್ನು ನೀಡಿದ್ದಾರೆ. ಇದರಿಂದ ದುರುಪಯೋಗವಾಗುತ್ತಿದ್ದರಿಂದ ಜಿಲ್ಲಾಧಿಕಾರಿ ಅವರೇ ನಿಲ್ಲಿಸುವಂತೆ ಹೇಳಿದ್ದಾರೆ ಎಂದರು.
ಸಭೆ ಪ್ರಾರಂಭವಾಗುವ ಮುನ್ನ ನಗರಸಭೆ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಸಭೆ ಇದಾಗಿದ್ದರಿಂದ ಎಲ್ಲರನ್ನು ಅಭಿನಂದಿಸಲಾಯಿತು. ನಂತರ ಇತ್ತೀಚೆಗೆ ನಿಧನರಾದ ನಗರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಪ್ರಕಾಶ್‌ದಾಸಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷೆ ಎಚ್.ಎಚ್.ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್‌ಪಾಷಾ, ಆಯುಕ್ತ ನಾಗಭೂಷಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.