ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯ
ಕ.ಪ್ರ.ವಾರ್ತೆ ರಾಮನಾಥಪುರ ಸೆ.20
ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯವಿದ್ದು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ತಂಡ ರೂಪದಲ್ಲಿ ಕಾರ್ಯಾಚರಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 14 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಶಾಲೆಯಲ್ಲಿರಬೇಕು. ಯಾರೂ ಕಡ್ಡಾಯ ಶಿಕ್ಷಣ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಒಂದೇ ರೀತಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ ಇಲಾಖೆ ಬಾಲಕಾರ್ಮಿಕ ಯೋಜನಾ ಸೊಸೈಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆಗಳು ಮಕ್ಕಳ ರಕ್ಷಣಾ ಘಟಕ ಸ್ವಯಂ ಸೇವಾ ಸಂಘಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದರಿಂದ ನಿರ್ಧಿಷ್ಟ ಗುರಿ ಸಾಧನೆಯಲ್ಲಿ ಸಂಪೂರ್ಣ ಯಶಸ್ಸು ಸಿಗಲಾರದು.
ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸಿ: ಬದಲಾಗಿ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರ ಸಮನ್ವಯತೆ ಸಾಧಿಸಿ ಪ್ರತಿ ತಿಂಗಳು ಆಯಾಯ ತಾಲೂಕುಗಳ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಬೇರೆ ಬೇರೆ ಮೂಲಗಳಿಂದಲೂ ಮಾಹಿತಿ ಪಡೆದು ಅರಿವು ಮೂಡಿಸಲು ಪ್ರಯತ್ನಿಸುವುದರಿಂದ ಪರಿಣಾಮಕಾರಿಯಾಗಿ ಕ್ರಮವಹಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮವೊಂದರಲ್ಲೇ 16 ಮಕ್ಕಳು ಶಾಲೆ ಬಿಟ್ಟು ದುಡಿಮೆಯಲ್ಲಿ ತೊಡಗಿದ್ದು ತಮ್ಮ ಗಮನಕ್ಕೆ ಬಂದಿದೆ. ಅವರನ್ನೆಲ್ಲಾ ಮರಳಿ ಶಾಲಾ ಕಾಲೇಜುಗಳಿಗೆ ಸೇರ್ಪಡೆಗೊಳ್ಳಿಸಲಾಗಿದೆ. ಜಿಲ್ಲೆಯ ಇತರೆಡೆಯು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಸಾಕಷ್ಟಿರಬಹುದು.
ತಿಂಗಳಾಂತ್ಯದಲ್ಲಿ ಶಾಲೆ ಬಿಟ್ಟ ಮಕ್ಕಳ ವಿವರ : ಈ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದೊಳಗಾಗಿ ಪ್ರತಿ ಶಾಲೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ವಿವರ ಸಿದ್ಧವಾಗಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಕ್ಕಳು ತಂದೆ ತಾಯಿ ಜತೆಯಲ್ಲಿಯೇ ಬೇರೆಯವರ ಜಮೀನಿನಲ್ಲಿ ದುಡಿಯುವಂತಿಲ್ಲ. ಯಾವ ಕೃಷಿ ಪದ್ಧತಿಯಲ್ಲಿ ಮಕ್ಕಳನ್ನು ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿದ್ದರೆ ಅದನ್ನು ತಾವು ಅಪಾಯಕಾರಿ ವೃತ್ತಿ ಎಂದು ಘೋಷಿಸುವುದಾಗಿ ಹೇಳಿದರು.
ಉಪ ವಿಭಾಗಾಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಹಿಂಜರಿಯಬಾರದು. ಯಾವುದೇ ಅಡ್ಡಿಗಳಿದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಬಾಲ ಕಾರ್ಮಿಕರ ರಕ್ಷಣೆಗಿರುವ ಕಾನೂನುಗಳು, ದುಡಿಸಿಕೊಳ್ಳುವವರಿಗಿರುವ ದಂಡನೆಗಳು ಬಾಲಕಾರ್ಮಿಕರ ರಕ್ಷಣೆಗೆ ಯಾರನ್ನು ಸಂಪರ್ಕಿಸಬೇಕೆಂಬ ವಿಷಯದ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಅವರು ತಿಳಿಸಿದರು.
ಇದೇ ವೇಳೆ ಬಾಲಕಾರ್ಮಿಕ ಯೋಜನ ಸೊಸೈಟಿ ನವೀಕರಣಕ್ಕೆ ಅನುಮತಿ ನೀಡಲಾಯಿತು.ಕಾರ್ಮಿಕ ಅಧಿಕಾರಿ ಪ್ರಹ್ಲಾದ್ ಈವರೆಗೆ ಸಂಸ್ಥೆಯಿಂದ ನಡೆಸಲಾಗಿರುವ ಚಟುವಟಿಕೆಗಳು, ದಾಖಲಾಗಿರುವ ಪ್ರಕರಣಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ನಾನಾ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

