ರೈತರಿಗೆ ಸಕಾಲದಲ್ಲಿ ಸಾಲ ದೊರೆಯುತ್ತಿಲ್ಲ..
ಕನ್ನಡಪ್ರಭ ವಾರ್ತೆ ಹಾಸನ ಸೆ. 21
ಸಕಾಲದಲ್ಲಿ ಬಡವರು ಮತ್ತು ರೈತರಿಗೆ ಸಾಲ ನೀಡದೇ ಬ್ಯಾಂಕ್‌ಗಳು ಅನ್ಯಾಯ ಎಸಗುತ್ತಿದ್ದರೆ, ಕೇಂದ್ರ ಸರ್ಕಾರದಿಂದ ಇಂದಿರಾ ಅವಾಸ್ ಯೋಜನೆಗೆ ಬಂದ ರು. 18 ಕೋಟಿ ಗಳನ್ನು ಫಲಾನುಭವಿಗಳಿಗೆ ನೀಡದೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.. ಕುಡಿಯುವ ನೀರು ಯೋಜನೆ ಸೇರಿದಂತೆ ಹಲವು ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದು ಜಿಲ್ಲೆಯ ನಾಲ್ವರು ಶಾಸಕರು ಕಿಡಿಕಾರಿದ್ದಾರೆ.
ಶನಿವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಎಚ್.ಎಸ್. ಪ್ರಕಾಶ್, ಕೆ..ಎಂ. ಶಿವಲಿಂಗೇಗೌಡ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರೇವಣ್ಣ ಮಾತನಾಡಿ, ಇಂದಿರಾ ಅವಾಸ್ ಯೋಜನೆಯಡಿ ಕೇಂದ್ರದಿಂದ ರು. 18 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಹ ಫಲಾನುಭವಿಗಳಿಗೆ ಹಣ ನೀಡಿಲ್ಲ. ಹಣ ಹಿಂದಕ್ಕೆ ಹೋಗುವ ಪರಿಸ್ಥಿತಿ ಇದೆ. ಹಣ ನೀಡದ ಪಿಡಿಒ ಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲದಿದ್ದರೇ ಸರಿ ಹೋಗುವುದಿಲ್ಲ. ಸೂಕ್ತ ನಿರ್ವಹಣೆ ಇಲ್ಲದೇ ರಸ್ತೆಗಳೆಲ್ಲಾ ಹಾಳಾಗಿವೆ. ಗ್ರಾಮೀಣ ಭಾಗದಲ್ಲಿ ರಸ್ತೆ ಇಲ್ಲ. ಬಸ್ಗ್‌ಳು ಇಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ಕಾರ್ಖಾನೆಗಳಿಗೆ ಬರುವ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುತ್ತಿವೆ. ಬ್ಯಾಂಕ್‌ಗಳಿಂದ ಸಾಲ ಸರಿಯಾಗಿ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಮೂಗರ್ಜಿ ಬರೆಯುವರಿಗೆ ಅವಕಾಶ: ಯಾವುದೇ ಬ್ಯಾಂಕಿನಲ್ಲಿ ಸಕಾಲದಲ್ಲಿ ಬಡವರು, ರೈತರಿಗೆ ಸಬ್ಸಿಡಿ ಸಾಲ ಸಿಗುತ್ತಿಲ್ಲ. ಉಳ್ಳವರಿಗೆ ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಹುಳುವುದು ತೆಗೆಯುವುದಕ್ಕೆ ಒಂದು ಕಾನೂನು, ರಸ್ತೆ ನಿರ್ಮಿಸುವುದಕ್ಕೆ ಮತ್ತೊಂದು ಕಾನೂನು ಇದೆ. ಅಧಿಕಾರಿಗಳು ತಪ್ಪು ಮಾಡುವುದರಿಂದ ಮೂಗರ್ಜಿ ಬರೆಯುವವರಿಗೆ ಅವಕಾಶ ದೊರೆಯುವಂತಾಗಿದೆ. ಕೆರೆಗಳಿಗೆ ಹೇಮಾವತಿ ನೀರು ಬಿಡದೇ ಅಂತರಜಲ ಅಭಿವೃದ್ಧಿಯಾಗಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಟೀಕಾ ಪ್ರಹಾರ ನಡೆಸಿದರು. ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಕೇಂದ್ರದ ಹಲವು ಯೋಜನೆಗಳ ಲಾಭ ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ. ಕಾಫಿ, ಏಲಕ್ಕಿ, ಮೆಣಸು ಮಳೆಯಿಂದ ನಷ್ಟವಾಗಿದೆ. ಪರಿಹಾರ ನೀಡಲು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದರು.
ರು. 75 ಕೋಟಿ ನಷ್ಟ:ಸರಿಯಾಗಿ ಮಳೆ ಬೀಳದ ಪರಿಣಾಮ ಅರಸೀಕೆರೆ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ರು. 75 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕುಗಳಲ್ಲಿ ಸುಮಾರು 6310 ಹೆಕ್ಟೇರ್‌ನಲ್ಲಿ ರು. 27.28 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಹೊಂಬೇಗೌಡ ಸಭೆಗೆ ತಿಳಿಸಿದರು.
ಬ್ಯಾಂಕ್ ಅಧಿಕಾರಿಗಳ ಪ್ರತ್ಯೇಕ ಸಭೆ: ಜಿಲ್ಲೆಯ ಲೀಡ್ ಬ್ಯಾಂಕ್‌ನಡಿ ಬರುವ 30 ಬ್ಯಾಂಕ್‌ಗಳ ಅಧಿಕಾರಿಗಳ ಸಭೆಯನ್ನು ಇನ್ನೆರಡು ವಾರಗಳಲ್ಲಿ ಪ್ರತ್ಯೇಕ ಸಭೆ ನಡೆಸಲಾಗುವುದು. ಸಭೆ ಬಹುತೇಕ ಬ್ಯಾಂಕ್‌ಗಳ ಅಧಿಕಾರಿಗಳು ಬಂದಿಲ್ಲ. ಆದ್ದರಿಂದ ಸಾಲ ವಿತರಣೆ ಮತ್ತಿತರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಹಾಗಾಗಿ ಮುಂದೆ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ಕರೆದು ಕೂಲಂಕಷವಾಗಿ ಚರ್ಚಿಸಲಾಗುವುದು. ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಬೇಕೆಂದು ಹೇಳಿದರು. ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿ ಚೌಡಯ್ಯ, ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಪಂ ಸಿಇಒ ಯು.ಪಿ. ಸಿಂಗ್, ಎಸ್ಪಿ ರವಿ ಡಿ. ಚನ್ನವಣ್ಣನವರ್, ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಉಪ ಕಾರ್ಯದರ್ಶಿ ಕರಿ ಯಪ್ಪ ಇದ್ದರು.
ಗೌಡರ ಗಂಭೀರ ಮುದ್ರೆಯೂ... ಅಧಿಕಾರಿಗಳ ನಿದ್ರೆಯೂ..
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರದ ನಾನಾ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ವಿಚಾರಗಳ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದರೆ, ಅಧಿಕಾರಿಗಳು ಫೇಸ್‌ಬುಕ್ ವೀಕ್ಷಣೆ, ಮೊಬೈಲ್ ಟಾಕ್ ಮಾತ್ರವಲ್ಲ, ನಿದ್ರೆಯಲ್ಲೂ ಮುಳುಗಿದ್ದರು.
ಇದು ಶನಿವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಡು ಬಂದ ದೃಶ್ಯ.
ಕೆಲವು ಅಧಿಕಾರಿಗಳು ಮೊಬೈಲ್, ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವ ಮೂಲಕ ಟೈಪ್‌ಪಾಸ್ ಮಾಡುತ್ತಿದ್ದರು. ಮತ್ತೆ ಕೆಲವು ಅಧಿಕಾರಿಗಳು ತಮಗೂ, ಸಭೆಗೂ ಯಾವುದೇ ಸಂಬಂಧವಿಲ್ಲದಂತೆ ನಿದ್ರೆಗೆ ಜಾರಿದ್ದರು.
ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ, ಎಚ್.ಕೆ.ಕುಮಾರಸ್ವಾಮಿ, ಎಚ್.ಎಸ್.ಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಡಿಚೌಡಯ್ಯ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್‌ಪಿ ರವಿ ಡಿ.ಚೆನ್ನಣ್ಣನವರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ನಿಮ್ಮಕ್ಕಳು ಯಾವ ಶಾಲೇಲಿ ಓದ್ತಾವರೆ ಹೇಳಿ ಸ್ವಾಮಿ..
ಕನ್ನಡಪ್ರಭ ವಾರ್ತೆ ಹಾಸನ ಸೆ. 21
ಪ್ರಸಂಗ-1: ಸ್ವಾಮಿ. ಮೊದಲು ನಿಮ್ಮಕ್ಕಳು ಯಾವ ಶಾಲೇಲಿ ಓದ್ತಾವರೆ ಅಂತ ಹೇಳಿ. ಅಮೇಲೆ ಬೇರೆಯವರ ಮಾತು...
ಶನಿವಾರ ಜಿಪಂನಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮೇಲಿನಂತೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಲು ತಡಬಡಾಯಿಸಿದ ಡಿಡಿಪಿಐ ಬಸವರಾಜು, ನಾನು ಮಾತ್ರ ಸರ್ಕಾರಿ ಶಾಲೇಲಿ ಓದಿದ್ದು. ನನ್ನ ಮಕ್ಕಳು ಎಂಜಿನಿಯರ್ ಓದುತ್ತಿದ್ದಾರೆ ಎಂದರು. ಇದಕ್ಕೆ ಸುಮ್ಮನಾಗದ ರೇವಣ್ಣ, ನಾನು ಕೇಳಿದ್ದು ನಿಮ್ಮಕ್ಕಳು ಯಾವ ಶಾಲೇಲಿ ಓದಿದರು ಹೇಳಿ ಅಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಲು ಡಿಪಿಪಿಐ ಮುಂದಾಗಲಿಲ್ಲ. ಅಸಮಾಧಾನಗೊಂಡ ರೇವಣ್ಣ, ಬುದ್ದಿಜೀವಿಗಳು ಹೇಳೋದು ಒಂದು, ಆಯ್ತು ಬಿಡಿ ಎಂದು ರೇವಣ್ಣ ಸುಮ್ಮನಾದರು.
ಪ್ರಸಂಗ-2: ಕೊಳಚೆ ನಿರ್ಮೂಲನ ಮಂಡಳಿ ಎಂಜಿನಿಯರ್ ಮನೆಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಲಾಂಭಿಸಿದರು. ಆಗ ರೇವಣ್ಣ, ರ್ರೀ... ಕಾರ್ಯಸೂಚಿ ಪುಸ್ತಕದಲ್ಲಿ ಇರುವ ತಮ್ಮ ಇಲಾಖೆ ಕಾರ್ಯಕ್ರಮದ ಎಲ್ಲಾ ಕಲಾಂಗಳಿಗೆ ಡ್ಯಾಸ್ ಹಾಕ್ಕಂಡ್ ಬಂದಿದ್ದೀರಿ. ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳ್ತಾ ಇದ್ದೀರಾಲ್ಲ ಸ್ವಾಮಿ ಎಂದಾಗ ದೇವೇಗೌಡರು ಸೇರಿದಂತೆ ಎಲ್ಲರು ನಗದೇ ಇರಲು ಸಾಧ್ಯವಾಗಲಿಲ್ಲ.
ಗುಮಾಸ್ತರು ಬಿಟ್ಟರೆ ಬೇರೆ ಯಾರು ಇಲ್ಲ: ಆಗ ಮಧ್ಯ ಪ್ರವೇಶಿಸಿದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ.ಕುಮಾರಸ್ವಾಮಿ, ಎಚ್.ಎಸ್. ಪ್ರಕಾಶ್, ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಯಲ್ಲಿ ಅಟೆಂಡರ್ ಮತ್ತು ಗುಮಾಸ್ತರು ಬಿಟ್ಟರೇ ಯಾರು ಇಲ್ಲ. ಇದೀಗ ಈ ಎಂಜಿನಿಯರ್ ಬಂದಿದ್ದಾರೆ. ಪರವಾಗಿಲ್ಲ ಕೆಲ್ಸ ಮಾಡ್ತಾವರೆ.
ಬಿಟ್ಟು ಬಿಡಿ ರೇವಣ್ಣನವರೇ ಎಂದು ಹೇಳಿದಾಗ ಮತ್ತೆ ನಗೆಗಡಲು. ಮತ್ತೆ ಮಾತನಾಡಿದ ರೇವಣ್ಣ, ನಾಯಿಗಳು ಮಕ್ಕಳನ್ನ ತಿಂದುಕೊಳ್ಳುತ್ತಿವೆ. ಗ್ರಾಮೀಣ ಭಾಗದಲ್ಲಿ ನಾಯಿಗಳ ಹಾವಳಿ ಸಿಕ್ಕಾಪಟ್ಟೆ ಆಗಿದೆ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಇಂದಿರಾ ಅವಾಸ್ ಯೋಜನೆಯಡಿ ಕೇಂದ್ರದಿಂದ ರು. 18 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಹ ಫಲಾನುಭವಿಗಳಿಗೆ ಹಣ ನೀಡಿಲ್ಲ. ಹಣ ಹಿಂದಕ್ಕೆ ಹೋಗುವ ಪರಿಸ್ಥಿತಿ ಇದೆ. ಹಣ ನೀಡದ ಪಿಡಿಒ ಗಳನ್ನು ಸೇವೆಯಿಂದ ಅಮಾನತು ಮಾಡಬೇಕು.
- ಎಚ್.ಡಿ.ರೇವಣ್ಣ, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

