ಪ್ರತಿಭಾ ಪುರಸ್ಕಾರ:ಅವಧಿ ವಿಸ್ತರಣೆ
ಹಾಸನ: ಕುರುಹಿನಶೆಟ್ಟಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಕ್ಟೋಬರ್ನಲ್ಲಿ ನಡೆಯುವ ಜಿಲ್ಲಾ ಕುರುಹಿನಶೆಟ್ಟಿ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.75, ದ್ವಿತೀಯ ಪಿಯುಸಿ ಮತ್ತು ಐಟಿಐನಲ್ಲಿ ಶೇ.70, ಡಿಪ್ಲೊಮೋ ಮತ್ತು ಪದವಿಯಲ್ಲಿ ಶೇ.60, ಬಿಇ, ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾದ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ ಕುರುಹಿನಶೆಟ್ಟಿ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಸೆ.30 ರವರೆಗೆ ವಿಸ್ತರಿಸಲಾಗಿದೆ. ಅರ್ಜಿಗಳು ಮಾರುತಿ ಎಲೆಕ್ಟ್ರಿಕಲ್ಸ್, ಯೂರೋಕಿಡ್ಸ್ ಎದುರು, ಎಂ.ಜಿ.ರಸ್ತೆ, ಹಾಸನ. ಇಲ್ಲಿ ದೊರೆಯಲಿದೆ. ವಿವರಕ್ಕೆ ದೂ.8951261033 ಸಂಪರ್ಕಿಸಬಹುದು.
ಅಂಧ ಮಕ್ಕಳಿಗೆ ಗಡಿಯಾರ ವಿತರಣೆ
ಹಾಸನ: ಲಯನ್ಸ್, ಟೈಟನ್ ಶೋರೂಂ ವತಿಯಿಂದ ನಗರದ ಎಂ.ಕೃಷ್ಣ ಅಂಧ ಶಾಲೆ ಮಕ್ಕಳಿಗೆ ಬ್ರೈಲ್ ಗಡಿಯಾರ ಉಚಿತವಾಗಿ ವಿತರಿಸಲಾಯಿತು. ಲಯನ್ಸ್ ಅಧ್ಯಕ್ಷ ಗಿರೀಶಕುಮಾರ್, ಕಾರ್ಯದರ್ಶಿ ಬಿ.ಸೋಮೇಶ್, ಖಜಾಂಚಿ ಆನಂದ್ ಶೆಟ್ಟಿ, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ 2014-15ನೇ ಸಾಲಿನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಹಾಸನದ ವಕೀಲ ಎಚ್.ಎಸ್.ಮಂಜುನಾಥಮೂರ್ತಿ ಮತ್ತು ಟೈಟನ್ ಶೋರೂಂ ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು.
ನೋಂದಣಿಗೆ ಅರ್ಜಿ ಆಹ್ವಾನ
ಹಾಸನ: ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ 11ನೇ ವರ್ಷಕ್ಕೆ ಕಾಲಿಟ್ಟಿದೆ. ಗ್ರಾಮೀಣ ಸಹಕಾರಿ ರೈತ ಸದಸ್ಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಸಾಧನೆ ಮಾಡಿದೆ. ಈ ಯೋಜನೆಯಡಿ 2013-14 ನೇ ಸಾಲಿನಲ್ಲಿ ಸದಸ್ಯರ ನೋಂದಣಿ ಮುಂದಿನ ಅ.15ಕ್ಕೆ ಕೊನೆಗೊಳ್ಳಲಿದೆ.ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿ 2013-14 ನೇ ಸಾಲಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರ ವಾರ್ಷಿಕ ವಂತಿಗೆ ಮೊತ್ತ 200 ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು ಕೂಡಲೇ ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಿಸಲು ಸಂಬಂಧಿಸಿದ ಸಹಕಾರ ಸಂಘದ ಕಾರ್ಯದರ್ಶಿಗಳನ್ನು ಭೇಟಿ ಮಾಡಲು ಸೂಚಿಸಲಾಗಿದೆ.
ಗಾಂಧಿ ಜಯಂತಿ ಆಚರಣೆಗೆ ಸಿದ್ಧತೆ
ಹಾಸನ: ಜಿಲ್ಲಾಡಳಿತದ ವತಿಯಿಂದ ಅ .2ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾತ್ಮಾಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಗರದ ಗಣ್ಯರು, ಸಾರ್ವಜನಿಕರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ ಕೋರಿದ್ದಾರೆ.
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಹಾಸನ: ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಹಾಯ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ ವಾರ್ತಾ ಇಲಾಖೆಯ ವತಿಯಿಂದ 2013-14ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಲ್ಯಾಪ್ಟಾಪ್, ್ಙಜಿಟಲ್ ಕ್ಯಾಮೆರಾ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ಪತ್ರಿಕೋದ್ಯಮ ಸಮೂಹ ಸಂವಹನ ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಗಳಿಸಿರಬೇಕು.ಅರ್ಹ ವಿದ್ಯಾರ್ಥಿಗಳು ತಮ್ಮ ಸ್ವ ವಿವರದೊಂದಿಗೆ ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ ನಕಲು, 2 ಭಾವಚಿತ್ರಗಳೊಂದಿಗೆ ಕಾಲೇಜು ಪ್ರಾಂಶುಪಾಲರ ಮೂಲಕ ಸೆ.30ರೊಳಗೆ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಭವನ, ಬಿ.ಎಂ.ರಸ್ತೆ, ಹಾಸನ-573201 ಇವರಿಗೆ ಕಳುಹಿಸುವಂತೆ ಕೋರಲಾಗಿದೆ.
ನಾಳೆ ವಿವಿಧ ಸ್ಪರ್ಧೆ
ಹಾಸನ: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2013ರ ಅಂಗವಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರಮೊಂದೇ ಕಾರಣವೇ ಎಂಬ ವಿಷಯ ಕುರಿತು ಚರ್ಚಾ ಸ್ಪರ್ಧೆ ಹಾಗೂ ಜಿಲ್ಲೆಯ ಪ್ರವಾಸಿ ಸ್ಥಳಗಳ ಕುರಿತು ಚಿತ್ರಕಲಾ ಸ್ಪರ್ಧೆ ಯನ್ನು ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸೆ .24ರಂದು ಬೆಳಿಗ್ಗೆ 11 ಕ್ಕೆ ನಗರದಗಂಧದಕೋಠಿಯಲ್ಲಿ ಇರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಆಯಾ ಕಾಲೇಜಿನ ಪ್ರಾಂಶುಪಾಲರಿಂದ ನಿಯೋಜನೆ ಪತ್ರ ಪಡೆದು ಸೆ. 23ರಂದು ಕಚೇರಿ ವೇಳೆಯಲ್ಲಿ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರ್.ಸಿ. ರಸ್ತೆ, ಹಾಸನ ಇವರ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಪ್ರತಿ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನವಿದ್ದು ಸೆ.27ರಂದು ಆಚರಿಸಲಾಗುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಹಾಸನ ಇವರ ದೂ. 08172-268862 ಇವರನ್ನು ಸಂಪರ್ಕಿಸಲು ಕೋರಿದೆ.
ಸಂಸ್ಕೃತ ಅಧ್ಯಯನದಿಂದ ಜ್ಞಾನ ವೃದ್ಧಿ: ಪ್ರಸನ್ನ ಎನ್.ಆರ್.ರಾವ್
ಹಾಸನ:ಸಂಸ್ಕೃತವನ್ನು ಹೆಚ್ಚು ಅಭ್ಯಸಿಸುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳುವಂತೆ ಧರ್ಮಸ್ಥಳ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಪ್ರಸನ್ನ ಎನ್.ಆರ್.ರಾವ್ ಸಲಹೆ ನೀಡಿದರು. ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು, ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸಂಸ್ಕೃತೋತ್ಸವದಲ್ಲಿ ಮಾತನಾಡಿದ ಅವರು, ಸಂಸ್ಕೃತವು ತನ್ನದೇ ಆದ ಮಹತ್ವ ಹೊಂದಿದ್ದು, ಪ್ರತಿ ಪದದಲ್ಲಿಯೂ ಮಹತ್ವದ ಅರ್ಥವನ್ನು ಸಂಸ್ಕೃತ ಹೊಂದಿದೆ ಎಂದು ಹೇಳಿದರು.
ಇತ್ತೀಚೆಗೆ ಸಂಸ್ಕೃತದ ಬದಲು ಇತರೆ ಭಾಷೆಗಳು ಹೆಚ್ಚಾಗುತ್ತಿವೆ. ಆದರೆ ಸಂಸ್ಕೃತವು ಎಲ್ಲಿ ಹೋದರೂ ಅವಶ್ಯಕವಾದ ಭಾಷೆಯಾಗಿದ್ದು, ಸರಿಯಾಗಿ ಅಭ್ಯಸಿಸುವ ಮೂಲಕ ಭಾಷೆಗೆ ಪ್ರಾವಿಣ್ಯತೆ ಪಡೆಯಬೇಕು. ತಪ್ಪು ಉಚ್ಛಾರಣೆಯಿಂದಾಗಿ ಭಾಷೆಯಲ್ಲಿ ಪ್ರಾವಿಣ್ಯತೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಪದವನ್ನು ಅರ್ಥ ಮಾಡಿಕೊಂಡು ಪದ ಬಳಕೆ ಮಾಡಿ ಭಾಷೆ ಬೆಳೆಸಬೇಕು ಎಂದರು. ಸಂಸ್ಕೃತಂ ಅಧ್ಯಕ್ಷ ಎಚ್.ಪಿ.ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಂತರಾಮು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

