ಮತ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ
ಕನ್ನಡಪ್ರಭ ವಾರ್ತೆ ಹಾಸನ ಸೆ.22
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಚುನಾವಣಾ ಸಂದರ್ಭದಲ್ಲಿ ಮಾತ್ರ ಈ ಪ್ರಕ್ರಿಯೆ ಚುರುಕುಗೊಳಿಸುವ ಬದಲು ಎಲ್ಲಾ ಸಂದರ್ಭದಲ್ಲೂ ಅರ್ಜಿ ಸಲ್ಲಿಸಿ ಮತದಾರರ ಗುರುತಿನ ಚೀಟಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವಿವಿಧ ಕಾರ್ಯ ಚಟುವಟಿಕೆಗಳು ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಮತ್ತಿತರ ವಿಷಯಗಳ ಕುರಿತು ಸಭೆ ನಡೆಸಿದ ಅವರು, ಮತದಾರರ ಪಟ್ಟಿಯ ಸಮರ್ಪಕವಾದ ಪರಿಷ್ಕರಣೆಯಾಗದ ಹೊರತು, ಮತದಾನ ಪ್ರಮಾಣ ಸಂಪೂರ್ಣವಾಗಿ ಸುಧಾರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.
ಒಂದು ಕಡೆ ಮಾತ್ರ ಇರಲಿ: ಪ್ರತಿಯೊಂದು ಮತಗಟ್ಟೆವಾರು ಈಗಿನಿಂದಲೇ ಮತದಾರರ ಪಟ್ಟಿಯಲ್ಲಿರುವ ಹೆಸರುಗಳು, ಹೊಸ ಸೇರ್ಪಡೆ, ತೆಗೆದುಹಾಕಬೇಕಾದ ಹೆಸರುಗಳ ಬಗ್ಗೆ ಗಮನ ಹರಿಸಬೇಕು. ಎರಡೆರಡು ಕಡೆಗಳಲ್ಲಿ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸಿಕೊಳ್ಳಬೇಕು, ಎಲ್ಲಾ ಅರ್ಹ ಮತದಾರರು ತಮ್ಮ ಹೆಸರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಅರಿವು ಹಾಗೂ ಪ್ರೇರೇಪಣೆ ನೀಡಬೇಕು ಎಂದು ಅನ್ಬುಕುಮಾರ್ ಸೂಚನೆ ನೀಡಿದರು.
ಶಿಕ್ಷಣ-ಸಹಭಾಗಿತ್ವ ಸಮಿತಿ ಬಗ್ಗೆ ಮೆಚ್ಚುಗೆ: ಚುನಾವಣಾ ಆಯೋಗ ಪ್ರತಿಯೊಬ್ಬ ಅರ್ಹರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಲು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯಿಂದ ವಿವಿಧ ಚಟುವಟಿಕೆ
ನಡೆಸಿ ಯಶಸ್ಸನ್ನು ಕಂಡಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂಬರುವ ಚುನಾವಣೆಗಳಲ್ಲೂ ಬಳಸಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಮತದಾರರ ಜಾಗೃತಿ ಚಟುವಟಿಕೆಗಳು ಪ್ರಾರಂಭವಾಗಬೇಕಿದ್ದು, ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಸ್ವೀಪ್ ಸಮಿತಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಮತದಾನ ಪ್ರಕ್ರಿಯೆಯಿಂದ ದೂರ ಸಲ್ಲ: ದೇಶದಾದ್ಯಂತ ಒಂದು ಕೋಟಿಗೂ ಅಧಿಕ ಮಂದಿ ಸರ್ಕಾರಿ ಅಧಿಕಾರಿ, ನೌಕರರು ಚುನಾವಣಾ ಕಾರ್ಯದಲ್ಲಿ ತೊಡಗಿರುತ್ತಾರೆ. ಆದರೆ ಹಲವರು ಮತದಾನ ಪ್ರಕ್ರಿಯೆಯಿಂದ ದೂರವೇ ಉಳಿಯುತ್ತಿದ್ದಾರೆ.
ಕಾರ್ಯ ಒತ್ತಡದಿಂದ ತಮ್ಮ ಹಕ್ಕು ಚಲಾವಣೆಗಿರುವ ಅವಕಾಶಗಳ ಬಗ್ಗೆ ಅವರಿಗಿರುವ ಅರಿವಿನ ಕೊರತೆಗಳು ಇದಕ್ಕೆ ಕಾರಣವಾಗಿರಬಹುದು.
ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಮತದಾನದ ದಿನ ಮತ ಚಲಾಯಿಸಲು ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಎಲ್ಲಾ ಇಲಾಖಾ ಅಧಿಕಾರಿಗಳಿಗೂ ಪತ್ರ ರವಾನಿಸಲಾಗುವುದು ಎಂದರು.
ಕಡ್ಡಾಯವಾಗಿ ಗ್ರಾಮಗಳಿಗೆ ತೆರಳಿ: ಕಂದಾಯ ಪರಿವೀಕ್ಷಕರು, ಗ್ರಾಮ ಸಹಾಯಕರು ತಮ್ಮ ಕಚೇರಿಯಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಗಮನಿಸುವ ಬದಲು ಕಡ್ಡಾಯವಾಗಿ ಗ್ರಾಮಗಳಿಗೆ ತೆರಳಿ ಪರಿಶೀಲಿಸಬೇಕು.
ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಹೆಸರು ತೆಗೆದು ಹಾಕಲು ಅಗತ್ಯವಿರುವ ನಮೂನೆಗಳು ಸುಲಭವಾಗಿ ದೊರೆಯುವಂತಾಗಬೇಕು ಎಂದರು.
ಹಿರಿಯರು ಮಾರ್ಗದರ್ಶನ ನೀಡಿ: ಮತದಾರರ ಪಟ್ಟಿ ಪರಿಷ್ಕರಣೆ, ಮೇಲ್ವಿಚಾರಣೆ ಜವಾಬ್ದಾರಿಯನ್ನು ಎರಡು ಉಪ ವಿಭಾಗಾಧಿಕಾರಿಗಳಿಗೆ ವಹಿಸಲಾಗಿದೆ.
ಅವರು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೆಲಸ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು.
ಪ್ರಕ್ರಿಯೆ ಚುರುಕುಗೊಳ್ಳಲಿ: ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್.ಗೋಪಾಲಕೃಷ್ಣ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನೂ ಚುನಾವಣಾ ಶಾಖೆಯಿಂದ ನೀಡಲಾಗುವುದು. ಆದರೆ ತಾಲೂಕು ಹಾಗೂ ಹೋಬಳಿ ಹಂತದಲ್ಲಿ ಪ್ರಕ್ರಿಯೆ ಚುರುಕುಗೊಳಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಕಾಯ್ದಿರಿಸಿಕೊಂಡು ಕಡೆ ಹಂತದ ಒತ್ತಡವನ್ನು ತಂದುಕೊಳ್ಳದೆ ಈಗಿನಿಂದಲೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.
ಸ್ಮಾರ್ಟ್ ಕಾರ್ಡ್ ಮಾದರಿ: ಚುನಾವಣಾ ತಹಸೀಲ್ದಾರ್ ಬಾಬುರಾವ್ ಅವರು ಮಾತನಾಡಿ, ಈಗಾಗಲೇ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸೂಕ್ತ ದಾಖಲೆಗಳೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
ಚುನಾವಣಾ ಆಯೋಗ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಗುರುತಿನ ಚೀಟಿ ನೀಡುವ ಚಿಂತನೆ ನಡೆಸಿದ್ದು, ಆನಂತರದಲ್ಲಿ ಗುರುತಿನ ಚೀಟಿ ನೀಡಲಾಗುವುದು ಎಂದರು. ಇದೇ ವೇಳೆ ಮಾಧ್ಯಮ ನಿರ್ವಹಣೆ ಮತ್ತು ನಿಗಾ ಸಮಿತಿ ಪುನಾರಚನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಉಪ ವಿಭಾಗಾಧಿಕಾರಿಗಳಾದ ಶ್ರೀವಿದ್ಯಾ, ಶರತ್, ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಇಲಾಖಾ ಅಧಿಕಾರಿಗಳು ಚುನಾವಣಾ ಶಿರಸ್ತೇದಾರರು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

