ಆಡಳಿತ ಮಂಡಳಿ ರದ್ದಿಗೆ ಆಗ್ರಹ
ಚನ್ನರಾಯಪಟ್ಟಣ: ಶ್ರೀನಿವಾಸಪುರದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತ ಮುಖಂಡರು ಆಡಳಿತ ಮಂಡಳಿ ರದ್ದು ಪಡಿಸುವಂತೆ ಒತ್ತಾಯಿಸಿದರು.
ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಸಿ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, ಆಡಳಿತ ಮಂಡಳಿ ರೈತ ವಿರೋಧಿ ನಿಲುವು ತಾಳುತ್ತಿದೆ ಎಂದು ಆರೋಪಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎನ್.ಜಯರಾಂ ಅವರು, ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿ, ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಶುಗರ್ ಕಂಪನಿಯಿಂದ ಒಪ್ಪಂದದ ಪ್ರಕಾರ ಲೀಸ್ ಹಣವನ್ನು ವಸೂಲಿ ಮಾಡುತ್ತಿಲ್ಲ. ಈ ವರ್ಷದ ಕಂತಿನ ಹೊರತಾಗಿಯೂ 5 ಕೋಟಿ ರು. ಬಾಕಿ ಬರಬೇಕಾಗಿದೆ. ಸದಸ್ಯರ ಸಭೆಯ ಒಪ್ಪಿಗೆಯನ್ನೂ ಪಡೆಯದೆ, ಸದಸ್ಯರ ಗಮನಕ್ಕೂ ತರದೇ ರಾಮಕೃಷ್ಣ ಎಂಬುವರ ಹೆಸರಿನಲ್ಲಿ ಹೇಮಾವತಿ ಚಾರಿಟಬಲ್ ಟ್ರಸ್ಟ್ ರಚಿಸಲಾಗಿದ್ದು, ಆಡಳಿತ ಮಂಡಳಿಗೆ ಈ ಅಧಿಕಾರ ಕೊಟ್ಟವರು ಯಾರೆಂದು ಪ್ರಶ್ನಿಸಿದರು.
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಲ್ಲಿ ಕೇವಲ 14 ಸಿಬ್ಬಂದಿ ಇದ್ದಾರೆ. ಇವರ ಉಸ್ತುವಾರಿಗೆ 18 ಜನರ ನಿರ್ದೇಶಕ ಸಮಿತಿ, ಅಧ್ಯಕ್ಷರು, ಅವರೊಂದಿಗೆ ಕಾರು ನೀಡುವ ಅಗತ್ಯವಿದೆ. ಈ ಸಮಿತಿ 36 ಲಕ್ಷ ರು. ಖರ್ಚು ಮಾಡಿದೆ. ಕಾರ್ಖಾನೆ ಹಿತದೃಷ್ಟಿಯಿಂದ ಸಮಿತಿಯನ್ನು ರದ್ದುಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್ ಮಾತನಾಡಿ, ಶಾಸಕ ಬಾಲಕೃಷ್ಣ ಅವರೇ ಈ ಹಿಂದೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಹಾಲಿ ನಿರ್ದೇಶಕರೂ ಆಗಿದ್ದಾರೆ. ಆದರೂ ರೈತರಿಗೆ ಅನ್ಯಾಯ ಆಗುತ್ತಿದೆ ಎಂದರೆ ಹೇಗೆ ಸುಮ್ಮನಿದ್ದೀರಿ ಎಂದು ಕೇಳಿದರು.
ಕಾರ್ಖಾನೆಯ ತ್ಯಾಜ್ಯದಿಂದ ಸುತ್ತಲ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆಡಳಿತ ಮಂಡಳಿಯು ಸರಿಯಾಗಿ ನಡೆದುಕೊಳ್ಳದ ಕಾರಣ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದರು.
ಮಾಜಿ ಅಧ್ಯಕ್ಷ ನಂಜುಂಡೇಗೌಡ, ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಗೋಪಾಲಸ್ವಾಮಿ, ಎಸ್.ಕೆ.ಶಿವರಾಂ, ವಿ.ಎನ್.ರಾಜಣ್ಣ, ಗಿರೀಶ್, ರೈತ ಸಂಘದ ಅನೇಕೆರೆ ರವಿ, ಹುಚ್ಚೇಗೌಡ ಮಾತನಾಡಿದರು. ಉಪಾಧ್ಯಕ್ಷ ಎಸ್.ಕೆ.ಶಿವಣ್ಣ ಹಾಗೂ ನಿರ್ದೇಶಕರು ಇನ್ನೂ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

