ಜಿಲ್ಲಾದ್ಯಂತ ಮುರುಟಿದ ಮೆಕ್ಕೆಜೋಳ
-ಪಿ.ರವಿಕುಮಾರ್
ಹಾಸನ: ಕಳಪೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ರೋಗ ಬಾಧೆಯಿಂದ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಇದರಿಂದ ಅನ್ನದಾತ ಕಂಗಲಾಗಿದ್ದಾನೆ. ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಹಾಗೂ ಸಾಂಪ್ರದಾಯಿಕ ಬೆಳೆ ಆಲೂ ಬೆಳೆಗೆ ಕಳೆದ ನಾಲ್ಕೈದು ವರ್ಷಗಳಿಂದ ಮಹಾಮಾರಿ ಅಂಗಮಾರಿ ರೋಗ ಕಾಣಿಸಿಕೊಂಡು ಕೈಸುಟ್ಟುಕೊಂಡಿದ್ದ ರೈತರು, ಪರ್ಯಾಯವಾಗಿ ಮೆಕ್ಕೆಜೋಳದತ್ತ ಮುಖ ಮಾಡಿದ್ದರು. ವಿಪರ್ಯಾಸ ಅಂದ್ರೆ ಈ ಬೆಳೆಗೂ ರೋಗ ಭಾದೆ ಹಾಗೂ ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಕೈ ತಪ್ಪುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಸ್ಥಿತಿ ಅತಂತ್ರವಾಗಿದೆ.
ಆಲೂ ಬೆಳೆ ಬಿಟ್ಟು ಪರ್ಯಾಯ ಬೆಳೆ ಬೆಳೆಯಿರಿ ಎಂದು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಅದರಂತೆ ಜಿಲ್ಲೆಯ ಬಹುತೇಕ ಕಡೆ ರೈತರು ಆಲೂ ಬೆಳೆ ಬಿಟ್ಟು ಮೆಕ್ಕೆಜೋಳದ ಮೊರೆ ಹೋಗಿದ್ದಾರೆ. ಆದರೆ, ಕಳಪೆ ಬಿತ್ತನೆ ಬೀಜದಿಂದಾಗಿ ಮೆಕ್ಕೆಜೋಳ ಬೆಳೆದರೂ, ನಷ್ಟ ಕಟ್ಟಿಟ್ಟಬುತ್ತಿ ಎನ್ನುವಂತಾಗಿದೆ ರೈತರಿಗೆ.
ರೈತರ ಕನಸು ನುಚ್ಚು ನೂರು: ಹಾಸನ, ಆಲೂರು ತಾಲೂಕಿನ ನೂರಾರು ಎಕರೆಗಳಲ್ಲಿ ಬಿತ್ತಿದ್ದ ಮೆಕ್ಕೆಜೋಳ ನಕಲಿ ಬೀಜದಿಂದಾಗಿ ಮೊಳಕೆ ಜೊತೆಯಲ್ಲೇ ಬಿಳಿಚಿಕೊಂಡಿದೆ. ಉತ್ತಮ ಫಸಲಿನ ನಿರೀಕ್ಷೆ ಕಂಡಿದ್ದ ರೈತರ ಕನಸು ಹುಸಿಯಾಗಿದೆ. ಅಷ್ಟೇ ಅಲ್ಲ, ಭೂಮಿಗೆ ಹಾಕಿದ ಬೀಜವೆಲ್ಲಾ ಮೊಳಕೆಯೊಡೆದಿಲ್ಲ. ಹೀಗಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಖರ್ಚು ಮಾಡಿದ ಹಣ ಮಣ್ಣು ಪಾಲಾಗಿದೆ. ಇದರಿಂದ ಯಾವ ಬೆಳೆ ಕೈಹಿಡಿಯುವುದೋ ಅನ್ನೋ ಅತಂಕದಲ್ಲಿ ರೈತರಿದ್ದಾರೆ.
ಕೆಲ ರೈತರು ಖಾಸಗಿ ಬೀಜ ಮಾರಾಟ ಕಂಪನಿಗಳಲ್ಲಿ ಬಿತ್ತನೆ ಬೀಜ ಖರೀದಿ ಮಾಡಿದ್ದರೆ, ಬಹುತೇಕ ರೈತರು ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಗಳಲ್ಲೇ ಸೀಡ್ಸ್ ಖರೀದಿ ಮಾಡಿದ್ದಾರೆ. ಇದಕ್ಕೆ ರಶೀತಿ ಸಹ ಪಡೆಯಲಾಗಿದೆ. ಭೂಮಿಗೆ ಬಿತ್ತಿದ ಪಯನೀರ್, ಗಂಗಾಕಾವೇರಿ ಮೊದಲಾದ ತಳಿಯ ಮೆಕ್ಕೆಜೋಳ ಅಲ್ಲೊಂದು ಇಲ್ಲೊಂದು ಮೊಳಕೆ ಒಡೆದಿದ್ದರೂ, ಬೆಳೆದು ಫಲ ನೀಡುವ ಲಕ್ಷಣ ಕಳೆದುಕೊಂಡಿದೆ. ಹೀಗಾದ್ರೆ ಅನ್ನದಾತ ಬದುಕಬೇಕೋ ಸಾಯಬೇಕೋ ಅನ್ನೋದು ರೈತರ ಪ್ರಶ್ನೆ.
ಸಂಕಷ್ಟದಲ್ಲಿ ಅನ್ನದಾತ: ಮೆಕ್ಕೆಜೋಳಕ್ಕೆ ಬಾರೀ ಬೇಡಿಕೆ ಇದ್ದು, ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ರೈತರು ಹಾಕಿದ ಹಣಕ್ಕೆ ನಷ್ಟವಿಲ್ಲ ಎಂಬಂತೆ ತಕ್ಕಮಟ್ಟಿಗೆ ಲಾಭವನ್ನು ರೈತರು ಪಡೆದು ಕೊಳ್ಳಬಹುದಿತ್ತು. ರೈತರ ಸಂಜೀವಿನಿಯಾಗಿದ್ದ ಮೆಕ್ಕೆ ಜೋಳಕ್ಕೆ ಕುತ್ತು ಉಂಟಾಗಿದೆ. ನಕಲಿ ವಸ್ತುಗಳ ಮಾರಾಟದಿಂದ ಅನ್ನದಾತ ನಿಜವಾಗಿಯೂ ಸಂಕಷ್ಟ ಎದುರಿಸುತ್ತಿದ್ದಾನೆ.
ಇದರಿಂದ ಜಿಲ್ಲೆಯ ರೈತರು ಆಕ್ರೋಶಗೊಂಡು, ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ನಷ್ಟಕ್ಕೆ ಪರಿಹಾರ ಕಟ್ಟಿಕೊಡುವಂತೆ ಒತ್ತಾಯಿಸಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ನಷ್ಟ ಅನುಭವಿಸಿರುವ ಕೃಷಿಕರಿಗೆ ಪರಿಹಾರ ಹಾಗೂ ಕಳಪೆ ಬೀಜ ವಿತರಿಸಿದವರ ವಿರುದ್ಧ ಶಿಸ್ತು ಕ್ರಮ ಅಗತ್ಯವಾಗಿ ಕೈಗೊಳ್ಳಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

