ಹಾಸನ

ಪೌರ ಕಾರ್ಮಿಕರಿಗೂ ಪಡಿತರ ಕಲ್ಪಿಸಿ

Published On :

ಕ.ಪ್ರ.ವಾರ್ತೆ ಹಾಸನ ಸೆ. 23
ಪೊಲೀಸರಿಗೆ ನೀಡಲಾಗುತ್ತಿರುವ ಪಡಿತರ ಮಾದರಿಯಂತೆ ಪೌರಕಾರ್ಮಿಕರಿಗೂ ಪಡಿತರ ವ್ಯವಸ್ಥೆ ಲಭ್ಯವಾಗಬೇಕು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ಆಗ್ರಹಿಸಿದರು.
ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿಂದ ಸೋಮವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ಅವರಿಗೆ ಪಡಿತರ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಸರ್ಕಾರದಿಂದ ಲಭ್ಯವಾಗಬೇಕು ಎಂದು ಹೇಳಿದರು.
ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, 1.71 ಲಕ್ಷಕ್ಕೆ  ಜನಸಂಖ್ಯೆ ಏರಿದೆ. ದಿನೇ ದಿನೇ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಉದ್ಭವವಾಗುತ್ತಿದ್ದು, ಪೌರ ಕಾರ್ಮಿಕರ ಸಂಖ್ಯೆಯೂ ಕ್ಷಿಣಿಸುತ್ತಿದೆ. ಪೌರ ಕಾರ್ಮಿಕರು ನಿವೃತ್ತಿ ಹೊಂದುವುದು ಕಡಿಮೆಯಾಗುತ್ತಿದೆ. ಅವರು ನಿವೃತ್ತಿ ಹೊಂದುವ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ಇವರು ಮಾಡುವ ಕೆಲಸ ಅತ್ಯಂತ ಕಷ್ಟಕರ. ಹೀಗಾಗಿ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಆ ಸಂದರ್ಭದಲ್ಲಿಯೇ ಭರಿಸುವಂತಾಗಬೇಕು. ಪ್ರಸ್ತುತ ಕಾರ್ಮಿಕರು ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಭರಿಸಿ ನಂತರ ಆ ಹಣವನ್ನು ಪಡೆಯಬೇಕಾಗಿದೆ. ಸರ್ಕಾರ ಕೇವಲ ಶೇ.60ರಷ್ಟು ಮಾತ್ರ ಹಣ ಪಾವಸುತ್ತಿದೆ. ಇದರಿಂದ ಪೌರ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದ್ದು, ಚಿಕಿತ್ಸೆಯ ಸಂದರ್ಭದಲ್ಲಿಯೇ ಸರ್ಕಾರ ವೆಚ್ಚವನ್ನು ಭರಿಸುವಂತಾಗಬೇಕು ಎಂದು ಹೇಳಿದರು.
ಹಿಂದೆ ಪೌರ ಕಾರ್ಮಿಕರಿಗೆ ವೇತನ ನೀಡುವಲ್ಲಿ ಬಹಳ ವಿಳಂಬವಾಗುತ್ತಿತ್ತು. ಇದರಿಂದ ಪೌರ ಕಾರ್ಮಿಕರು ಅನೇಕ ಸಲ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿದ್ದಾರೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪೌರ ಕಾರ್ಮಿಕರು ವೇತನ ಸರಿಯಾಗಿ ನೀಡುವಂತೆ ಪ್ರತಿಭಟನೆ ನಡೆಸಿದರು. ಆಗ ಹೆಗಡೆ ಅವರು ಪೌರ ಕಾರ್ಮಿಕರ ಪರವಾದ ನಿರ್ಣಯ ಕೈಗೊಂಡು ಸರಿಯಾಗಿ ವೇತನ ನೀಡುವ ಬಗ್ಗೆ ಅಧಿಕಾರಿಯೊಬ್ಬರನ್ನು ನೇಮಿಸಿದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಪೌರಕಾರ್ಮಿಕರ ಸೇವಾ ಭದ್ರತೆ ಹಾಗೂ ಸರಿಯಾದ ಸಮಯಕ್ಕೆ ವೇತನ ನೀಡುವ ಬಗ್ಗೆ ವಿಧಾನ ಪರಿಷತ್ ಹಾಗೂ ವಿಧಾನ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ.
ಪೌರ ಕಾರ್ಮಿಕರ ಬಗ್ಗೆ ಕಾಳಜಿಯಿಂದಲೇ ಸರ್ಕಾರಗಳು ಕೆಲಸ ನಿರ್ವಹಿಸುತ್ತಿವೆ ಎಂದ ಅವರು, ಕಾರ್ಮಿಕರ ಕೆಲಸ ಬಹಳ ಮಹತ್ವವಾಗಿದ್ದು, ಪೌರ ಕಾರ್ಮಿಕರ ಸಮಸ್ಯೆಯಿಂದಾಗಿ ನಗರದ ಸ್ವಚ್ಚತೆಗೆ ತೊಂದರೆ ಉಂಟಾಗುತ್ತಿದೆ ಎಂದು ಆಸಮಧಾನ ವ್ಯಕ್ತಪಡಿಸಿದರು.
ಕೆಲವು ಪೌರ ಕಾರ್ಮಿಕರು ಕಾಯಂಗೊಂಡಿದ್ದರೇ ಮತ್ತೆ ಕೆಲವರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪೌರ ಕಾರ್ಮಿಕರನ್ನು ಕಾಯಂ ಗೊಳಿಸುವ ಬಗ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿತ್ತು. ಪೌರ ಕಾರ್ಮಿಕರ ದೃಷ್ಟಿಯಿಂದ ಸರ್ಕಾರಗಳು ಕಾಯಂ ಗೊಳಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದ್ದರಿಂದ ಪೌರ ಕಾರ್ಮಿಕರಿಗೆ ಯಾವುದೇ ಕಾರಣಕ್ಕೆ ಧೃತಿಗೆಡಬಾರದು ಎಂದು ತಿಳಿಸಿದರು.
ನಗರಸಭೆ ಸದಸ್ಯ ಯಶವಂತ್ ಮಾತನಾಡಿ, ಜನರ ಸಮಸ್ಯೆಗಳ ಭಾರವನ್ನು ಇಳಿಸುವಂತ ಕಾರ್ಯವನ್ನು ಮಾಡುವುದೇ ಪೌರ ಕಾರ್ಮಿಕರು. ಹಬ್ಬಹರಿದಿನ ಅನಾರೋಗ್ಯ ಎನ್ನದೆ ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಅಂತವರ ಸಮಸ್ಯೆಗಳನ್ನು ನಿವಾರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಡಳಿತ ವರ್ಗ ಮತ್ತು  ಶ್ರಮಿಕ ವರ್ಗಗಳ ನಡುವೆ ಉತ್ತಮ ಭಾಂದವ್ಯ ಬೆಳೆಸುವ ಮೂಲಕ ಕೆಲಸವನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಅನಾರೋಗ್ಯಕ್ಕೆ ತುತ್ತಾಗುವ ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ ಸಾರಿಗೆ ಸಂಸ್ಥೆ ನೌಕರರಿಗೆ ಇರುವಂತೆ ಪೌರ ಕಾರ್ಮಿಕರಿಗೂ ಕ್ಲಿನಿಕಲ್ ವಿಂಗ್‌ಗಳ ವ್ಯವಸ್ಥೆ ಆಗಬೇಕು. ಜೊತೆಗೆ ಪೌರ ಕಾರ್ಮಿಕರ ಬಹು ದಿನಗಳ ಬೇಡಿಕೆಯಾದ ನಿವೇಶನ ಕಲ್ಪಿಸುವಲ್ಲಿ ಶಾಸಕರು ಮುಂದಾಗಬೇಕು ಎಂದು ಹೇಳಿದರು.
ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ ಎಂದ ಅವರು, ಸಾರ್ವಜನಿಕರು ಪೌರಕಾರ್ಮಿಕರಿಗೆ ಸ್ಪಂದಿಸಬೇಕು. ಪೌರಕಾರ್ಮಿಕರಿಗೆ ಹಣ ನೀಡಬೇಕು ಎಂಬ ಕಾರಣಕ್ಕೆ ಸಾರ್ವಜನಿಕರು ತಾವೇ ಕಸವನ್ನು ತೊಟ್ಟಿಯಲ್ಲಿ ಹಾಕುವ ಬದಲಾಗಿ ತೊಟ್ಟಿಯ ಹೊರಗೆ ಹರಡಿರುತ್ತಾರೆ. ಆದ್ದರಿಂದ ಸಾರ್ವಜನಿರು ಪೌರ ಕಾರ್ಮಿಕರ ಕೆಲಸಕ್ಕೆ ಸೂಕ್ತವಾಗಿ ಸ್ಪಂದಿಸಬೇಕಾದ್ದು ಅತಿ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕ ಮೇಲಯ್ಯ, ನಂಜಯ್ಯ, ಸತೀಶ್‌ಚಂದ್ರ, ನಿಂಗರಾಜು ಹಾಗೂ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಭಾನುಪ್ರಕಾಶ್, ಪ್ರಸನ್ನಕುಮಾರ್, ಸಮೀರ್, ವಿಜಯಕುಮಾರ್, ಅಂಬಿಕಾ ರವಿಶಂಕರ್, ಇಂದುಮತಿ, ಪಾರ್ವತಿ, ಉಷಾ, ಶಾರದಮ್ಮ, ಶುಭ, ಆರಿಫ್‌ಖಾನ್, ಆಯುಕ್ತ ನಾಗಭೂಷಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ್ ಇತರರು ಇದ್ದರು.

ದಿನಾಚರಣೆ ಬಹಿಷ್ಕರಿಸಿ, ಪ್ರತಿಭಟನೆ
ಕ.ಪ್ರ.ವಾರ್ತೆ ಸಕಲೇಶಪುರ ಸೆ. 23
ಪೌರಕಾರ್ಮಿಕ ದಿನಾಚರಣೆಯನ್ನು ಪೌರಕಾರ್ಮಿಕರೇ ಕೆಲಕಾಲ ಬಹಿಷ್ಕರಿಸಿದ ಘಟನೆ ಸೋಮವಾರ ನಡೆಯಿತು. ಸರ್ಕಾರದ ಆದೇಶದಂತೆ  ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಆದಿ ದ್ರಾವಿಡ ಯುವಕರ ಸಂಘ ನೇತೃತ್ವದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಪೌರಕಾರ್ಮಿಕರು, ಬೇಡಿಕೆ ಈಡೇರಿಸುವವರೆಗೆ ದಿನಾಚರಣೆ ಬೇಡ.
ಪಟ್ಟಣದ ಸ್ವಚ್ಛತೆ ಹೊಣೆ ಹೊತ್ತಿರುವ ನಾವು ತೀರ ನಿಷ್ಕೃಷ್ಟವಾಗಿ ಬದುಕು ನಡೆಸುತ್ತಿದ್ದೇವೆ. ವಾಸಿಸಲು ಮನೆಯಾಗಲಿ, ನೌಕರಿಯ ಬಗ್ಗೆ ನಿಖರತೆಯಾಗಲಿ ಇಲ್ಲದೆ, ದಿನಂಪ್ರತಿ ಪೌರಕಾರ್ಮಿಕರು ಆತಂಕದ ನಡುವೆ ಬದುಕ ಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಪೌರಕಾರ್ಮಿಕರು ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡುವವರೆಗೆ ಕಾರ್ಯಕ್ರಮ ನಡೆಸುವುದು ಬೇಡ ಎಂಬ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ಬಹುದಿನಗಳ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಈ ಬಗ್ಗೆ ನಿಮ್ಮೊಂದಿಗೆ ಕಾರ್ಯಕ್ರಮದ ನಂತರ ಮಾತುಕತೆ ನಡೆಸಲಾಗುವುದು. ಆದ್ದರಿಂದ ಕಾರ್ಯಕ್ರಮಕ್ಕೆ ಹಾಜರಾಗಿ ಎಂದು ಕೋರಿದರು. ಅಧ್ಯಕ್ಷರ ಭರವಸೆಯಂತೆ ಪ್ರತಿಭಟನೆ ಕೈಬಿಟ್ಟ ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿಭಟನೆ ನೇತೃತ್ವವನ್ನು ಆದಿದ್ರಾವಿಡ ಯುವಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ತಾಲೂಕು ಅಧ್ಯಕ್ಷ ಸಿ.ನಂಜ ಇತರರು  ಇದ್ದರು.

'ಪೌರ ಕಾರ್ಮಿಕರ ಬಗ್ಗೆ ಅಸಡ್ಡೆ ಸಲ್ಲ'
ಆಲೂರು: ನಮ್ಮೆಲ್ಲರ ಏಳಿಗೆ ಹಾಗೂ ಪಟ್ಟಣದ ಸ್ವಚ್ಚತೆಗಾಗಿ ದುಡಿಯುವ ಪೌರಕಾರ್ಮಿಕರ ದಿನಾಚರಣೆ ಸಂತೋಷದ ವಿಚಾರವೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು. ಅವರು ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ, ರಾಜ್ಯ ಸರ್ಕಾರಗಳು ಮಲ ಹೊರುವ ಪದ್ಧತಿಯನ್ನು ರದ್ದುಗೊಳಿಸಿದ್ದರೂ ದೇಶದ ಕೆಲವು ಭಾಗಗಳಲ್ಲಿ ಆ ಪದ್ಧತಿ ಇನ್ನೂ ಇರುವುದು ಬೇಸರದ ಸಂಗತಿ. ಅವರೂ ಸಹ ನಮ್ಮಂತೆ ಮನುಷ್ಯರು ಪೌರ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ನುಡಿದರು.
ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಕಡಿಮೆ ಸಂಬಳಗಳಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ವೇತನ ಹೆಚ್ಚಳ ಸೇರಿದಂತೆ ಕಾಯಂ ನೌಕರರಾಗಿ ಪರಿಗಣಿಸುವಂತೆಯೂ ಒತ್ತಾಯಿಸಿದರು.
ಪಟ್ಟಣದಲ್ಲಿ ವ್ಯವಸ್ಥಿತ ಒಳ ಚರಂಡಿ ಇಲ್ಲದ ಕಾರಣ ಸಮಸ್ಯೆಗಳು ಉದ್ಭವಿಸುತ್ತಿದ್ದು ಒಳ ಚರಂಡಿ ವ್ಯವಸ್ಥೆಗೆ 15 ಕೋಟಿ ರು. ಅಂದಾಜು ವೆಚ್ಚದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಮಂಜೂರಾತಿಗಾಗಿ ಕಾಯುತ್ತಿದ್ದೇವೆಂದರು.
ಪಪಂ ಸದಸ್ಯ ಶಿವಣ್ಣ, ಮಂಜುನಾಥ್, ಜಯಣ್ಣ, ಜಾಫರ್, ಗಂಗಾಧರ್, ವೆಂಕಟೇಗೌಡ, ಕಾರ್ಯದರ್ಶಿ ಗೋಪಿ, ವಾಸುದೇವ್ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕ ಚಿನ್ನರಂಗಸ್ವಾಮಿ, ಸುಬ್ಬಮ್ಮರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.