ಹಾಸನ

ದೊಡ್ಡಾಸ್ಪತ್ರೆಗೆ ಅನಾರೋಗ್ಯ!

Published On :

-ಪಿ.ರವಿಕುಮಾರ್
ಹಾಸನ: ಇಲ್ಲಿನ ಶ್ರೀಜಯಚಾಮರಾಜೇಂದ್ರ ಆಸ್ಪತ್ರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದೆ.  ಮೂಲಭೂತ ಸೌಲಭ್ಯ ಹಾಗೂ ಸ್ವಚ್ಚತೆಯ ಕೊರತೆಯಿಂದ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ನಾನಾ ಭಾಗಗಳಿಂದ ದೊಡ್ಡಾಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ವಿಪರ್ಯಾಸ ಅಂದ್ರೆ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗಿಗಳು ಅನುಭವಿಸುತ್ತಿರುವ ಯಾತನೆ ಹೇಳುವಂತಿಲ್ಲ.
ಪ್ರತಿ ನಿತ್ಯ ಜಿಲ್ಲಾಸ್ಪತ್ರೆಗೆ ಸುಮಾರು 1500ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಮಂಡ್ಯ ಸೇರಿದಂತೆ ಇತರೆ ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಈ ಪೈಕಿ 150 ರಿಂದ 200 ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ವನವಾಸ ಅನುಭವಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.  ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಳದೊಂದಿಗೆ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಹಾಸಿಗೆಗಳ ಕೊರತೆಯಿಂದಾಗಿ ಒಂದೊಂದು ಹಾಸಿಗೆಯಲ್ಲಿ ಇಬ್ಬರು ಮಲಗಿ ಚಿಕಿತ್ಸೆಯನ್ನು ಪಡೆಯುವಂತಾಗಿದೆ. ಆಸ್ಪತ್ರೆಯಲ್ಲಿ ಔಷಧಿಯನ್ನು ಉಚಿತವಾಗಿ ನೀಡಬೇಕು ಎಂಬ ನಿಯಮವಿದ್ದರೂ  ಹೆರಿಗೆಗೆ ಬರುವವರಿಂದ ಕೆಲವರು ಹಣವನ್ನು ಪಡೆಯುತ್ತಿದ್ದಾರೆ. ಹಾಸಿಗೆ ಕೊರತೆಯಿಂದಾಗಿ ರೋಗಿಗಳು ನೆಲದ ಮೇಲೆ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂತ್ರಪಿಂಡ ವೈಫಲ್ಯ ಇರುವವರಿಗೆ ಡಯಾಲಿಸ್ ಮಾಡಲು ಆಸ್ಪತ್ರೆಯಲ್ಲಿ 8 ಡಯಾಲಿಸಿಸ್ ಯಂತ್ರಗಳಿವೆ. ವೈದ್ಯರು ಈ 8 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಾರೆ. ಆದರೆ ರೋಗಿಗಳು ಡಯಾಲಿಸಿಸ್ ಮಾಡಿಸಲು ಹೋದರೇ ಗಂಟೆ ಗಟ್ಟಲೆ ಕಾಯುವಂತಹ ಪರಿಸ್ಥಿತಿ ಇದೆ. ಮೂತ್ರಪಿಂಡ ಪರೀಕ್ಷೆಗೆ ನಾನಾ ಸಮಸ್ಯೆಗಳು ಇವೆ ಎಂದು ನೆಪ ಹೇಳಿ ಖಾಸಗಿ ಆಸ್ಪತ್ರೆಗಳಿಗೆ ಅಂಥ ರೋಗಿಗಳನ್ನು ಕಳುಹಿಸಲಾಗುತ್ತಿದೆ.
ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ರೋಗಿಗಳು ಬಿಲ್ ಪಾವತಿ ಮಾಡಲು ಹೋಗಿ ಹೆಚ್ಚು ಹೊತ್ತು ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿಯಿದೆ. ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಬಿಲ್ ಪಾವತಿ ಮಾಡುವ ಕೌಂಟರ್‌ನಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಸರದಿ ಸಾಲಿನಲ್ಲಿ ಹೆಚ್ಚು ಸಮಯ ಕಾದು ಹಣ ಪಾವತಿಸಬೇಕಾಗಿದೆ. ಇದರಿಂದ ಹೆಚ್ಚು ಸಮಯ ಸಾಲಿನಲ್ಲಿ ನಿಂತು ಕಾಯುವಂತಹ ಪರಿಸ್ಥಿತಿ ಉಂಟಾಗಿ ರೋಗಿಗಳು ಶಾಪ ಹಾಕುವಂತಾಗಿದೆ.
ಅಷ್ಟೇ ಅಲ್ಲದೆ ಶವಾಗಾರದಲ್ಲಿರುವ ಎರಡು ಕೋಲ್ಡ್ ಸ್ಟೋರೇಜ್ ಪ್ರಿಡ್ಜ್ ಪೈಕಿ ಒಂದು ಕೆಟ್ಟು ಹೋಗಿ ವರ್ಷಗಳೇ ಕಳೆಯುತ್ತಿದ್ದರೂ  ಇದುವರೆಗೂ ಅದನ್ನು ರಿಪೇರಿ ಮಾಡಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಶವಗಳನ್ನು ಅದರೊಳಗೆ ಇಡಲು ಸಾಧ್ಯವಾಗುತ್ತಿಲ್ಲ. ಕಲ್ಲಿನ ಬೆಂಚ್ ಮೇಲೆ ಶವಗಳನ್ನು ಮಲಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ವೇಳೆ ಕಾರ್ಯನಿರ್ವಹಿಸುವ ವೈದ್ಯರ ಸಂಖ್ಯೆಯೂ ಕಡಿಮೆ ಇರುವುದರಿಂದ ಸೂಕ್ತ ಸಮಯಕ್ಕೆ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಸಾವು ನೋವು ಹೆಚ್ಚಾಗಿ ಸಂಭವಿಸುತ್ತಿವೆ. ಅಲ್ಲದೆ ರಾತ್ರಿ ವೇಳೆ ಕಾವಲುಗಾರರ ಸಮಸ್ಯೆ ಉಂಟಾಗಿದ್ದು, ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಭಯಪಡುವಂತಾಗಿದೆ.
ಕಾವಲುಗಾರರಿಲ್ಲದ ಕಾರಣ ಆಸ್ಪತ್ರೆ ಆವರಣದಲ್ಲಿ ಆಗಿಂದಾಗೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದೂ ಉಂಟು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.