ಹಾಸನ

28 ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ

Published On :

ಹಾಸನ: ನಗರದಲ್ಲಿ ಸೆ.28 ರಂದು ಮಾಜಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾ ವೇಶ ಏರ್ಪಡಿಸಲಾಗಿದೆ ಎಂದು ಬಿಜೆಪಿ ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು ತಿಳಿಸಿದ್ದಾರೆ. ನಗರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು, ಪಕ್ಷದ ಪದಾಧಿಕಾರಿಗಳು ಪ್ರತಿ ಮತಗಟ್ಟೆಯಿಂದಲೂ ಇಬ್ಬರು ಸದಸ್ಯರು  ಕಡ್ಡಾಯವಾಗಿ ಭಾಗವಹಿಸಲು ಸೂಚಿಸಬೇಕು ಎಂದು ಹೇಳಿದರು. ಹಾಸನ ನಗರದಲ್ಲಿ 6 ಶಕ್ತಿ ಕೇಂದ್ರಗಳಿದ್ದು  ವಾರ್ಡ್‌ವಾರು ಕಾರ್ಯಕರ್ತರ ಪಟ್ಟಿಯನ್ನು  ಸಿದ್ದಪಡಿಸಬೇಕು ಎಂದು ತಿಳಿಸಿದರು.  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಷ್ಟ್ರದೆಲ್ಲೆಡೆ  ನರೇಂದ್ರಮೋದಿ ಮುಂದಿನ ಪ್ರಧಾನಿ ಎಂದು ಹೊಸ ಅಲೆ ಯುಂಟಾಗಿದೆ ಪ್ರತಿಯೊಬ್ಬರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಗುರುಪ್ರಸಾದ್, ಪ್ರಸನ್ನಕುಮಾರ್, ಶಶಿಕುಮಾರ್ ಇತರರು ಇದ್ದರು.

28 ರಂದು ಸರ್ವ ಸದಸ್ಯರ ಸಭೆ  
ಹಾಸನ: ದಿ ಇಂಡಿಯನ್ ಕಾಫಿ ಮಾರ್ಕೇಟಿಂಗ್ ಕೋ ಆಪರೇಟಿವ್ ಸಂಸ್ಥೆಯ ಸರ್ವ ಸದಸ್ಯರ ಸಭೆಯನ್ನು  ಸೆಪ್ಟೆಂಬರ್ 28 ರಂದು ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂಸ್ಥೆ ಅಧ್ಯಕ್ಷ ಡಿ.ಬಿ.ಸುಬ್ಬೇಗೌಡ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಎಲ್ಲ ಸದಸ್ಯರು ಸಕಾಲಕ್ಕೆ ಸಭೆಗೆ ಹಾಜರಾಗುವಂತೆ ಕೋರಿದೆ.  

ಅರ್ಜಿ ಆಹ್ವಾನ
ಹಾಸನ: ಜಿಲ್ಲಾ ನೆಹರು ಯುವ ಕೇಂದ್ರ 2012-13 ನೇ ಸಾಲಿಗಾಗಿ ಯುವ ಜನತೆಯಿಂದ, ಸಂಘ-ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ರಚನಾತ್ಮಕ  ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಯುವಕ-ಯುವತಿ, ಮಹಿಳಾ ಮಂಡಳಿಗಳಿಗೆ ಸಂಘ-ಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅತ್ಯುತ್ತಮ ಸಂಘ- ಮಂಡಳಿ ಎಂದು  ಆಯ್ಕೆಯಾಗುವ ಸಂಘ ಅಥವಾ ಮಂಡಳಿಗೆ ಪ್ರಶಸ್ತಿ ಪತ್ರ ಹಾಗೂ ಹತ್ತು ಸಾವಿರ ನಗದು ನೀಡಲಾಗುವುದು.  ಸಂಘ-ಮಂಡಳಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸಂಘ, ಮಂಡಳಿಯು ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿತವಾಗಿರಬೇಕು. ಜಿಲ್ಲಾ ನೆಹರು ಯುವ ಕೆಂದ್ರಕ್ಕೆ ಸಂಯೋಜನೆ ಗೊಂಡಿರಬೇಕು. ಸಾಮಾಜಿಕ, ಶೈಕ್ಷಣಿಕ, ಕ್ರಿಯಾತ್ಮಕ  ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ, ಗ್ರಾಮ ನೈರ್ಮಲ್ಯ ಕುಟುಂಬ ಕಲ್ಯಾಣ, ಏಡ್ಸ್, ಇತರೆ ಜನಪರ ಕಾರ್ಯ ಕ್ರಮಗಳ ಮೂಲಕ ಸಮುದಾಯದ  ಅಭ್ಯುದಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಘ ಮಂಡಳಿಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸ ಬಹುದಾಗಿದೆ. ಅರ್ಜಿ ನಮೂನೆಯನ್ನು ಸಾಲಗಾಮೆ ರಸ್ತೆಯಲ್ಲಿರುವ (ಆಕಾಶವಾಣಿ  ಹಿಂಭಾಗ) ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಪಡೆದು  ದಾಖಲಾತಿ ಲಗತ್ತಿಸಿ ಅಕ್ಟೋಬರ್ 20 ರೊಳಗೆ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ.

ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ 3812 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.72 ಅಡಿ, 36.832 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 150 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 50 ಕ್ಯುಸೆಕ್ ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3167.58 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು ನಾಲೆಗೆ 115 ಕ್ಯುಸೆಕ್ ಒಟ್ಟು  1.404 ಟಿಎಂಸಿ ನೀರು ಸಂಗ್ರಹವಾಗಿದೆ.
ಮಳೆ ವಿವರ: ಸಕಲೇಶಪುರ 7.2, ಬಾಳ್ಳುಪೇಟೆ 3.4, ಯಸಳೂರು 7, ಶುಕ್ರವಾರಸಂತೆ 2.1, ಮಾರನಹಳ್ಳಿ 5, ಹಾನಬಾಳು 3.2, ಹೆತ್ತೂರು 3ಮಿ.ಮೀ ಮಳೆಯಾಗಿದೆ.

ದೀನದಯಾಳ್ ಜನ್ಮ ದಿನಾಚರಣೆ
ಹಾಸನ: ಯುವಜನತೆ ಪಂಡಿತ್ ದೀನದಯಾಳ್ ಅವರ ತ್ಯಾಗ, ಬಲಿದಾನ ತತ್ವ, ಸಿದ್ಧಾಂತ, ಆದರ್ಶ   ಅಳವಡಿಸಿಕೊಳ್ಳುವಂತೆ ಬಿಜೆಪಿ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಹೇಳಿದರು. ನಗರ ಬಿಜೆಪಿ ಏರ್ಪಡಿಸಿದ್ದ ದೀನದಯಾಳ್ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,  ದೀನದಯಾಳರು 1916 ರಲ್ಲಿ ರಾಜಸ್ಥಾನದ ದನಿಕೆ ಗ್ರಾಮದಲ್ಲಿ ಭಗವತಿ ಪ್ರಸಾದ್ ಹಾಗೂ ರಮಾಪ್ಯಾರಿ ಅವರ ಜೇಷ್ಠ ಪುತ್ರನಾಗಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ ತಾಯಿ ಕಳೆದುಕೊಂಡು ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ ಅವರಿಗೆ ಬಡತನದ ನೋವು ತಿಳಿದಿತ್ತು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ಅವರು ತತ್ವ ಜ್ಞಾನಿ ಹಾಗೂ ದೀನ ದಲಿತರ ತೇಜಸ್ವಿಯಾಗಿದ್ದರು. ಗಣಿತದಲ್ಲಿ ನಿಪುಣರೂ ಆಗಿದ್ದರು ಎಂದರು. ನಗರ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ ದೀನದಯಾಳ್‌ರ ಜನ್ಮ ದಿನ ಆಚರಿಸಿದರೆ ಸಾಲದು, ಅವರ ತತ್ವ ಸಿದ್ಧಾಂತ ಅಳವಡಿಸಿಕೊಂಡು ಪಕ್ಷ ಸಂಘಟಿಸಲು ಪ್ರತಿಯೊಬ್ಬರು ಪಣತೊಡಬೇಕು ಎಂದರು. ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಪ್ರಸನ್ನ ಕುಮಾರ್ ಇದ್ದರು.

ನಿವೇಶನಕ್ಕೆ ಆಗ್ರಹ
ಹಾಸನ: ನಗರದ ಎಸ್.ಎಂ.ಕೃಷ್ಣ ನಗರದಲ್ಲಿ ವಿವೇಚನಾ ಕೋಟಾದಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷ ಎಚ್.ಎಂ.ಶಿವಣ್ಣ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೃತ ಯೋಧರ ಪತ್ನಿಯರಿಗೆ ವಿವೇಚನಾ ಕೋಟಾದಡಿ ರಿಯಾಯ್ತಿ ದರದಲ್ಲಿ  ನಿವೇಶನ ಮಂಜೂರು ಮಾಡಬೇಕೆಂದು ಕೋರಲಾಗಿದೆ.ಜೀವಿತದ ಕಡೆಗಾಲದಲ್ಲಾದರೂ ಸ್ವಂತಮನೆ ಹೊಂದಬೇಕೆಂಬ ಅವರ ಆಸೆಯನ್ನು ಈಡೇರಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.