ಹಾಸನ

ಅಧಿಕಾರಿಗಳ ವರದಿಯೇ ಕಾರಣ

Published On :

ಕ.ಪ್ರ.ವಾರ್ತೆ ಹಾಸನ ಸೆ. 25
ಅರಸೀಕೆರೆ ತಾಲೂಕಿನಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲವೆಂದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳು ನೀಡಿರುವ ವರದಿಯೇ ಕಾರಣ ಎಂದು ಸಹಕಾರ ಸಚಿವ ಮಹದೇವಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾಲೂಕಿನಲ್ಲಿ ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದೆ. ಯಾವುದೇ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿ ಎದುರಾಗಿದೆ. ನೀರಿನ ತೇವಾಂಶ ಕೊರತೆಯಿಂದ ಸುಮಾರು ನಾಲ್ಕೂವರೆ ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ಸುಳಿಬಿದ್ದು ನಾಶವಾಗಿದ್ದರೂ ಅರಸೀಕೆರೆ ತಾಲೂಕು ಬರಗಾಲ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಲ್ಲ. ಇದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳು ನೀಡಿದ ವರದಿಯೇ ಕಾರಣ ಎಂದು ಪ್ರತಿಕ್ರಿಯಿಸಿದರು.
ಬರಪೀಡಿತ ಪಟ್ಟಿಯಿಂದ ಅರಸೀಕೆರೆ ತಾಲೂಕನ್ನು ಕೈ ಬಿಟ್ಟಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರೊಂದಿಗೆ ಚರ್ಚಿಸಿ ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದೆಂದು ಭರವಸೆ ನೀಡಿದರು.
ಕೇರಳ ಮಾದರಿಯಲ್ಲಿ:  ತಾಲೂಕಿನಲ್ಲಿ ತೆಂಗಿನ ಮರಗಳು ಸುಳಿ ಬಿದ್ದು ನಾಶಮೊಂದಿರುವ ಬಗ್ಗೆ ಅಧ್ಯಯನ ನಡೆಸಿದ ಕೇಂದ್ರ ತಂಡದ ಗೋರಕ್‌ಸಿಂಗ್ ಸಮಿತಿ ವರದಿಯನ್ನು ಕಾಯುತ್ತಿದ್ದು ವರದಿ ಬಂದ ನಂತರ ಕೇರಳ ಮಾದರಿಯಲ್ಲಿ ರೈತರಿಗೆ ಆತ್ಮಸ್ಥೈರ್ಯವನ್ನು ತುಂಬುವ ದೆಸೆಯಲ್ಲಿ ಹಾಳಾದ ಮರಗಳಿಗೆ ಸೂಕ್ತ ಪರಿಹಾರ ಹಾಗೂ ಮರು ಸಸಿ ನೆಡಲು ಹಣ ನೀಡುವ ಚಿಂತನೆ ನಡೆಸಲಾಗಿದೆ ಎಂದರು.
ಸಹಕಾರ ಸಂಘಗಳ ಸದಸ್ಯರಿಗೆ ಯಶಸ್ವಿನಿ ಯೋಜನೆಯಡಿ ನೊಂದಣಿಯಾದರೆ 3 ತಿಂಗಳ ನಂತರ ಚಿಕಿತ್ಸೆ ಸೌಲಭ್ಯಕ್ಕೆ ಅರ್ಹತೆ ಇತ್ತು ನಮ್ಮ ಸರ್ಕಾರ ಮರುದಿನದಿಂದಲೇ ಅನುಮತಿ ನೀಡಿದೆ ಎಂದ ಅವರು, ಪರಿಶಿಷ್ಟ, ಜಾತಿ, ಪಂಗಡದ 9 ಲಕ್ಷ ಸದಸ್ಯರಿಗೆ ಷೇರು ಹಣವನ್ನು ಸರಕಾರ ಭರಿಸಿದೆ ಎಂದು ತಿಳಿಸಿದರು.
ರು. 1700 ಕೋಟಿ ಸಾಲ ಮನ್ನಾ:  ಸಹಕಾರ ಸಂಘಗಳಲ್ಲಿ ಯಶಸ್ವಿನಿ ಯೋಜನೆಯಡಿ ನೊಂದಣಿ ಮಾಡಿಕೊಂಡ ಸದಸ್ಯರು ಮರುದಿನದಿಂದಲೇ ಚಿಕಿತ್ಸೆಯ ಪ್ರಯೋಜನ ಪಡೆಯಲು ಅರ್ಹರೆಂಬ ನಿಯಮವನ್ನು ನಮ್ಮ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ. ರೈತರ ಸಾಲ ಮನ್ನಾ ಯೋಜನೆಯಡಿ 25 ಸಾವಿರದಂತೆ 4 ಲಕ್ಷ ಸಾಲಗಾರರಿಗೆ 1700 ಕೋಟಿ ರು. ಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.
ಸಹಕಾರ ಸಂಘಗಳಲ್ಲಿ ಸಾಲ ವಿತರಣೆಯ ವೇಳೆ ತಾರತಮ್ಯ ಕಂಡುಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೆಲ ಸಂದರ್ಭಗಳಲ್ಲಿ ಒತ್ತಡದ ಕಾರಣದಿಂದಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ಚನ್ನರಾಯಪಟ್ಟಣ ತಾಲೂಕಿಗೆ ಅತೀ ಹೆಚ್ಚು ಸಾಲ ಮಂಜೂರು ಮಾಡಿರುವ ಬಗ್ಗೆ ತಮ್ಮಲ್ಲಿ ಮಾಹಿತಿ ಇದೆ. ಇಂತಹ ವ್ಯತ್ಯಾಸಗಳು ಸಂಭವಿಸದಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು ರೈತರಿಗೆ ಸಾಲ ಸೌಲಭ್ಯದ ವಿತರಣೆಯಲ್ಲಿ ವಿಳಂಭ ಮಾಡುವುದು ರೈತರನ್ನು ಸತಾಯಿಸುವುದು ಸಂಬಂಧಿಸಿದಂತೆ ಇತರೆ ದೂರುಗಳು ಕೇಳಿಬಂದಲ್ಲಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನುಡಿದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾಲಮನ್ನಾ ಯೋಜನೆಯ ಸೌಲಭ್ಯ ಪಡೆದಿರುವ ರೈತರಿಗೆ ಸಾಲ ವಿತರಿಸುವ ಸಂಬಂಧ ಶೀಘ್ರದಲ್ಲಿಯೇ ಆದೇಶ ನೀಡಲಾಗುವುದು. ಸಹಕಾರ ಸಂಘಗಳ ಮೂಲಕ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಇತರೆ ಕೃಷಿ ಉಪಕರಣಗಳನ್ನು ಸೂಕ್ತ ಕಾಲದಲ್ಲಿ ಒದಗಿಸಲು ಸೂಚಿಸಲಾಗುವುದು ಎಂದ ಅವರು ಸರ್ಕಾರ ರೈತಪರ ಯೋಜನೆಗಳನ್ನು ರೂಪಿಸುವ ಮೂಲಕ ಅವರ ಹಿತಕಾಯಲು ಬದ್ಧರಿರುವುದಾಗಿ ಸ್ಪಷ್ಟಪಡಿಸಿದರು.
ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ:  ಅರಸೀಕೆರೆ - ಹಾಸನ ರಸ್ತೆ ಕಳೆದ ಎರಡು ದಶಕಗಳಿಂದ ಹಾಳಾಗಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಸ ಬೇಕಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ರಾಜಕೀಯ ಕಾರಣಗಳಿಂದಾಗಿ ಜನರು ದಿನನಿತ್ಯ ಸಮಸ್ಯೆ ಎದುರಿಸಬೇಕಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಾಸನ ಜಿಲ್ಲೆಯಲ್ಲಿ ರಸ್ತೆ ಹಾಳಾಗಿದೆ ಎಂದರೆ ಏನು ಹೇಳಬೇಕು ಅಂತಾನೇ ನನಗೆ ಗೊತ್ತಾಗುತ್ತಿಲ್ಲ ಎಂದ ಅವರು ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಪರಮೇಶ್, ಸಹಕಾರ ಅಭಿವೃದ್ಧಿ ಅಧಿಕಾರಿ ದಯಾನಂದ್, ಕೆಪಿಸಿಸಿ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೇವಿರಪ್ಪ(ಶೇಖರಪ್ಪ), ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ನಗರ ಉಪಾಧ್ಯಕ್ಷ ಮಂಜು, ನೂರ್ ಅಹಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಂದೂರು ರವಿ, ಪ್ರಧಾನ ಕಾರ್ಯದರ್ಶಿ ಭೈರಗೊಂಡನಹಳ್ಳಿ ನಿರಂಜನ್, ಎಪಿಎಂಸಿ ಮಾಜಿ ಅಧ್ಯಕ್ಷ ದೇಶಾಣಿ ಆನಂದ್, ಜಮೀಲ್ ಅಹಮದ್, ಮುಖಂಡ ಯೂನಸ್, ಕೋಡಿಹಳ್ಳಿ ರಘು, ವಿಎಸ್‌ಎಸ್‌ಎನ್ ಅಧ್ಯಕ್ಷ ಹಾಗೂ ವಕೀಲ ಮೋಹನ್‌ಕುಮಾರ್, ಬೆಳುವಳ್ಳಿ ಮಹದೇವಪ್ಪ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.