ಬಾಳೆಗಿಡ ನೆಟ್ಟು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಸಕಲೇಶಪುರ ಸೆ. 26
ಪಟ್ಟಣದಿಂದ ಬೇಲೂರನ್ನು ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆ ಖಂಡಿಸಿ ನಮೋ ಬ್ರಿಗೇಡ್ ನೇತೃತ್ವದಲ್ಲಿ ಅರೇಹಳ್ಳಿ ಬೀದಿ, ಕುಡುಗರಹಳ್ಳಿ, ಆಚಂಗಿ ಬಡಾವಣೆಯ ನಾಗರಿಕರು ಹಾಗೂ ಆಟೋ ಚಾಲಕರು ರಾಜ್ಯ ಹೆದ್ದಾರಿಯಲ್ಲಿ ಬಾಳೆಗಿಡವನ್ನು ನೆಟ್ಟು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಬಂದ್ ಮಾಡುವ ಮೂಲಕ ಗುರುವಾರ ಪ್ರತಿಭಟನೆ ನಡೆಸಿದರು.
್ಲ ನಮೋ ಬ್ರಿಗೇಡ್ನ ಮುಖಂಡ ಗಿರೀಶ್ಕಡಬನಹಳ್ಳಿ ಮಾತನಾಡಿ, ಪಟ್ಟಣದಿಂದ ಐತಿಹಾಸಿಕ ಬೇಲೂರನ್ನು ಸಂಪರ್ಕಿಸುವ ರಸ್ತೆಯು ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ದಿನನಿತ್ಯ ಇಲ್ಲಿ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ತಿರುಗಾಡುತ್ತಿದ್ದು ಜೊತೆಗೆ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಹ ದಿನನಿತ್ಯ ಈ ನರಕಸದೃಶ್ಯ ರಸ್ತೆಯಲ್ಲೇ ತಿರುಗಾಡಬೇಕಾಗಿರುತ್ತದೆ.
ಜೀವ ಭಯ: ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದ್ದು ಕೇವಲ ರಸ್ತೆಯ ಪಳೆಯುಳಿಕೆ ಮಾತ್ರ ಉಳಿದಿರುತ್ತದೆ. ರಸ್ತೆಗಳಲ್ಲಿ ಕೇವಲ ಗುಂಡಿಗಳೇ ಇರುವುದರಿಂದ ವಾಹನಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಈಡಾಗುತ್ತಿವೆ. ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದ್ದು ರಸ್ತೆಯಲ್ಲಿ ಸಂಚರಿಸುವವರು ಜೀವ ಭಯದಿಂದ ಸಂಚಾರ ಮಾಡುವಂತಾಗಿದೆ. ಶಾಸಕ ಎಚ್.ಕೆ ಕುಮಾರಸ್ವಾಮಿ ಸಹ ಪಕ್ಕದ ಬೇಲೂರಿನಿಂದಲೇ ಇಲ್ಲಿಗೆ ಬಂದು ಈದೀಗ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.
ಆದರೆ ಅವರ ಕಣ್ಣಿಗೆ ಈ ರಸ್ತೆಯ ಅವ್ಯವಸ್ಥೆ ಕಾಣದಿರುವುದು ಇಲ್ಲಿನ ನಾಗರಿಕರ ದುರದೃಷ್ಟ. ಬಹಳ ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಗ್ಯಾಸ್ ವಿತರಕರ ಉಗ್ರಾಣ ನಿರ್ಮಿಸಲಾಗಿದ್ದು, ಇದರಿಂದ ದಿನನಿತ್ಯ ನೂರಾರು ವಾಹನಗಳು ಸಿಲಿಂಡರ್ಗಳನ್ನು ತೆಗೆದುಕೊಂಡು ಹೋಗಲು ಬರುತ್ತಿದ್ದು ಇದರಿಂದಲೂ ಸಹ ರಸ್ತೆಯ ಪರಿಸ್ಥಿತಿ ಹದಗೆಡಲು ಕಾರಣವಾಗಿರುತ್ತದೆ.
ಗ್ಯಾಸ್ ಗೋಡನ್ನಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದ್ದು ತಕ್ಷಣ ಈ ಉಗ್ರಾಣವನ್ನು ಜನಸಂದಣಿ ಇಲ್ಲದ ಜಾಗಕ್ಕೆ ಸ್ಥಳಾಂತರಿಸಬೇಕು ಹಾಗೂ ಅತಿ ಶೀಘ್ರದಲ್ಲಿ ಇಲ್ಲಿಯ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.
ನಮೋ ಬ್ರಿಗೇಡ್ ಮುಖಂಡ ಸಂದೇಶ್ಶೆಟ್ಟಿ, ರಾಜಣ್ಣ, ಕೌಶಿಕ್, ಬಿರಡಹಳ್ಳಿ ಹರೀಶ್, ಸಂತೋಷ್, ಧರ್ಮೇಶ್, ಆಟೋ ಚಾಲಕರಾದ ಲೋಕೇಶ್, ಚೇತನ್, ಬಡಾವಣೆಯ ಪ್ರಮುಖರಾದ ಸೀತಾರಾಂ ಶೆಟ್ಟಿ, ಕೃಷ್ಣ ಶೆಟ್ಟಿ ಮುಂತಾದವರು ಹಾಜರಿದ್ದರು.
ಪ್ರತಿಭಟನೆಯ ವೈಶಿಷ್ಟ್ಯ: ರಸ್ತೆಯಲ್ಲಿ ಬಾಳೆ ಗಿಡ ಹಾಗೂ ಭತ್ತದ ಪೈರನ್ನು ನಾಟಿ ಮಾಡಿ ರಸ್ತೆಯನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಿದ ಪ್ರತಿಭಟನಕಾರರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಸಕರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಹಿರಿಯ ಅಧಿಕಾರಿಗಳ ಗೈರುಹಾಜರಿಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪುಟ್ಟಹನುಮಂತರಾಜು ಮತ್ತು ಜಾಫರ್ ಶರೀಫ್ ಆಗಮಿಸಿ ಅತೀ ಶೀಘ್ರದಲ್ಲಿ ರಸ್ತೆ ನಿರ್ಮಿಸುವ ಬಗ್ಗೆ ಭರವಸೆ ನೀಡಿದರು.
ಆದರೆ ಇವರ ಮಾತಿನಿಂದ ತೃಪ್ತರಾಗದ ಪ್ರತಿಭಟನಕಾರರು ಶಾಸಕರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಆದರೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕರು ಸ್ಥಳಕ್ಕೆ ಆಗಮಿಸುವುದು ತಡವಾಗಿದ್ದರಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಆಯಿತು.
ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿಕೆ: ಬ್ಯಾದನೆಯಿಂದ ಕೆರೋಡಿವರೆಗೆ ಸುಮಾರು 16.5 ಕೋಟಿ ರು. ವೆಚ್ಚದಲ್ಲಿ ನೂತನ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು ನವೆಂಬರ್ ಒಳಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು.
ಬ್ಯಾದನೆಯಿಂದ ತೇಜಸ್ವಿ ಚಿತ್ರಮಂದಿರದ ವರೆಗಿನ ಸುಮಾರು 7 ಕಿಮೀ ದೂರವನ್ನು ಶಾಸಕರ ನಿಧಿಯ ಹಣವನ್ನು ಬಳಸಿಕೊಂಡು ಇನ್ನೆರಡು ದಿನಗಳಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.
ಸಕಲೇಶಪುರ ಪಟ್ಟಣದಲ್ಲೇ 16 ಸಾವಿರಕ್ಕೂ ಹೆಚ್ಚು ಮಂದಿ ಗ್ಯಾಸ್ ಸಂಪರ್ಕ ಪಡೆದಿದ್ದು ಆದ್ದರಿಂದ ನಾವು ಸಹ ಇದರ ಸಂಬಂಧಪಟ್ಟ ಇಲಾಖೆಗೆ ನೂತನ ಗ್ಯಾಸ್ ಏಜೆನ್ಸಿ ನೀಡುವಂತೆ ಮನವಿ ಮಾಡಿದ್ದೇವೆ.
ಆದರೆ ಟೆಂಡರ್ನ ತಾಂತ್ರಿಕ ದೋಷದಿಂದ ಇನ್ನು ಈ ಭಾಗಕ್ಕೆ ಮತ್ತೊಂದು ಏಜೆನ್ಸಿ ಮಂಜೂರಾಗಿಲ್ಲ. ಎರಡನೇ ಟೆಂಡರ್ನಲ್ಲಿ ಇಲ್ಲಿಗೆ ಮತ್ತೊಂದು ಗ್ಯಾಸ್ ಏಜೆನ್ಸಿ ಬರುವುದು ಖಚಿತ ಹಾಗೂ ಈ ಬಡಾವಣೆಯಲ್ಲಿರುವ ಗ್ಯಾಸ್ ಗೋಡೋನ್ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

