ಹಾಸನ

ಬುಡಕಟ್ಟು ಜನಾಂಗ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಹಾಸನ ಸೆ. 26
ಬುಡಕಟ್ಟು ಜನಾಂಗದವರನ್ನು ಕ್ರಿಮಿನಲ್‌ಲ್ಟ್ರೈಪ್ಸ್ ಎನ್ನುವುದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ನೇತೃತ್ವದಲ್ಲಿ ಬುಡಕಟ್ಟು ಜನಾಂಗದವರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕೊರಗ, ಹಕ್ಕಿಪಿಕ್ಕಿ, ಹರಿಣ ಶಿಕಾರಿ, ಜೇನುಕುರುಬ, ಸಿದ್ಧಿ, ಹಸಲರು ಹಾಗೂ ಮುಂತಾದ ಸಮುದಾಯದವರು ನಿತ್ಯ ನಿರಂತರ ಸಾಮಾಜಿಕ ಅವಹೇಳನೆಗೆ ಒಳಗಾಗಿದ್ದಾರೆ. ಬುಡಕಟ್ಟು ಜನಾಂಗದವರನ್ನು ಕ್ರಿಮಿನಲ್‌ಲ್ಟ್ರೈಪ್ಸ್ ಎನ್ನಬಾರದೆಂಬ ಕಾನೂನಿದ್ದರೂ ಇಂದಿಗೂ ಅಧಿಕಾರಿಗಳು ಈ ಪದ ಬಳಕೆ ಮಾಡಿ ಜಾತಿ ನಿಂದನೆ ಮಾಡುತ್ತಿದ್ದಾರೆ. ನಮ್ಮ ಮೇಲೆ ಅಪರಾಧಿಗಳು, ದರೋಡೆಕೋರರು, ಕಳ್ಳರು, ಅಸ್ಪೃಶ್ಯರು ಹಾಗೂ ಇತ್ಯಾದಿ ಆಪಾದನೆಗಳು ಇನ್ನು ಮುಂದುರೆಯುತ್ತಿದೆ. ಹಿಂಸೆ ದೌರ್ಜನ್ಯಗಳು ಇನ್ನು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕವಾಗಿ ಹಿಂದುಳಿದ ಜನಾಂಗಗಳು:  ಬುಡಕಟ್ಟು ಜನಾಂಗದ ಹಕ್ಕಿಪಿಕ್ಕಿ, ಕೊರಗ, ಅಸಲರು, ಮೇದರು, ಸಿದ್ಧಿ, ಜೇನುಕುರುಬ, ಸೋಲಿಗ, ಮೇಲೆಕುಡಿಯ, ಗೌಂಡ್ಲು, ಬೆಟ್ಟದ ಕುರುಬ, ಎರವ, ನಾಯ್ಕ್, ಗೋಸ್ಲೆ ಜನಾಂಗದವರ ಹಕ್ಕುಗಳನ್ನು ಹಾಗೂ ಸರ್ಕಾರದಿಂದ ದೊರೆಯುವಂತಹ ಸೌಕರ್ಯಗಳನ್ನು ನಾಯಕ ಸಮುದಾಯದವರು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಈ ಜನಾಂಗಗಳು ಹಿಂದುಳಿದಿವೆ ಎದು ಆರೋಪಿಸಿದರು.
ಅರಣ್ಯ ಹಕ್ಕು ಮತ್ತು ಭೂಮಿಯ ಹಕ್ಕು ಕಾಯ್ದೆಯಡಿ ಹಕ್ಕಿಪಿಕ್ಕಿ ಜನಾಂಗದ ಭೂ ನಿರ್ಗತಿಕ ಕುಟುಂಬಗಳಿಗೆ ಭೂಮಿ ಹಕ್ಕು ಪತ್ರ ವಿತರಿಸುವುದು, ಕೆಲವು ಸಮುದಾಯಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಈ ಯೋಜನೆ ಜಾರಿಯಲ್ಲಿದೆ. ಯೋಜನೆಯನ್ನು ಹಕ್ಕಿಪಿಕ್ಕಿ ಜನಾಂಗಕ್ಕೂ ಉಳಿದ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು. 5ನೇ ಉಪಜಾತಿ ಅನ್ವಯ ವಿಶೇಷ ಅನುದಾನದಡಿಯಲ್ಲಿ ಗಿರಿಜನ ಉಪಯೋಗ ಯೋಜನೆಯನ್ನು ಕಾನೂನಾಗಿ ಮಾರ್ಪಡಿಸಿ ಆಂಧ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿ ಟಿ ಎಸಸ್ಪಿ ಯನ್ನು ಜಾರಿಗೊಳಿಸಬೇಕು ಎಂದರು.
ಕುಟುಂಬಗಳನ್ನು ಒಕ್ಕಲೆಬ್ಬಿಸಕೂಡದು: ಬಡುಕಟ್ಟು ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರು.ವರೆಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನ ನೀಡಬೇಕು. ಅರಣ್ಯ ಕಿರು ಉತ್ಪನ್ನಗಳು ಬುಡಕಟ್ಟು ಸಮುದಾಯಗಳಿಗೆ ಸಂಪೂರ್ಣ ಬಳಕೆಯಾಗಬೇಕು ಮತ್ತು ಅರಣ್ಯದಂಚಿನಲ್ಲಿ ಹಿಂದಿನಿಂದಲೂ ವಾಸ ಮಾಡುತ್ತಿರುವ ಈ ಸಮುದಾಯದ ಕುಟುಂಬಗಳನ್ನು ಒಕ್ಕಲೆಬ್ಬಿಸದೆ ಅಲ್ಲಿರುವವರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಅರಣ್ಯಮೂಲ ಬುಡಕಟ್ಟುಗಳಿಗೆ ಒಳ ಮೀಸಲಾತಿ ನೀಡಿ ಬ್ಯಾಕ್‌ಲಾಗ್ ಉದ್ಯೋಗ ಭರ್ತಿ ಮಾಡುವುದು, ಗಿರಿಜನ ಆಶ್ರಮ ಶಾಲೆಗಳನ್ನು ನವೋದಯ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವುದು. ಅರಣ್ಯ ಮೂಲಬುಡಕಟ್ಟುಗಳು ವಾಸಿಸುತ್ತಿರುವ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಸಂವಿಧಾನದ 5ನೇ ಪರಿಚ್ಛೇದದ ಪ್ರದೇಶಗಳಾಗಿ ಘೋಷಣೆ ಮಾಡುವುದು, ಪಂಚಾಯತ್‌ರಾಜ್ ಕಾಯ್ದೆಯಲ್ಲಿ (ಪಿಇಎಸ್‌ಎ) ವಿಶೇಷ ಕಾಯ್ದೆಯನ್ನು ಮೇಲಿನ ಜಿಲ್ಲೆಗಳಲ್ಲಿ ಜಾರಿಗೆ ತರಬೇಕು.
ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಚಾಮರಾಜನಗರ ಮುಂತಾದ ಜಿಲ್ಲೆಗಳಲ್ಲಿ ವಿಶೇಷ ಸುಸಜ್ಜಿತ ಆಸ್ಪತ್ರೆಗಳನ್ನು ಬುಡಕಟ್ಟು ಸಮುದಾಯಗಳಿಗಾಗಿ ತೆರೆಯಬೇಕು. ಜಿಲ್ಲೆಯಲ್ಲಿ ಇರುವ ಹಕ್ಕಿಪಿಕ್ಕಿ ಜನಾಂಗದವರಿರುವ ಅಂಗಡಿಹಳ್ಳಿ ಗ್ರಾಮವನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಕೂಡಾ ಈ ಗ್ರಾಮವನ್ನು ಕಡೆಗಣಿಸುತ್ತಿದೆ ಎಂದು ದೂರಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ:  ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದ ತಾಣವಾಗಿದೆ. ಇಲ್ಲಿನ ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಗರ್ಭಿಣಿಯರು ನಾನಾ ರೋಗಗಳಿಗೆ ತುತ್ತಾಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 6 ಬುಡಕಟ್ಟು ಸಮುದಾಯಗಳು ವಾಸಿಸುತ್ತಿದ್ದು, 75 ಸಾವಿರ ಜನಸಂಖ್ಯೆ ಹೊಂದಿದ್ದು, ಇಷ್ಟು ಜನರ ಕಲ್ಯಾಣಕ್ಕೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿಯನ್ನು ಆರಂಭಿಸಬೇಕು ಎಂದರು.
ಹಕ್ಕಿಪಿಕ್ಕಿ ಜನಾಂಗದ ವಸತಿ ರಹಿತ, ನಿವೇಶನ ರಹಿತರಿಗೆ ಸ್ಥಳವಕಾಶ ದೊರೆಯುವ ಭಾಗದಲ್ಲಿ ನಿವೇಶನ ಮತ್ತು ವಸತಿಯ ಜೊತೆ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಾಡಿ ಮತ್ತು ಕಾಲೋನಿಗಳು ಇರುವ ಪ್ರದೇಶದಲ್ಲಿ ಗುಂಡುತೋಪು ಮತ್ತು ಊರಿಗೆ ಮೀಸಲಾತಿ ಗ್ರಾಮ ಠಾಣಾ ಜಾಗಗಳಿದ್ದು, ಅದನ್ನು ಸರ್ಕಾರದ ವಶಕ್ಕೆ ಪಡೆದು ಈ ಪ್ರದೇಶದಲ್ಲಿ ಇರುವ ಬುಡಕಟ್ಟು ಸಮುದಾಯಕ್ಕೆ ನಿವೇಶನಗಳನ್ನು ವಿತರಿಸಬೇಕು. ಕುಶಲಕರ್ಮಿ ಯೋಜನೆಯಡಿ ಈ ಸಮುದಾಯಗಳು ನಾನಾ ಕಲಾಕೃತಿಗಳನ್ನು ತಯಾರಿಸಲು ಕುಶಲ ಪರಿಕರಗಳನ್ನು ಒದಗಿಸಲು ನಂತರ ಮಾರಾಟಕ್ಕೆ ಖಾದಿ-ಗ್ರಾಮೋದ್ಯೋಗ ಮಾರುಕಟ್ಟೆ ಮಾದರಿ ಸೂಕ್ತ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲು ಸರ್ಕಾರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೂಡಲೇ ಸರ್ಕಾರ ಬುಡಕಟ್ಟು ಜನಾಂಗದವರ ಆಭಿವೃದ್ಧಿ ಹಾಗೂ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
ಒಕ್ಕೂಟದ ಸಂಚಾಲಕ ಹೂರಾಜ್, ಅನಿಲ್, ಇಂದ್ರಾಣಿ, ಆಶೀರ್ವಾದ, ಮನೋಜ್, ರಿವಾಣಿ, ಉದಯಕುಮಾರ್, ಪರಿಮಳ, ದೇವರಾಜ, ಪೌರಾಜ, ತೀರ್ಥ, ಪ್ರಸಾದ, ಪಪೀತ, ಐಕುಟ್ಟು, ಮುತ್ತಡಿ, ಮನೋಜ್, ರಾಮಣ್ಣ ಗೌರಿ, ಮೋಹನಸಿದ್ದಿ ಮೈತ್ರಿ, ಜಯಕೀರ್ತಿ, ನಂಜುಂಡಸ್ವಾಮಿ, ರತನ್‌ರಾಜು, ಹಿಂದು, ಉಸ್ಮಾನ್, ರೆಡ್ಡಿಯಪ್ಪ, ಗೋಪಿ, ಅಪ್ಪರೆಡ್ಡಿ, ಪ್ರಸಾದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.