ಆಶಾ ಕಾರ್ಯಕರ್ತೆಯರಿಂದ ಸಹಿ ಸಂಗ್ರಹ ಚಳವಳಿ
ಕ.ಪ್ರ.ವಾರ್ತೆ, ಹಾಸನ, ಸೆ. 29
ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಸಹಿ ಸಂಗ್ರಹಣೆ ಹಾಗೂ ಕೆಲಸ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನಿರಂತರವಾಗಿ ನಡೆಸಿರುವ ಹೋರಾಟದಿಂದಾಗಿ ಮುಖ್ಯಮಂತ್ರಿಗಳು ರಾಜ್ಯ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಷ್ಟೇ ಹಣವನ್ನು ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪ್ರೋತ್ಸಾಹಧನವನ್ನಾಗಿ ನೀಡುವುದಾಗಿ ಘೋಷಿಸಿದ್ದರು. ಕೂಡಲೇ ಆ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು. ಹಲವಾರು ತಿಂಗಳಿನಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಲವು ರಾಜ್ಯಗಳಲ್ಲಿ ನಿಗದಿ ಮಾಡಿದಂತೆ ರಾಜ್ಯ ಸರ್ಕಾರದಿಂದಲೂ ಜೀವನಯೋಗ್ಯ ಮಾಸಿಕ ನಿಗದಿತ ಗೌರವಧನ ನಿಗದಿ ಮಾಡಬೇಕು, ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯಕರ್ತೆಯರಿಗೆ ಮಾಸಿಕ ನಿಗದಿತ ವೇತನದೊಂದಿಗೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಅಲ್ಲದೆ ಕಾರ್ಯಕರ್ತೆಯರಿಂದ ನೇರವಾಗಿ ಸೇವೆಯನ್ನು ಪಡೆಯುತ್ತಿರುವ ರಾಜ್ಯ ಸರ್ಕಾರ ಕೂಡ ಮಾಸಿಕ ವೇತನ ನಿಗದಿಪಡಿಸ ಬೇಕಾಗಿದೆ.
ಕಾರ್ಯಕರ್ತೆಯರು ಕಡುಕಷ್ಟಕರ ವಾತಾವರಣದಲ್ಲಿ ಬೆಲೆಕಟ್ಟಲಾಗದ ಸೇವೆ ಸಲ್ಲಿಸುತ್ತಿದ್ದಾರೆ. ಗರ್ಭಿಣಿಯರು, ನವಜಾತಶಿಶುಗಳು, ರೋಗಿಗಳು ಮುಂತಾದವರಿಗೆ ಇವರು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಇದರಿಂದಲೇ ಗ್ರಾಮೀಣ ಜನತೆ ಅವರ ಬಗ್ಗೆ ಅಭಾರಿಯಗಿದ್ದಾರೆ. ಆದರೆ ಯೋಜನೆಯಲ್ಲಿ ಘೋಷಿಸಲ್ಪಟ್ಟ ಅಲ್ಪಸ್ವಲ್ಪ ಪ್ರೋತ್ಸಾಹಧನವೂ ಸಕಾಲಕ್ಕೆ ಅವರಿಗೆ ದೊರಕುತ್ತಿಲ್ಲ. ಬಹುತೇಕ ಆಶಾ ಕಾರ್ಯಕರ್ತೆಯರು ಒಂಟಿಜೀವಿಗಳಾಗಿದ್ದಾರೆ ಅಥವಾ ವಿಧವೆಗಳಾಗಿದ್ದಾರೆ. ಅವರ ದುಡಿಮೆಗೆ ದೊರಕಬೇಕಾದ ಮೊತ್ತ ಸಕಾಲದಲ್ಲಿ ಸಿಗದಿದ್ದರೆ ಅವರು ಜೀವನ ಸಾಗಿಸುವುದು ಹೇಗೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಅವರ ಅಮಾನವೀಯ ಸಂಕಷ್ಟಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಬಗ್ಗೆ ಪದೇಪದೇ ಅಧಿಕಾರಸ್ಥರ ಗಮನ ಸೆಳೆದಾಗಲೂ ಸೂಕ್ತ ಪರಿಹಾರ ದೊರಕಿಲ್ಲ.
ರಾಜ್ಯ ಸಮಾವೇಶದಲ್ಲಿ ನಿರ್ಣಯಿಸಿದಂತೆ, ಹೋರಾಟವನ್ನು ಬೆಂಬಲಿಸುವ ಜನಸಾಮಾನ್ಯರಿಂದ ಹಿಡಿದು ಹಿರಿಯರು, ಗಣ್ಯರು, ವಿವಿಧ ಸ್ಥಳೀಯ ಸಮಿತಿಗಳ ಅಧ್ಯಕ್ಷರು, ಸದಸ್ಯರು ಮತ್ತು ಜನಸಾಮಾನ್ಯರ ಸಹಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬೇಡಿಕೆಗಳ ಈಡೇರಿಕೆಗಾಗಿ ಗಣ್ಯರ ಜೊತೆಗೂಡಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಅದಕ್ಕಾಗಿ ಸಂಘದ ರಾಜ್ಯ ಸಮಿತಿ ರಾಜ್ಯದಾದ್ಯಂತ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ಞಾವಂತ ಜನತೆ ಈ ಸಾಮಾಜಿಕ ಚಳವಳಿಗೆ ಬೆಂಬಲಿಸಬೇಕೆಂದು ಸಂಘವು ಕೋರುತ್ತದೆ. ಬೇಡಿಕೆಗಳು ಕೂಡಲೇ ಈಡೇರದಿದ್ದರೆ ಕೆಲಸ ಬಂದ್ ಮಾಡುವುದು ಬಿಟ್ಟು ಆಶಾ ಕಾರ್ಯಕರ್ತೆಯರಿಗೆ ಬೇರೆ ದಾರಿಯೇ ಇಲ್ಲವಾಗಿದೆ ಎಂದು ಜಿಲ್ಲಾಧ್ಯಕ್ಷರು ಹೇಳಿದ್ದಾರೆ.
ಕಾರ್ಯಕರ್ತೆಯರ ಬೇಡಿಕೆಗಳು
- ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಬೇಕು.
- ಆಯವ್ಯಯದಲ್ಲಿ ಘೋಷಿಸಿದ ಹೆಚ್ಚುವರಿ ಪ್ರೋತ್ಸಾಹಧನವನ್ನು, ಘೋಷಣೆಯ ದಿನದಿಂದ ನೀಡಬೇಕು.
- ಪ್ರತಿ ತಿಂಗಳು ನಿಗದಿತ ದಿನಾಂಕದಂದು ಒಂದೇ ಕಾಂಪೋನೆಂಟ್ ಅಡಿಯಲ್ಲಿ ಪ್ರೋತ್ಸಾಹಧನ ನೀಡ ಬೇಕು
- ಅಲ್ಲಿಯವರೆಗೆ ಪ್ರತಿ ತಿಂಗಳು ವಿವಿಧ ಲೈನ್ ಐಟಂಗಳಿಗೆ ಪ್ರೋತ್ಸಾಹ ಧನ ನೀಡಿದ ಬಗ್ಗೆ ಪಾವತಿ ಚೀಟಿ ವಿತರಿಸಬೇಕು.
- ಜೀವನ ಯೋಗ್ಯ ಮಾಸಿಕ ವೇತನ ನಿಗದಿಯಾಗುವವರೆಗೆ, ಎಲ್ಲಾ ಕಾಂಪೋನೆಂಟ್ಗಳ ಪ್ರೋತ್ಸಾಹಧನ ಹೆಚ್ಚಿಸಬೇಕು
- ಕೇಂದ್ರದ ನಿರ್ದೇಶನದಂತೆ ಕಾರ್ಯಕರ್ತೆಯರು ಕೆಲಸ ನಿರ್ವಹಿಸುವುದಕ್ಕೆ ಭರವಸೆ ನೀಡಿದಂತೆ ಮೊಬೈಲ್, ಸಿಮ್ ಕರೆನ್ಸಿ ನೀಡಬೇಕು
- ಕೇಂದ್ರದ ನಿರ್ದೇಶನದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಇರುವ ವಿಶ್ರಾಂತಿ ಕೊಠಡಿಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು
- ಮಾರಣಾಂತಿಕ ಕಾಯಿಲೆಗೆ ತುತ್ತಾದ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ, ಆರ್ಥಿಕ ನೆರವು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು
- ಆಶಾಗಳಿಗೆ ಜೀವವಿಮೆ ಮತ್ತು ಅವರ ಕುಟುಂಬಕ್ಕೆ ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ವಿತರಿಸಬೇಕು
- ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಯಾವುದೇ ಸಭೆ, ತರಬೇತಿ ಮತ್ತು ಇಲಾಖೆಯೇತರ ಕೆಲಸಕ್ಕೆ ತೊಡಗಿಸಿ ಕೊಂಡಾಗ ಊಟ, ಟಿ.ಎ. ದಿನಭತ್ಯೆ ನಿಗದಿ ಮಾಡಬೇಕು
- ಬಹುತೇಕ ಕಡೆಗಳಲ್ಲಿ ಆಪರೇಷನ್ ಕ್ಯಾಂಪ್ ಸಂಜೆ ಆರಂಭಿಸಿ ರಾತ್ರಿ ಅವೇಳೆಯಲ್ಲಿ ಮುಗಿಸುವ ಬದಲು ಸಂಜೆಯೊಳಗೆ ಮುಗಿಸಬೇಕು. ಇದರ ಪ್ರೋತ್ಸಾಹಧನವನ್ನು ನಗದು ರೂಪದಲ್ಲಿ ಆ ದಿನವೇ ಪಾವತಿ ಮಾಡಬೇಕು.
- ಕಾರ್ಯಕರ್ತೆಯರಿಗೆ ನಿಗದಿತ ವೇತನ ಗೌರವಧನ ನೀಡಲು ಕ್ರಮ ಕೈಗೊಳ್ಳಬೇಕು
- ಆಶಾ ಕಾರ್ಯಕರ್ತೆಯರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

