ದೇಗುಲ ಮೇಲ್ಛಾವಣಿ ಕುಸಿತ, ತಪ್ಪಿದ ಅನಾಹುತ
ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನದ ಪ್ರಸಿದ್ಧ ದೇವತೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಕೆಲವೇ ದಿನಗಳು ಬಾಕಿ ಇರುವಾಗಲೇ ವಿಘ್ನವೊಂದು ಎದುರಾಗಿದೆ.
ನಿರ್ಮಾಣ ಹಂತದಲ್ಲಿದ್ದ ಸಿದ್ದೇಶ್ವರ ದೇವಾಲಯ ಮುಂಭಾಗದ ಮೇಲ್ಛಾವಣಿ ಭಾನುವಾರ ಡಿಢೀರ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ಚಾವಣಿ ನಿರ್ಮಿಸಲು ನಿಲ್ಲಿಸಿದ್ದ ಕಂಬ ಸುಭದ್ರವಾಗಿಲ್ಲದಿರುವುದು ಹಾಗೂ ಬೇಜವಾಬ್ದಾರಿಯೂ ಮತ್ತೊಂದು ಲೋಪ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ತಹಸೀಲ್ದಾರ್ ಮಂಜುನಾಥ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಮಂಜುನಾಥ್ ತಿಳಿಸಿದ್ದಾರೆ. ಅಲ್ಲದೆ ಅ.25ರಿಂದ ನ.5ರ ವರೆಗೆ ಹಾಸನಾಂಬೆಯ ದರ್ಶನ ಪ್ರಾರಂಭವಾಗಲಿದ್ದು, ಅಷ್ಟರಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎಚ್ಚರ ವಹಿಸಲಾಗುತ್ತದೆ ಹಾಗೂ ವಿಶಾಲ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದರು. ಈ ಹಿಂದೆ ಹಾಸನಾಂಬ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ವೇಳೆ ಗರ್ಭಗುಡಿಯ ಗೋಡೆ ಕುಸಿದು ತೀವ್ರ ವಿವಾದ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
'ಮೃದು ಮಾತಿನಿಂದ ಮೂರು ಲೋಕ ಗೆಲ್ಲಬಹುದು'
ಹಾಸನ: ಮೃದು ಮಾತಿನ ಮೂಲಕ ಮೂರು ಲೋಕವನ್ನೂ ಗೆಲ್ಲಬಹುದು ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪಿ. ಶಿವಪ್ರಸಾದ್ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚನ್ನವೀರ ಕಣವಿ ಅವರ ಮಾತು ಕವನವನ್ನು ವಿಶ್ಲೇಷಿಸಿ ಅವರು ಮಾತನಾಡಿದರು. ಮಾತು ನಮ್ಮೊಳಗಿನ ಭಾವನೆಯನ್ನು ಅನಾವರಣಗೊಳಿಸುತ್ತದೆ. ನಮ್ಮ ಬುದ್ಧಿವಂತಿಕೆ, ಸಂಸ್ಕೃತಿಯನ್ನು ಸ್ಪಷ್ಟಪಡಿಸುತ್ತದೆ ಹಾಗೂ ಎರಡು ವ್ಯಕ್ತಿಗಳ ಹೃದಯ ಸಂವೇದನೆಯನ್ನು ಮಾತಿನ ಮೂಲಕ ಸಂಬಂಧವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಬದುಕಿಗೊಂದು ಪಾಠ ಕಲಿಸುವ ಮಾತು ಔಚಿತ್ಯ ಪ್ರಜ್ಞೆಯನ್ನು ಹೊಂದಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ರೂಪ್ರಾಜಚಂದನ್ ಮಾತನಾಡಿ, ಮಾತೇ ಮುತ್ತು ಮಾತೇ ಮೃತ್ಯು ಎಂಬ ನಾಣ್ಣುಡಿಯನ್ನು ವಿದ್ಯಾರ್ಥಿಗಳು ಮನಗಂಡು ಜೀವನ ನಡೆಸಬೇಕು ಎಂದು ಹೇಳಿದರು.
'ಕೌಶಲ್ಯದಿಂದ ಗುರಿ ತಲುಪಿ'
ಹಾಸನ: ಪ್ರತಿಯೊಬ್ಬರು ಸಂವಹನ ಕೌಶಲ ಬೆಳೆಸಿಕೊಳ್ಳುವುದರೊಂದಿಗೆ ನಿರ್ದಿಷ್ಟ ಗುರಿ ತಲುಪಬೇಕು ಎಂದು ಬೆಂಗಳೂರಿನ ವೃತ್ತಿಶಿಕ್ಷಣ ಮಾರ್ಗದರ್ಶಕ ಡಾ. ಎಂ.ಐ.ಎಂ. ನೆಹರೂಜಿ ತಿಳಿಸಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪಂದನ ಟ್ರಸ್ಟ್, ಕರ್ನಾಟಕ ಸಾಂಸ್ಕೃತಿಕ ವೇದಿಕೆ ಸಂಯಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಕಾಲೇಜುಗಳಲ್ಲಿ ಓದುವ ಮಕ್ಕಳು ಸಾಮಾನ್ಯ ಹಾಗೂ ಮಧ್ಯಮ ವರ್ಗದವರಾಗಿದ್ದು ತಮ್ಮ ಪೋಷಕರ ಪರಿಸ್ಥಿತಿ ಉದ್ದೇಶ, ನಂಬಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು ಎಂದರು. ದೇಶದ ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಗಳಿಂದಲೇ ಬಂದವರು. ಉತ್ತಮ ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು ಸರ್ಕಾರಿ ಸಂಸ್ಥೆಗಳಲ್ಲೇ ಕಲಿತವರಾಗಿದ್ದಾರೆ ಎಂದು ಹೇಳಿದರು.
ಕೇವಲ ಅಂಕಗಳಿಂದ ವಿದ್ಯಾರ್ಥಿ ಮೌಲ್ಯ ಅಳೆಯಲಾಗದು. ಯಾವುದೇ ಸಂದರ್ಭದಲ್ಲೂ ಹತಾಶರಾಗದೆ ಧೈರ್ಯದಿಂದ ಪರಿಸ್ಥಿತಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ ಯಶೋಧ, ಪ್ರೊ. ಪದ್ಮಿನಿ, ಸುಲೋಚನಾ, ಸಾವಿತ್ರಿ ಮತ್ತು ಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಪ್ರೇಮ ಮುಂತಾದವರು ಉಪಸ್ಥಿತರಿದ್ದರು.
ಸಬ್ ಇನ್ಸ್ಸ್ಟಕ್ಟರ್ ಹುದ್ದೆಗೆ ಅರ್ಜಿ
ಹಾಸನ: ಭಾರತ ಸರ್ಕಾರದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್ನಲ್ಲಿ 116 ಅಸಿಸ್ಟಂಟ್ ಸಬ್ ಇನ್ಸ್ಸ್ಟಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆ. 27 ಕಡೇ ದಿನ. ಪಿಯುಸಿಯೊಂದಿಗೆ ಇಂಗ್ಲಿಷ್, ಹಿಂದಿ ಭಾಷೆಯ ಕಂಪ್ಯೂಟರ್ ಜ್ಞಾನವಿರಬೇಕು. ವಯೋವುತಿ ಸಾಮಾನ್ಯ ಅಭ್ಯರ್ಥಿಗಳಿಗೆ 18 - 25 ವರ್ಷ. ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ 18-30 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 18- 28 ವರ್ಷ. ಸಾಮಾನ್ಯ ಅಭ್ಯರ್ಥಿಗಳಿಗೆ ಎತ್ತರ 165 ಸೆ.ಮೀ ಮಹಿಳೆಯರಿಗೆ 155 ಸೆಂ.ಮೀ. ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ 162.5 ಮಹಿಳೆಯರಿಗೆ 150 ಸೆಂ.ಮೀ ಎದೆಯ ಸುತ್ತಳತೆ ಪುರುಷರಿಗೆ 77 - 82 ಸೆ.ಮೀ ವೇತನ ಶ್ರೇಣಿ 5200 - 20200 ಇತರೆ ಭತ್ಯೆಗಳು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಡಿಡಿಠಣಣಣಢಿಢಿಢಿಣ್ಛ್ಝಡಜಿ.್ಜ್ಟಢ.್ಝಟಿ ವಿಳಾಸದಲ್ಲಿ ಲಭ್ಯವಿದೆ.ಅಗತ್ಯ ಮಾಹಿತಿಗಾಗಿ ವಿಜಯಲಕ್ಷ್ಮಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ 08172 - 268374 ಸಂಪರ್ಕಿಸಲು ಕೋರಲಾಗಿದೆ.
ಎನ್ಎಸ್ಎಸ್ ಸಂಸ್ಥಾಪನಾ ದಿನ ಉದ್ಘಾಟನೆ
ಹಾಸನ: ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಏಕೆಂದರೆ ಶಿಸ್ತು ಮತ್ತು ಅವರ ದೇಹಭಾಷೆ ಇತರರಿಗಿಂತ ಭಿನ್ನವಾಗಿದ್ದು, ಶಿಸ್ತು ಬದ್ದವಾಗಿರುತ್ತದೆ ಎಂದು ಪ್ರಾಧ್ಯಾಪಕ ಎಂ.ಕೆ. ಮಹೇಶ್ ತಿಳಿಸಿದರು.
ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ಸಂಸ್ಥಾಪನಾ ದಿನ ಉದ್ಘಾಟಿಸಿ ಮಾತನಾಡಿದರು. ಎನ್ಎಸ್ಎಸ್ ಗಾಂಧೀಜಿಯವರ ಕನಸು, ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಲು ಸರ್ವ ಪ್ರಯತ್ನ ನಡೆಸಿದರು. ಈಗ ದೇಶದಲ್ಲಿ ಎಲ್ಲ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಎನ್ಎಸ್ಎಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಮುಖ್ಯ ಅತಿಥಿ ಕೆ.ವೇಣುಗೋಪಾಲ್ ಅವರು, ರಾಷ್ಟ್ರಮಟ್ಟದಲ್ಲಿ ಇಂತಹ ಆಚರಣೆಗಳು ಅರ್ಥಪೂರ್ಣ. ಅಲ್ಲದೆ ಇದರೊಂದಿಗೆ ಬಿ.ಈ.ಜಿ. ಕಾಲೇಜಿನ ಸಂಸ್ಥಾಪನಾ ದಿನ ಆಚರಿಸಿದರೆ ಹೆಚ್ಚು ಸೂಕ್ತ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಎಚ್.ಬಿ. ಅಜಿತ್ ಪ್ರಸಾದ್ ಮಾತನಾಡಿ ರಾಷ್ಟ್ರಪಿತ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರ ಆದರ್ಶದ ಅನುಷ್ಠಾನ ಎನ್ಎಸ್ಎಸ್ನಲ್ಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿದರು. ಡಿ.ಆರ್. ವಾಸು ಪ್ರಾಸ್ತಾವಿಕ ನುಡಿ ನುಡಿದರು. ಪ್ರಾಂಶುಪಾಲರಾದ ರೇಖಾ ಇದ್ದರು. ಚೈತ್ರ ಟಿ.ಜೆ. ಸ್ವಾಗತಿಸಿದರು. ಯತಿರಾಜು ಜಿ.ಎಂ. ನಿರೂಪಿಸಿದರು. ಮಂಜುನಾಥ ಜೆ.ಸಿ. ವಂದಿಸಿದರು.
'ಪ್ರತಿಭೆ ಪ್ರದರ್ಶಿಸಲು ವೇದಿಕೆ ಸೃಷ್ಟಿಸ ಬೇಕು'
ಹಾಸನ: ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸೃಷ್ಟಿಸ ಬೇಕು ಎಂದು ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಪ್ರಥಮ ಎಂ.ಎ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮುಖ್ಯವಾಗಿ ಸಮಯಪಾಲನೆ, ಶಿಸ್ತು, ಪ್ರಾಮಾಣಿಕತೆ ರೂಢಿಸಿಕೊಳ್ಳ ಬೇಕು. ಪ್ರಸ್ತುತವಾದ ಜ್ಞಾನವನ್ನು ಹೊಂದುವಂತೆ ಸಲಹೆ ನೀಡಿದರು.
ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಡಿ.ಜಿ. ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕ, ಪಾಠ ಪ್ರವಚನಗಳ ಅಧ್ಯಯನ ಮಾತ್ರವಲ್ಲದೆ ವ್ಯಕ್ತಿತ್ವ ವಿಕಾಸನವಾಗಬೇಕಾದರೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ.ವಿ. ಸುನಿತ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿ ಗಳಿಸುವುದಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ ಎಂದು ವಿಷಾದಿಸಿ, ಸಂಶೋಧನೆಗಳಲ್ಲಿ ತೊಡಗಿಸಿ ಕೊಂಡು ಹೊಸ ಚಿಂತನೆಗಳನ್ನು ಮೂಡಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳುವಂತೆ ತಿಳಿಸಿದರು. ಜಿ.ಟಿ. ಪೂರ್ಣಿಮ, ಶೃತಿ ಪ್ರಾರ್ಥಿಸಿದರು. ಶ್ವೇತ ಸ್ವಾಗತಿಸಿದರು. ಲೊಕೇಶ್ ವಂದಿಸಿದರು. ಪ್ರೀತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

