ಖಾತ್ರಿ ಕಾಮಗಾರಿಗೆ ಹಿಟಾಚಿ ಬಳಕೆ: ಗ್ರಾಮಸ್ಥರ ದೂರು
ಹೊಳೆನರಸೀಪುರ: ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶವನ್ನೇ ಗಾಳಿಗೆ ತೂರಿ, ಖಾತ್ರಿ ಯೋಜನೆಯಡಿ ನಡೆಸಬೇಕಾಗಿದ್ದ ಕಾಮಗಾರಿಗಳಿಗೆ ರಾಜಾರೋಷವಾಗಿ ಯಂತ್ರಗಳನ್ನು ಬಳಸುತ್ತಿರುವ ಪ್ರಕರಣ ತಾಲೂಕಿನ ಓಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಕೆರೆಯ ಸುತ್ತಮುತ್ತ ಗುಂಡಿ ತೋಡುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು.
ಹಾಗಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಮ್ಮುಖದಲ್ಲಿಯೇ ಈ ಕಾಮಗಾರಿಯನ್ನು ಇಟಾಚಿ ಯಂತ್ರದ ಮೂಲಕ ಮಾಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹೊರವಲಯದಲ್ಲಿರುವ ಕೆರೆಯನ್ನು ಇತ್ತೀಚೆಗೆ ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ಧಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಮತ್ತೆ ಕೆರೆ ಅಂಗಳಕ್ಕೆ ಸೇರಿಸುವ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಇತ್ತೀಚೆಗೆ ನಿರ್ಣಯಕೈಗೊಂಡಿತ್ತೆಂದು ವರದಿಯಾಗಿದೆ.
ಅದರಂತೆ ಈ ಕಾಮಗಾರಿಯನ್ನು ಉದ್ಯೋಗಖಾತ್ರಿ ಮೂಲಕ ನಡೆಸುವಂತೆ ಈ ಹಿಂದೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತಲ್ಲದೆ ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕ್ರಮಕೈಗೊಳ್ಳಲಾಗಿತ್ತು.
ಸಬೂಬು ಹೇಳಿ ಜಾರಿಕೊಂಡರು: ಆದರೆ ಈ ಕಾಮಗಾರಿಯನ್ನು ಉದ್ಯೋಗಖಾತ್ರಿಯಲ್ಲಿ ನಡೆಸಲು ಯಾರೊಬ್ಬರೂ ಮುಂದೆ ಬಾರದ ಕಾರಣ ಯಂತ್ರಗಳ ಮೂಲಕ(ಹಿಟಾಚಿ) ಏಕಾಏಕಿ ಕಾಮಗಾರಿ ಆರಂಭಿಸಿರುವುದನ್ನು ಕಂಡ ಗ್ರಾಮಸ್ಥರು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ತಮ್ಮಣ್ಣಗೌಡ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.
ದೂರನ್ನು ಆಲಿಸಿದ ತಮ್ಮಣ್ಣಗೌಡ ತಾವು ಬೆಂಗಳೂರಿನಲ್ಲಿ ಇರುವುದಾಗಿಯೂ, ವಿಷಯ ಪೂರ್ಣ ಗೊತ್ತಿಲ್ಲ, ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂಬುದಾಗಿ ಸಬೂಬು ಹೇಳಿ ದೂರನ್ನು ಆಲಿಸದೆ ಜಾರಿಕೊಂಡಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡರ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಮೂಲಕ ಈ ಆಕ್ರಮದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ದೂರನ್ನು ಆಲಿಸಿದ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ತಾವು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ: ಆದರೆ ಗ್ರಾಮಸ್ಥರು ನೀಡಿದ ದೂರಿಗೆ ಯಾವುದೇ ಫಲ ಕಾಣದೆ, ಮೊದಲೆರಡು ದಿನಗಳು ಕೇವಲ ಒಂದೇ ಯಂತ್ರದಲ್ಲಿ ಮಾಡುತ್ತಿದ್ದ ಕಾಮಗಾರಿಯನ್ನು ಏಕಾಏಕಿ ಎರಡು ಮೂರು ಇಟಾಚಿಗಳಿಂದ ಕಾಮಗಾರಿಯನ್ನು ತುರ್ತಾಗಿ ಮುಗಿಸಲು ಭರದಿಂದ ಕೆಲಸ ಸಾಗುತ್ತಿರುವುದನ್ನು ಕಂಡು ಗ್ರಾಮಸ್ಥರಿಗೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡಿರುವ ಕಾಮಗಾರಿಗಳನ್ನು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡಿಸುವುದರಿಂದ ಮೂಲಭೂತವಾಗಿ ಈ ಯೋಜನೆಯ ಮೂಲ ಉದ್ಧೇಶವನ್ನೇ ಗಾಳಿಗೆ ತೂರಿದಂತಾಗಿದೆ ಎಂದು ಗ್ರಾಮದ ಕುಮಾರಸ್ವಾಮಿ, ಮನೋಹರ್ ಹಾಗೂ ಹಲವು ರೈತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಅವರಲ್ಲಿ ವಿಷಯ ಪ್ರಸ್ತಾಪಿಸಲಾಗಿ ಕೆರೆ ಸುತ್ತ ಮುತ್ತ ಗುಂಡಿ ತೋಡುವ ಕಾಮಗಾರಿಯನ್ನು ಉದ್ಯೋಗಖಾತ್ರಿಯಿಂದ ಬೇರೊಂದು ಯೋಜನೆಗೆ ಸೇರ್ಪಡೆಗೊಳಿಸಿ ಮಾಡಿಸಲಾಗುತ್ತಿದೆ.
ಇದರಲ್ಲಿ ಉದ್ಯೋಗಖಾತ್ರಿ ಯೋಜನೆಗೆ ಅನ್ಯಾಯ ಆಗಿಲ್ಲ ಎಂದು ಕಾಮಗಾರಿ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಆದರೆ ಈ ಕಾಮಗಾರಿಯಲ್ಲಿ ಲೋಪವಾಗಿದೆಯೇ ಇಲ್ಲವೇ ಎಂಬುದನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

