ಹಾಸನ

ದೇವರಾಜ ಅರಸು ಮನೆ ಧ್ವಂಸ ಖಂಡಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ,  ಹಾಸನ ,  ಸೆ.30
ಹಿಂದುಳಿದ ವರ್ಗಗಳ ಅಧಿನಾಯಕ ದಿ ಡಿ.ದೇವರಾಜ ಅರಸು ವಾಸವಿದ್ದ ಬೆಂಗಳೂರಿನ ಸದಾಶಿವನಗರದ ಮನೆಯನ್ನು ಧ್ವಂಸಗೊಳಿಸಿ ವಿರೂಪಗೊಳಿಸಿರುವುದನ್ನು ಖಂಡಿಸಿ ಸಮತಾ ಸೈನಿಕ ದಳ ನೇತೃತ್ವದಲ್ಲಿ ನಾನಾ ದಲಿತ ಸಂಘಟನೆಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ದೇವರಾಜ ಅರಸು ಅವರ ಅಪಾರ ಅನುಯಾಯಿಗಳ ಪಾಲಿಗೆ ಕಳೆದ ಜು.30ರಂದು ಕರಾಳ ರಾತ್ರಿಯಾಯಿತು. ಅರಸು ಹೆಸರಿಗೆ ಮಸಿ ಬಳಿಯುವಂತಹ ಕುಕೃತ್ಯ ನಡೆದಿದೆ. ಅರಸು ವಾಸವಿದ್ದ ಮನೆ ನಮಗೆಲ್ಲಾ ಸ್ಮಾರಕಪ್ರಾಯ. ಆ ಮನೆಗೆ ನಾವೆಲ್ಲಾ ನಮಿಸುತ್ತಿದ್ದ ನೆನಪು. ಅವರು ಚಿಂತನೆ ನಡೆಸಿದ, ನಡೆದಾಡಿದ ಹಾಗೂ ಅವರು ಕೊನೆಗೆ ಚಿರನಿದ್ರೆಗೆ ಜಾರಿದ ಜಾಗವದು. ಈ ಮನೆ ಅರಸು ಅನುಯಾಯಿಗಳಿಗೆ ಮಂದಿರ ಸಮಾನ.
ಈ ಜಾಗ ಯಾರದೋ ಹಣದಾಹಕ್ಕೆ ಆಹುತಿಯಾಗಬಾರದು. ಇದು ಮೌಲ್ಯ ಕಟ್ಟುವ ಜಾಗವಲ್ಲ. ತಮ್ಮ ಪ್ರಬಲ ರಾಜಕೀಯ ಒತ್ತಡ ಬಳಸಿ ಅಕ್ರಮವಾಗಿ ಈ ಜಾಗವನ್ನು ಲಪಟಾಯಿಸಿರುವ ಪ್ರಭಾ ಎಸ್.ಮಲ್ಲಿಕಾರ್ಜುನ ಎಂಬುವರು ಸಾಮಾನ್ಯ ವ್ಯಕ್ತಿಯಲ್ಲ. ರಾಜ್ಯಾದ್ಯಂತ ಸಾವಿರಾರು ಕೋಟಿ ರು.ಆಸ್ತಿಯನ್ನು ಹೊಂದಿರುವ ಸಚಿವರೊಬ್ಬರ ಸೊಸೆ. ಬಳ್ಳಾರಿಯಿಂದ ಜೆಸಿಬಿ ಯಂತ್ರಗಳನ್ನು ಕರೆಸಿ ಅರಸು ಮನೆಯನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಇದು ಖಾಸಗಿ ಆಸ್ತಿ ಎಂದು ತಪ್ಪು ಅಭಿಪ್ರಾಯ ಮೂಡಿಸಬಾರದು. ಅರಸು ಬದುಕಿರುವವರೆಗೂ, ನಂತರ 2010ರವರೆಗೂ ಇದು ಸರ್ಕಾರಿ ಆಸ್ತಿ ಆಗಿತ್ತೆಂದು ಬಿಡಿಎ ನಗರಾಭಿವೃದ್ಧಿ ಇಲಾಖೆ ದಾಖಲೆಗಳು ಹೇಳುತ್ತವೆ. ಕಾನೂನು ಬಾಹಿರವಾಗಿ ಈ ಸರ್ಕಾರಿ ಭೂಮಿಯನ್ನು ಜುಲೈ 2012ರಲ್ಲಿ ಪ್ರಭಾವಿತ ಕುಟುಂಬದ ಮಹಿಳೆ ಪ್ರಭಾ ಎಸ್.ಮಲ್ಲಿಕಾರ್ಜುನ್‌ಗೆ ಪರಭಾರೆ ಮಾಡಿರುವುದರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸರ್ಕಾರದ ಉನ್ನತ ಅಧಿಕಾರಿಗಳೇ ಬರೆದಿದ್ದಾರೆ.
ಕರ್ನಾಟಕದ ನಿರ್ಮಾಪಕರಾಗಿರುವ ಹಾಗೂ ನಾಡಿನ ಅಗ್ರಗಣ್ಯರಾದ ಅರಸುರವರಿಗೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲು ಭೂಮಿ ನೀಡಿ ನೂರು ಕೋಟಿ ರು.ಗಳ ಜನೋಪಕಾರಿ ಯೋಜನೆಗಳನ್ನು ಜಾರಿ ಮಾಡಿದರೂ ಅದು ಕಡಿಮೆ ಎಂದು ಪ್ರತಿಭಟನಾಕಾರರು ಹೇಳಿದರು.
ಸರ್ಕಾರ ಅರಸು ಸ್ಮಾರಕವನ್ನು ಅದೇ ಜಾಗದಲ್ಲೇ ನಿರ್ಮಿಸುವ ನಿರ್ಧಾರ ಪ್ರಕಟಿಸದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಚಿವರು, ಸಂಸದರು, ಶಾಸಕರ ಮನೆ ಮುಂದೆ ಘೇರಾವ್ ಹಾಗೂ ಬೀದರ್‌ನಿಂದ ಅರಸು ಜ್ಯೋತಿಯನ್ನು ಹೊರಡಿಸುವ ಮೂಲಕ ರಾಜ್ಯಮಟ್ಟದ ರ್ಯಾಲಿಯನ್ನು ಆಯೋಜಿಸಿ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಸತೀಶ್, ವಿಜಯಕುಮಾರ್, ನಾಗರಾಜ ಹೆತ್ತೂರು, ಸೂಫಿ, ರಫಿಕ್ ದರ್ಬಾರ್, ಮಂಜುನಾಥ್ ಇತರರು ಇದ್ದರು.
ಬೇಡಿಕೆಗಳು
*   ಸರ್ಕಾರಿ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ದುಷ್ಟಜಾಲ ಬೇಧಿಸಿ, ಈ ಕೃತ್ಯದ ಹಿಂದಿರುವ ಸಮಾಜಘಾತುಕ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ನಾಡಿನ ಅಹಿಂದ ವರ್ಗಗಳ ಅಭ್ಯುದಯಕ್ಕಾಗಿ 1300 ಕೋಟಿ ರು. ಆಸ್ತಿ ಮೀಸಲಿಡಬೇಕು. ಅರಸು ಬರೆದ  ಮರಣ ಶಾಸನ ಪತ್ರದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು.
*   ರಾಜ್ಯ ಸರ್ಕಾರ ಈ ಆಮೂಲ್ಯ ಸ್ವತ್ತನ್ನು ತುರ್ತಾಗಿ ಸ್ವಾಧೀನಕ್ಕೆ ಪಡೆದು, ಅಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಆಡಳಿತ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಹಾಸ್ಟೆಲ್ ಯೋಜನೆ ಜಾರಿಗೊಳಿಸಬೇಕು. ಜೊತೆಗೆ ಅರಸು ಸ್ಮಾರಕವನ್ನು ಸ್ಥಾಪಿಸಬೇಕು.
*   ಈ ಆಸ್ತಿಯ ಎಲ್ಲ ಅಕ್ರಮ ದಾಖಲೆಗಳನ್ನು ಸರ್ಕಾರ ವಶಪಡಿಸಿಕೊಂಡು ನೂರಾರು ಕೋಟಿ ರು.ಬೆಲೆ ಬಾಳುವ ಅತ್ಯಮೂಲ್ಯವಾದ ಈ ಸ್ವತ್ತಿನ ಅಕ್ರಮ ಮಾರಾಟ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಬೇಕು.
*   ಈ ಸ್ವತ್ತನ್ನು ಪ್ರಭಾ ಎಸ್.ಮಲ್ಲಿಕಾರ್ಜುನ್‌ಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಕ್ರಯಪತ್ರವನ್ನು ರದ್ದುಪಡಿಸಿ ಸರ್ಕಾರವು ಈ ಆಸ್ತಿಯನ್ನು ರಕ್ಷಿಸಿಕೊಳ್ಳುವ ಎಲ್ಲಾ ತುರ್ತುಕ್ರಮಗಳನ್ನು ಜರುಗಿಸಿ ಅತಿಕ್ರಮ ಪ್ರವೇಶ ಮಾಡುವ ಭೂ ಮಾಫಿಯಾದವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು.
*   2013ರ ಅರಸು ಪ್ರಶಸ್ತಿಯನ್ನು ಏಕವ್ಯಕ್ತಿಗೆ ನೀಡಿರುವ ವಿಧಾನವನ್ನು ಬದಲಾಯಿಸಿ ಈ ಹಿಂದಿನ ವರ್ಷಗಳಲ್ಲಿ ನೀಡುತ್ತಿದ್ದ ವಿಧಾನದಲ್ಲೇ ಅನೇಕ ಸಾಧಕರಿಗೆ ಮುಂದಿನ ವರ್ಷಗಳಲ್ಲೂ ಅರಸು ಪ್ರಶಸ್ತಿ ನೀಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.