ಹಾಸನ

ಯುಪಿಎಗೆ ಮತ್ತೆ ಕೇಂದ್ರ ಚುಕ್ಕಾಣಿ ಖಚಿತ

Published On :

ಕನ್ನಡಪ್ರಭ ವಾರ್ತೆ    ಹಾಸನ    ಏ.1
ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಕೋಮುವಾದಿ ಸರ್ವಾಧಿಕಾರ ನಡುವೆ ಸಮರ ನಡೆಯುತ್ತಿದ್ದು, ಪ್ರಜಾಪ್ರಭುತ್ವ ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ದೇಶದ ಆಡಳಿತ ಚುಕ್ಕಾಣಿಯನ್ನು ಮತ್ತೆ ಹಿಡಿಯಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಶಾಂತರಾಮನಾಯಕ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 16ನೇ ಲೋಕಸಭಾ ಚುನಾವಣೆಯು ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಕೋಮುವಾದಿ ಸರ್ವಾಧಿಕಾರಿ ನಡುವಿನ ಯುದ್ಧದಂತೆ ಬಿಂಬಿತವಾಗಿದ್ದು, ಈಗಾಗಲೇ ಅಖಾಡ ಸಿದ್ಧಗೊಂಡಿದೆ. ಕಾಂಗ್ರೆಸ್ ಹಿಂದಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ  ಪ್ರತಿಪಾದಿಸಿಕೊಂಡು ಬಂದಿದ್ದು, ಜಾತ್ಯಾತೀತವಾಗಿ ಆಡಳಿತ ನಡೆಸುತ್ತಿದೆ. ಆದರೆ ಗುಜರಾತ್ ಮುಖ್ಯಮಂತ್ರಿ, ಕೋಮುವಾದಿ ನರೇಂದ್ರ ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದು, ಅದು ಅಸಾಧ್ಯ ಎಂದರು.  
ಮೋದಿ ಕೋಮುವಾದದ ವೈರಸ್ ಆಗಿದ್ದು, ಅಹಮದಬಾದ್‌ನಿಂದ ನಾಗಾಪುರದ ತನಕ ಕೋಮುವಾದದ ವೈರಸ್ ಬಿತ್ತುತ್ತಿದ್ದಾರೆ. ಕೋಮುವಾದಿ ಹಾಗೂ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ನರೇಂದ್ರ ಮೋದಿ ಮೂಲ ಬಿಜೆಪಿಯನ್ನೇ ನಿರ್ಣಾಮ ಮಾಡುತ್ತಿದ್ದು, ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ, ಸುಷ್ಮಾಸ ್ವರಾಜ್, ಜಸ್ವಂತ್‌ಸಿಂಗ್, ಜೋಷಿ ಸೇರಿದಂತೆ ಹಲವರ ರಾಜಕೀಯ ಭವಿಷ್ಯ ಮುಗಿಸಲು ಮೋದಿ ಹೊಂಚು ಹಾಕಿದ್ದಾರೆ. ಹಾಗಾಗಿ ಬಿಜೆಪಿಗೆ ಭವಿಷ್ಯವಿಲ್ಲದೆ ಕೆಳಹಂತ ತಲುಪಿದೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಲೋಕಸಭೆಗೆ ಚುನಾಯಿತರಾದ ಸದಸ್ಯರು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸಂವಿಧಾನ ಬದ್ಧವಾಗಿದೆ. ಆದರೆ ಇನ್ನು ಚುನಾವಣೆ ನಡೆಯುವ ಮುನ್ನವೇ ಮೋದಿಯನ್ನು ಪ್ರಧಾನಿ ಎಂದು ಬಿಂಬಿಸಿರುವುದು ಸಂವಿಧಾನ ವಿರೋಧಿ ಕೆಲಸವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ದೇಶದ ಪ್ರಗತಿ ಸಾಧ್ಯ ಎಂಬ ಅರಿವೇ ಇಲ್ಲದೆ ಅನಂತ್‌ಕುಮಾರ್ ಅವರು 'ಅಧಾರ್‌' ಬಗ್ಗೆ ಮಾತನಾಡುವ ಮೂಲಕ ದೇಶವನ್ನು ಎತ್ತಿನ ಗಾಡಿ ನಡೆಯುತ್ತಿದ್ದ ಕಾಲಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಇನ್ನಷ್ಟು ಹೊಸ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಆಲೋಚನೆ ಹೊಂದಿದೆ. ಹಾಗಾಗಿ ಜನತೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್, ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಮುಖಂಡ ಎಚ್.ಪಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.