ಹಾಸನ

ಮತದಾನ ಬಹಿಷ್ಕಾರ ತೆಂಗು ಬೆಳೆಗಾರರ ನಿರ್ಧಾರ

Published On :

ಅರಸೀಕೆರೆ: ಸತತ ಬರಗಾಲ, ಮಳೆಯ ಅಭಾವ, ತೇವಾಂಶ ಕೊರತೆಯಿಂದ 14 ಲಕ್ಷಕ್ಕೂ ಹೆಚ್ಚಿನ ತೆಂಗಿನಮರಗಳು ನಾಶವಾದರೂ ತೆಂಗು ಬೆಳೆಗಾರರ ಹಿತ ಕಾಯುವಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸರ್ಕಾರ ಸಂಪೂರ್ಣ ವಿಫಲವಾಗಿರುವುದನ್ನು ಖಂಡಿಸಿ ತಾಲೂಕಿನ ಮತದಾರರು ಏ. 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಬೇಕೆಂದು ತೆಂಗು ಬೆಳೆಗಾರರ ಸಂಘದ ತಾಲೂಕು ಕಾರ್ಯದರ್ಶಿ ಮಾದನಹಳ್ಳಿ ವಿಶ್ವನಾಥ್ ಕರೆ ನೀಡಿದ್ದಾರೆ.
ತಾಲೂಕಿನಾದ್ಯಂತ ಸುಮಾರು 66,523.6 ಎಕರೆ ಪ್ರದೇಶದಲ್ಲಿ 32,42,862 ಲಕ್ಷ ತೆಂಗಿನ ಮರಗಳಿದ್ದು ಅಂತರ್ಜಲದ ಕೊರತೆ, ನೀರಾವರಿ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ತೆಂಗಿನ ಮರಗಳು ನಾಶಗೊಂಡಿರುವುದು ದುರದೃಷ್ಟಕರ ಸಂಗತಿ ಎಂದರು.
ನಾಯಕರ ವಿರುದ್ಧ ಅಸಮಾಧಾನ: ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿ ನಿರಂತರವಾಗಿದೆ. ಜಿಲ್ಲೆಯಲ್ಲಿ ಮೂರು ನದಿಗಳು ಹರಿದರೂ ಜಿಲ್ಲೆಯ ಬಹುಪಾಲು ರೈತ ಸಮುದಾಯ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಇಂತಹ ಎಲ್ಲಾ ಬೆಳವಣಿಗೆಗಳಿಗೆ ಇದುವರೆಗೂ ಚುನಾಯಿತರಾದ ಸಂಸದರು ಹಾಗೂ ಶಾಸಕರು ಹಾಗೂ ಸರ್ಕಾರಗಳ ವೈಪಲ್ಯವೇ ಕಾರಣ. ಪ್ರಜ್ಞಾವಂತ ಮತದಾರರು ಇಂತಹ ನಾಯಕರಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಮತದಾನದಿಂದ ದೂರವಿರುವಂತೆ ಕರೆ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಹರಿಹಾಯ್ದರು.
ಮರಣ ಶಾಸನವಾದ ವರದಿ: ತೆಂಗು ಬೆಳೆ ವಿನಾಶ ಪರಿಶೀಲನೆಗೆ ಕೇಂದ್ರ ಸರ್ಕಾರ ನೇಮಕ ಮಾಡಿದ್ದ ತಂಡದ ಮುಖ್ಯಸ್ಥ ಗೋರಖ್ ಸಿಂಗ್ ನೇತೃತ್ವದ ತಂಡ ತಾಲೂಕಿನ ನಾನಾ ಭಾಗಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಅಧ್ಯಯನ ನಡೆಸಿ ಇಡೀ ಪ್ರದೇಶ ತೆಂಗು ಬೆಳೆಯಲು ಯೋಗ್ಯವಲ್ಲ.  ನೀರಾವರಿ ಸೌಲಭ್ಯವಿಲ್ಲ. ಈ ಪ್ರದೇಶ ಪರಿಹಾರ ನೀಡಲು ಯೋಗ್ಯವಲ್ಲ ಎಂದು ವರದಿ ನೀಡಿರುವುದು ತೆಂಗು ಬೆಳೆಗಾರರ ಪಾಲಿಗೆ ಮರಣ ಶಾಸನವಾಗಿದೆ ಎಂದು ವಿಶ್ವನಾಥ್ ಕಿಡಿಕಾರಿದರು.
ಉದ್ದೇಶವೇನು?: ಅನಾದಿ ಅನಾದಿಕಾಲದಿಂದಲೂ ತೆಂಗು ಬೆಳೆಗೆ ಪ್ರಸಿದ್ಧಿ ಪಡೆದು, ಕಲ್ಪತರು ನಾಡು ಎಂದು ಪ್ರಸಿದ್ಧಿ ಪಡೆದಿರುವ ಈ ನಾಡು ತೆಂಗು ಬೆಳೆಯುವ ಭೂಮಿಯಲ್ಲ ಎಂದು ವರದಿ ನೀಡಿದ್ದು ವಾಸ್ತವ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಂಡಿರುವ ಜನ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು.
ಪ್ರವಾಸ: ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಮತದಾನ ಬಹಿಷ್ಕಾರಕ್ಕೆ ಸಂಘ ಕರೆ ನೀಡಿದೆ ಎಂದು ಹೇಳಿದ ಅವರು ಇಂದಿನಿಂದಲೇ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರವಾಸ ಆರಂಭಿಸುವುದಾಗಿ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ಓಂಕಾರಣ್ಣ ನಿರ್ದೇಶಕ ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.