ಹಾಸನ

ಅಸ್ತಿತ್ವ ಕಳೆದುಕೊಳ್ಳುವ ಜೆಡಿಎಸ್

Published On :

ಹಾಸನ: ಲೋಕಸಭಾ ಚುನಾನಣೆಯ ನಂತರ ರಾಜ್ಯದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ, ಹೋಬಳಿಗಳು ಮತ್ತು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಎಲೆ ಎದ್ದಿದ್ದು, ಜೆಡಿಎಸ್ ಅನ್ನು ತಿರಸ್ಕರಿಸಿ, ಕಾಂಗ್ರೆಸ್‌ಗೆ ಬಹುಮತ ನೀಡಿ ಜನತೆ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಈ ಮೂಲಕ ದೇವೇಗೌಡರ ಕುಟಂಬದ ರಾಜಕಾರಣ ಲೋಕಸಭಾ ಚುನಾವಣೆ ನಂತರ ಕೊನೆಯಾಗಲಿದೆ ಎಂದರು.
ತಾಲೂಕು ಹಾಗೂ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಜೆಡಿಎಸ್‌ನ ಕಪಿಮುಷ್ಠಿ ಆಳ್ವಿಕೆಯಿಂದ ಬೇಸತ್ತು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರ ಒಲವು ಜೆಡಿಎಸ್‌ನತ್ತ ತಿರುಗಿದೆ ಎಂದರು.
ಸಮಸ್ಯೆ ಬಗೆಹರಿಸಿಲ್ಲ: ಜೆಡಿಎಸ್ ಆಡಳಿತದಲ್ಲಿ ನೀರಾವರಿ, ಮೂಲಭೂತ ಸೌಲಭ್ಯದ ಕೊರತೆ, ಏತ ನೀರಾವರಿ ನೆನೆಗುದಿಗೆ ಬಿದ್ದಿರುವುದು, ಬೇರೆಯವರ ಹೆಸರು ಬರುತ್ತದೆ ಎಂದು ಅಭಿವೃದ್ಧಿ ಕೆಲಸವನ್ನು ತಡಿಯೋದು, ಗೌಡರ ಕುಟುಂಬದ ಕುತಂತ್ರ ರಾಜಕೀಯಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಇನ್ನು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜೆಡಿಎಸ್ ನಾಯಕರು ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದು ಆರೋಪಿಸಿದರು.
ಸಿದ್ದು ಪರ: ಜಿಲ್ಲೆಯಲ್ಲಿ ಜೆಡಿಎಸ್‌ನ ದುರಾಡಳಿತದಿಂದ ಬೇಸತ್ತಿರುವ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಆಡಳಿತ ಹಾಗೂ ರೈತ ಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದಾರೆ. ಎಲ್ಲಾ ಜಾತಿ, ವರ್ಗದವರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಹೆಣ್ಣು ಮಕ್ಕಳಿಗೆ ನಾನಾ ಯೋಜನೆಗಳು, ಅನ್ನಭಾಗ್ಯ, ಕ್ಷೀರ ಭಾಗ್ಯ, ಆರ್‌ಟಿಇ ಹಾಗೂ ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಇತರೆ ಯೋಜನೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಜಿಲ್ಲೆಯಲ್ಲಿ ಕೈಗೊಂಡ ಚುನಾವಣೆ ಪ್ರಚಾರದ ವೇಳೆ ತಿಳಿದಿದೆ ಎಂದರು.
ವಿಶ್ವಾಸ: ದೇವೇಗೌಡರು ಲೋಕಸಭಾ ಸದಸ್ಯರಾದರೂ, ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲೇ ಇಲ್ಲ ಎಂದ ಅವರು, ಗೌಡರು ಮಾಡಿದ್ದು ಕೇವಲ ಕುತಂತ್ರ ರಾಜಕಾರಣವನ್ನಷ್ಟೇ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ, ಕ್ರೆಸ್ತರು, ಜೈನರು ಸೇರಿದಂತೆ ಎಲ್ಲಾ ಜನಾಂಗದ ಜನರು ಕಾಂಗ್ರೆಸ್ ಪರವಾಗಿ ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ 50 ಸಾವಿರ ಮತಗಳ ಅಂತರದಿಂದ ತಮ್ಮ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಣ್ಣೀರಿಡುವ ಗೌಡರನ್ನು ತಿರಸ್ಕರಿಸಿ

ಆಲೂರು: ಜಿಲ್ಲೆಯ ಜನರ ಮತ ಪಡೆದು ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅವರ ಕೈಗೆ ಸಿಗದೆ ಕಣ್ಮರೆಯಾಗಿದ್ದರು. ಈಗ ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಬಂದು ಕಣ್ಣೀರಿಟ್ಟು ನಾಟಕವಾಡುತಿದ್ದಾರೆ. ಈ ಬಾರಿ ಅವರನ್ನು ತಿರಸ್ಕರಿಸಿ, ತನ್ನನ್ನು ಬೆಂಬಲಿಸಿ ಗೆಲ್ಲಿಸಬೇಕೇಂದು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಕೋರಿದರು. ಪಟ್ಟಣದ ಗಣಪತಿ ಪೆಂಡಾಲಿನಲ್ಲಿ  ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,  ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಜನಪರ ಕೆಲಸಗಳನ್ನು ಜನ ಮರೆತಿಲ್ಲ. ದೇಶಾದ್ಯಂತ ಮೋದಿ ಅಲೆ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ. ದೇಶದೆಲ್ಲೆಡೆ ಕಾಂಗ್ರೆಸ್ ಅಲೆ ಇದೆ ಎಂದು ಹೇಳಿದರು. ಮಾಜಿ ಪ್ರಧಾನಿಗಳು ಈ ಬಾರಿ ತೃತೀಯ ರಂಗ ಆಡಳಿತಕ್ಕೆ ಬಂದು ಪುನಃ ತಾನು ಪ್ರಧಾನಿಯಾಗುತ್ತೇನೆಂಬ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಪ್ರಧಾನಿಗಳಾಗಿದ್ದಾಗ ಕ್ಷೇತ್ರವನ್ನು ಕಡೆಗಣಿಸಿ ತಮ್ಮ ಮಗನಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟು ತಮ್ಮ ಪಾಡಿಗೆ ತಾವಿದ್ದರು.  ಪಶ್ಚಿಮಘಟ್ಟ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ರೇವಣ್ಣ ಹೊಳೇನರಸಿಪುರಕ್ಕೆ ತೆಗೆದುಕೊಂಡು ಹೋಗಿ ಹೇಮಾವತಿ ನದಿಗೆ ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.