ಬಡವರ ಪರ ದುಡಿಯಲು ಗೌಡರು ಯುವಕ
ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ವಯಸ್ಸಾಗಿದೆ ನಿಜ. ಆದರೆ ಬಡವರ ಪರ ಕೆಲಸ ಮಾಡಲು ಅವರು ಯುವಕರಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಅವರ ಜೀವನದ ಹಾದಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಉದಯಪುರದಲ್ಲಿ ದೇವೇಗೌಡ ಅವರ ಪರ ಮತಯಾಚನೆ ಮಾಡಿ ಮಾತನಾಡಿ ವಿರೋಧಿ ಕಾಂಗ್ರೆಸಿಗರು ದೇವೇಗೌಡ ಅವರಿಗೆ ವಯಸ್ಸಾಗಿದೆ ಎಂದು ಟೀಕಿಸುತ್ತಿದ್ದಾರೆ. ವಯಸ್ಸಾಗಿದೆ ಎಂದು ಎಂದೂ ಮನೆಯಲ್ಲಿ ಕುಳಿತಿಲ್ಲ. ಬಡವರ ಪರ ಕೆಲಸ ಮಾಡುತ್ತಿರುವುದರಿಂದ ಅವರಿಗೆ ವಯಸ್ಸು ಕಾಣುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ದೇವೇಗೌಡ ಅವರನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಲವು ಸಾಕ್ಷಿ ಗುಡ್ಡೆಗಳಾಗಿವೆ. ನೀರಾವರಿ, ರಸ್ತೆ, ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ದೇವೇಗೌಡ ಮತ್ತು ಎಚ್.ಡಿ. ರೇವಣ್ಣ ಅವರು ಜಿಲ್ಲೆಯ ಜನತೆಯ ಮನಸ್ಸು ಗೆದ್ದಿದ್ದಾರೆ ಎಂದು ತಿಳಿಸಿದರು.
ದೇವೇಗೌಡ ಅವರು ದೊಡ್ಡ ಆಲದ ಮರವಿದ್ದಂತೆ. ಆ ಮರದ ಕೆಳಗೆ ಹಲವರಿಗೆ ಆಶ್ರಯ ನೀಡಿದ್ದು, ಅವರಿಂದ ರಾಜಕೀಯವಾಗಿ ಬೆಳೆದವರು ಸಾವಿರಾರು ಮಂದಿಯಿದ್ದಾರೆ. ಅವರನ್ನು ಟೀಕೆ ಮಾಡಿದರೆ ಜಗ್ಗುವುದಿಲ್ಲ. ಈ ದೊಡ್ಡ ಮರವನ್ನು ಕೆಡವಲು ಹಲವು ಮಂದಿ ಹಲವು ರೀತಿಯಲ್ಲಿ ಪ್ರಯತ್ನಿಸಿದರು. ಆದರೆ, ಜಿಲ್ಲೆಯ ಜನತೆ ವಿರೋಧಿಗಳಿಗೆ ಬುದ್ಧಿ ಕಲಿಸಿ ತಂದೆ ದೇವೇಗೌಡ ಅವರಿಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡುತ್ತಲೇ ಬಂದಿದ್ದಾರೆ ಎಂದರು.
ಡಿಕೆಶಿ ವಿರುದ್ಧ ವಾಗ್ದಾಳಿ: ರಾಜ್ಯದ ಇಂಧನ ಸಚಿವರು ಜಿಲ್ಲೆಯಲ್ಲಿ ದೇವೇಗೌಡ ಅವರ ಅಭಿವೃದ್ಧಿಯ ಸಾಕ್ಷಿ ಗುಡ್ಡೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಅವರು ರಾಮನಗರದಲ್ಲಿ ಯಾವ ಸಾಕ್ಷಿ ಗುಡ್ಡೆ ಮಾಡಿದ್ದಾರೆ ಎಂದು ತಿಳಿಸಲಿ. ಅವರು ಗಣಿ ಲೂಟಿ ಮಾಡಿರುವುದು ಇಡೀ ಜಿಲ್ಲೆಯಲ್ಲಿ ಸಾಕ್ಷಿಗುಡ್ಡೆಗಳಾಗಿ ಸಾಮಾನ್ಯ ಜನತೆಗೂ ಕಾಣುತ್ತಿದೆ. ಅದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಉತ್ತಮ ಕೆಲಸ: ಎಚ್.ಡಿ. ರೇವಣ್ಣ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅಧಿವೇಶನದ ಸಂದರ್ಭದಲ್ಲಿ ಹೊಳೆನರಸೀಪುರ ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇರುವ ಅಲ್ಪ ಅವದಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದರಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೇವಣ್ಣ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ಮುಖ್ಯಮಂತ್ರಿಯಾದ ನನಗೆ ಉತ್ತಮ ಹೆಸರು ತಂದುಕೊಟ್ಟಿತು.
ನಾನು ತನ್ನ ಅಣ್ಣ ಎಂಬ ಕಾರಣದಿಂದ ಮೆಚ್ಚುಗೆಯಿಂದ ಹೇಳುತ್ತಿಲ್ಲ. ಕೆಲಸ ಮಾಡುವುದರಲ್ಲಿ ರೇವಣ್ಣ ಬಿಟ್ಟರೆ ಯಾರೂ ಇಲ್ಲ. ಹಿಡಿದ ಕೆಲಸವಾಗುವವರೆಗೆ ಆತ ಬಿಡುವುದಿಲ್ಲ. ತವರಿನ ಮೇಲೆ ಅವರಿಗೆ ತುಂಬಾ ಕಾಳಜಿ, ಅಭಿಮಾನವಿದೆ. ಇದರಿಂದ 20 ತಿಂಗಳ ತಮ್ಮ ಮುಖ್ಯಮಂತ್ರಿ ಅವಧಿಯನ್ನು ರಾಜ್ಯದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ 50 ವರ್ಷ ಆಡಳಿತ ನಡೆಸಿದ್ದರೂ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದರು.
ನೀರಾವರಿಗೆ ಹೋರಾಟ: ತಾಲ್ಲೂಕಿನ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ವಿಳಂಬವಾಗಿದೆ. ಚುನಾವಣೆ ನಂತರ ಹೋರಾಟದ ಹಾದಿ ಹಿಡಿದಾದರೂ ಅದನ್ನು ಪೂರ್ಣಗೊಳಿಸುವ ವಿಶ್ವಾಸ ತಮ್ಮದಾಗಿದೆ ಎಂದು ತಿಳಿಸಿದರು. ಹೇಮಾವತಿ ಜಲಾಶಯದ ನೀರನ್ನು ಹೆಚ್ಚು ಬಳಕೆ ಮಾಡಿಕೊಳ್ಳಲು ದೇವೇಗೌಡ ಅವರು ಶ್ರಮಿಸಿದ್ದು, ಎಲ್ಲಾ ಹಳ್ಳಿಗಳಿಗೂ ಶಾಶ್ವತ ಕುಡಿಯುವ ಯೋಜನೆಗಳನ್ನು ಕೈಗೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗೂಳಿಗೆ ತಕ್ಕ ಪಾಠ: ಕಳೆದ ವಾರ ಜಿಲ್ಲೆಗೆ ಬಂದ ಕಾಂಗ್ರೆಸ್ ನಾಯಕರು ದೇವೇಗೌಡ ಅವರ ವಿರುಧ್ಧ ಗೂಳಿಯೊಂದನ್ನು ಕಾಳಗಕ್ಕೆ ತಂದಿದ್ದೇವೆ. ಅದು ಯಾವ ರೀತಿ ಗುದ್ದುತ್ತದೆ ಎಂಬುದನ್ನು ಕಾದು ನೋಡಿ ಎಂದು ಹೇಳಿದ್ದಾರೆ. ಜಿಲ್ಲೆಯ ಜನತೆಗೆ ಗೂಳಿಯನ್ನು ಬೆಳಸುವುದಕ್ಕಿಂತ ಬೆಳೆದ ಗೂಳಿಯನ್ನು ಹಿಡ ಮಾಡುವುದನ್ನು ಚೆನ್ನಾಗಿ ಕಲಿತಿದ್ದಾರೆ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ಕಾಚೇನಹಳ್ಳಿ ಏತ ನೀರಾವರಿ ಕುರಿತು ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುವಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 240ಕೋಟಿ ಹಣ ನೀಡಿದ್ದಾರೆ. ಯಾರೂ ಕೂಡ ಇಷ್ಟು ಹಣವನ್ನು ನೀಡಿಲ್ಲ. ಕಾಂಗ್ರೆಸ್ನವರು ಟೀಕಿಸಲು ಯಾವುದೇ ನೈತಿಕತೆಯಿಲ್ಲ ಎಂದರು.
ಶೀಘ್ರ ಟೆಂಡರ್: ದಂಡಿಗನಹಳ್ಳಿ ಹೋಬಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಯಿಂದ ಎಲ್ಲಾ ಹಳ್ಳಿಗಳಿಗೆ ಪ್ಲೋರೈಡ ರಹಿತ ನೀರನ್ನು ನದಿಯಿಂದ ನೀಡುವ ಕಾರ್ಯಕ್ಕೆ ಸರ್ವೆ ಕಾರ್ಯ ಮುಗಿದಿದ್ದು, ಚುನಾವಣೆ ನಂತರ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚನ್ನಾಪುರ ದೇವರಾಜು ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು.
ಉದಯಪುರಕ್ಕೆ ಆಗಮಿಸುವ ಮುನ್ನಾ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಯಲಿಯೂರಿನ ಮನೆದೇವರು ದೇವಿರಮ್ಮ ದೇವಸ್ಥಾನಕ್ಕೆ ಸಹೋದರ ರೇವಣ್ಣ ಜತೆಗೆ ಕುಮಾರಸ್ವಾಮಿ ತೆರಳಿ ಪೂಜೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

