ಸಂಬಂಧಿಗಳ ಪ್ರಚಾರ ಭರಾಟೆ
-ದಯಾಶಂಕರ ಮೈಲಿ
ಕ.ಪ್ರ.ವಾರ್ತೆ ಹಾಸನ ಏ. 11
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿದೆ. ಅಭ್ಯರ್ಥಿಗಳ ಪರ ಅವರ ಪತ್ನಿಯರು, ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಪ್ರಚಾರಕ್ಕೆ ಇಳಿದು, ಮತ ಭಿಕ್ಷೆ ಬೇಡುತ್ತಿದ್ದಾರೆ.
ದೇವಾಲಯಗಳಲ್ಲಿ ಅರ್ಚನೆ, ಅಭಿಷೇಕ ಮಾಡಿಸಿಯೇ ಪ್ರಚಾರ ಆರಂಭಿಸುತ್ತಿದ್ದು, ರೋಡ್ಶೋ, ಸಮಾವೇಶಗಳ ಮೂಲಕ ಮತ್ತು ಮನೆ ಮನೆಗೆ ಹೋಗಿ ಮತಯಾಚಿಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಅವರ ಪುತ್ರರಾದ ಎಚ್.ಡಿ. ರೇವಣ್ಣ, ಎಚ್.ಡಿ. ಕುಮಾರಸ್ವಾಮಿ, ಸೊಸೆ ಭವಾನಿ ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರ ಕೈಗೊಂಡಿದ್ದರೇ, ಕಾಂಗ್ರೆಸ್ ಅಭ್ಯರ್ಥಿ ಶಾಸಕ ಎ. ಮಂಜು ಅವರ ಪತ್ನಿ ತಾರಾ ಮತ್ತು ಪುತ್ರ ಮಂಥರ್ ಗೌಡ ಪ್ರಚಾರ ನಡೆಸುತ್ತಿದ್ದಾರೆ.
ಮಾದರಿ ರಾಜಕಾರಣಿ: ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಮಾತ್ರ ಪತ್ನಿ, ಪುತ್ರರಿಂದ ಪ್ರಚಾರ ಮಾಡಿಸುತ್ತಿಲ್ಲ. ಬದಲಿಗೆ ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರೊಡನೆ ಜಿಲ್ಲಾದ್ಯಂತ ತಮ್ಮದೇ ಶೈಲಿಯಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಯಾರೊಬ್ಬರು ಬೇರೆ ಅಭ್ಯರ್ಥಿಯ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಟೀಕೆ, ಆರೋಪಗಳನ್ನು ಮಾಡದೇ ಮತ ಕೇಳುವ ಮೂಲಕ ಪುರುಷ ಮುಖಂಡರಿಗೆ ಮಾದರಿಯಾಗಿದ್ದಾರೆ ಎಂಬುದು ವಿಶೇಷ.
ಭವಾನಿ ಮತಯಾಚನೆ: ಜೆಡಿಎಸ್ ಪರ ಸ್ಟಾರ್ ಪ್ರಚಾರಕಿ ಎಂದೇ ಕರೆಯಲ್ಪಡುತ್ತಿರುವ ಭವಾನಿ ರೇವಣ್ಣನವರು, ಮುಂಜಾನೆ ಹೊಳೆನರಸೀಪುರದಲ್ಲಿ ನಿವಾಸಕ್ಕೆ ಬರುವ ಜನರು, ಕಾರ್ಯಕರ್ತರನ್ನು ಮಾತನಾಡಿಸಿ,ನಂತರ ಜಿಲ್ಲೆಯ ಹಲವೆಡೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ತಮ್ಮ ಪತಿ ರೇವಣ್ಣ ಮತ್ತು ಮಾವ ದೇವೇಗೌಡರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪಿಸಿ, ಮುಂದೆಯೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸಲು ಮತ ನೀಡಿ ಎಂದು ಕೇಳುತ್ತಿದ್ದಾರೆ.
ತಾರಾ ಮತಯಾಚನೆ: ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರ ಪತ್ನಿ ತಾರಾ ಅವರು ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಅರಕಲಗೂಡು ಕ್ಷೇತ್ರದ ರಾಮನಾಥಪುರ, ಕೊಣನೂರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಹೋಗಿ ಪತಿ ಪರ ಮತಯಾಚಿಸುತ್ತಿದ್ದಾರೆ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿ, ತಪ್ಪದೇ ಒಂದು ಓಟು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಮತ ಕೇಳುವ ಮೊಮ್ಮಗ: ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಈಗಾಗಲೇ ಸಾರ್ವಜನಿಕವಾಗಿ ಹೇಗೆ ಮತ ಕೇಳಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದು, ಜನರು ತಮ್ಮ ತಾತನಿಗೆ ಏಕೆ ಮತ ನೀಡಬೇಕು ಎಂಬುದನ್ನು ವಿವರಿಸುವ ಮೂಲಕ ಮತ ಯಾಚನೆ ಮಾಡುತ್ತಿದ್ದಾರೆ. ಬೇಲೂರು ಮತ್ತು ಹಾಸನ ನಗರ ವಾಪ್ತಿಯಲ್ಲಿ ಹೆಚ್ಚು ಪ್ರಚಾರ ನಿರತರಾಗಿರುವ ಪ್ರಜ್ಜಲ್, ಜೆಡಿಎಸ್ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ನೆರೆ ಜಿಲ್ಲೆಗಳಾದ ತುಮಕೂರು, ಮೈಸೂರು ಜಿಲ್ಲೆಗಳಿಗೂ ಹೋಗಿ ಪ್ರಚಾರ ಮಾಡುತ್ತಿದ್ದಾರೆ.
ಡಾಕ್ಟರ್ ಕ್ಯಾಂಪೇನ್!: ರೇಡಿಯಾಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ಮಂಥರ್ ಗೌಡ ಅವರು, ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಚಾರ ಮಾಡುತ್ತಲೇ, ಕಾರ್ಯಕರ್ತರು, ಮುಖಂಡರು ಪ್ರಚಾರಕ್ಕೆ ಹೋಗಲು ಬೇಕಾದ ಕರಪತ್ರ ಮತ್ತಿತರ ಸಾಮಾಗ್ರಿಗಳನ್ನು ನೀಡುವುದಲ್ಲದೇ, ಪ್ರತಿದಿನ ತಮ್ಮ ತಂದೆಯ ಪರ ನಡೆಯುತ್ತಿರುವ ಪ್ರಚಾರ ವೈಖರಿಯನ್ನು ಗಮನಿಸಿ, ಲೋಪಗಳು ಕಂಡು ಬಂದರೇ ಸರಿಪಡಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಭಾವಿ ಶಾಸಕ?: ಕಾಂಗ್ರೆಸ್ ವಲಯದಲ್ಲಿ ಮಂಥರ್ ಗೌಡರನ್ನು ಭಾವಿ ಶಾಸಕರೆಂದೇ ಭಾವಿಸಲಾಗುತ್ತಿದೆ. ಒಂದು ವೇಳೆ ಅವರ ತಂದೆ ಮಂಜು ಗೆದ್ದರೆ, ಅರಕಲಗೂಡು ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಮಂಥರ್ ಅಭ್ಯರ್ಥಿ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಮಂಜು ಅದನ್ನು ಒಪ್ಪುತ್ತಿಲ್ಲ. ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಮಂಗಳಾರ್ತಿಗೆ ಕಾಸು ಹಾಕಲ್ಲ: ಹೀಗೆ ತಮ್ಮ ಪತಿ, ಮಾವ, ತಾತನ ಪರ ಮತ ಕೇಳಲು ಹೋಗುವ ಅಭ್ಯರ್ಥಿಗಳ ಸಂಬಂಧಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮಂಗಳಾರತಿ ತಟ್ಟೆಗೆ ಅಪ್ಪಿತಪ್ಪಿಯೂ ನೋಟನ್ನಾಗಲಿ, ಕಾಸನ್ನಾಗಲಿ ಹಾಕುತ್ತಿಲ್ಲ. ಚುನಾವಣಾ ಅಧಿಕಾರಿಗಳು ತಮ್ಮ ಹಿಂಬಾಲಿಸಿ, ವಿಡಿಯೋ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಕೇಸು ಹಾಕಿ ಬಿಟ್ಟಾರು ಎಂಬ ಭಯ ಅವರಿಗೆ.
ಇದೇ ಭಯ ಹೋದ ಕಡೆ ಮಹಿಳೆಯರು ಅರತಿ ಎತ್ತಿದಾಗಲೂ ಅವರನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

