ಹಾಸನ

ಮಹಾವೀರ ಚರಿತ್ರೆ ಪಠ್ಯದಲ್ಲಿ ಸೇರಲಿ

Published On :

ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಭಗವಾನ್ ಮಹಾವೀರರ ಜಯಂತ್ಯುತ್ಸವವನ್ನು ಜೈನ ವಿಧಿ ವಿಧಾನದಂತೆ ಅದ್ಧೂರಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಂತೆ ಭಂಡಾರ ಬಸದಿಯಲ್ಲಿ ಬೆಳಗ್ಗೆಯಿಂದಲೇ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ಚಾವುಂಡರಾಯ ವೇದಿಕೆಯಲ್ಲಿ ಮಹಾವೀರ ಮೂರ್ತಿಗೆ ಎಳನೀರು, ಹಾಲು, ಗಂಧ ಸೇರಿದಂತೆ ಹಲವು ಅಭಿಷೇಕಗಳು ನಡೆದವು.
ನಂತರ ಮಹಾವೀರರ ಬಾಲ ಮೂರ್ತಿಯನ್ನು ಶ್ರವಣಬೆಳಗೊಳದ ಮಹಿಳಾ ಸಮಾಜದ ಕಾರ್ಯಕರ್ತರು ತೊಟ್ಟಿಲಲ್ಲಿ ಅಲಂಕರಿಸಿ ಹಲವು ಜಯಘೋಷಗಳನ್ನು ಕೂಗದಿರೆ,  ಜೋಜೋ ಹಾಡುಗಳೊಂದಿಗೆ ಬಾಲ ಮಕ್ಕಳು ತೊಟ್ಟಿಲು ತೂಗಿದರು.
ಮಹಾವೀರ ಜಯಂತಿಯನ್ನು ಪೂಜೆ ಹಾಗೂ ಉತ್ಸವದಲ್ಲಿ ಕಾಣುವ ಜತೆಗೆ ಅವರ ಸಂದೇಶಗಳು ಮಕ್ಕಳಿಗೆ ತಲುಪಿಸಲು ತಾವು ಹಿಂದೆ ಬಿದ್ದಿದ್ದೇವೆ. ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಸಂದೇಶವನ್ನು ತಾವು ತಲುಪಿಸುವಲ್ಲಿ ಹಿಂದೆ ಬಿದ್ದಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಾವೀರರ ಸಂದೇಶವನ್ನು ಸಾರುವ ವಿಷಯವನ್ನು ಪುಸ್ತಕದಲ್ಲಿ ಮುದ್ರಿಸಿ ಮಕ್ಕಳಿಗೆ ತಿಳಿಸುವಂತೆ ಒತ್ತಾಯಿಸಿದರು.

72ಮಂದಿಗೆ ವೈಶಾಲಿ ಯೋಗ....
ಶಾಂತಿ ಮತ್ತು ಅಹಿಂಸಾ ಮನೋಧರ್ಮವನ್ನು ತಿಳಿಯಲು ಮಹಾವೀರರು ಜನಿಸಿದ ಬಿಹಾರದ ವೈಶಾಲಿಗೆ ಒಮ್ಮೆ ಬೇಟಿ ಕೊಡಿ. ಪ್ರಸಕ್ತ ವರ್ಷದಿಂದ ಬಿಹಾರದಲ್ಲಿ ಜರುಗುವ ವೈಶಾಲಿ ಉತ್ಸವದಲ್ಲಿ ಪಾಲ್ಗೊಳ್ಳಲು ಶ್ರೀ ಕ್ಷೇತ್ರ ಶ್ರವಣಬೆಳಗೊಳದಿಂದ ರೈಲಿನ ಒಂದು ಬೋಗಿಯನ್ನು ಮೀಸಲಿರಿಸಿ, 72ಮಂದಿಯನ್ನು ರೈಲಿನಲ್ಲಿ ವೈಶಾಲಿ ದರ್ಶನಕ್ಕೆ ಕಳುಹಿಸಲು ಶ್ರೀ ಕ್ಷೇತ್ರ ನಿರ್ಧರಿಸಿದೆ ಎಂದು ತಿಳಿಸಿದರು.

ಹಲವು ಸ್ಪರ್ಧೆ....
ಪ್ರಸಕ್ತ ಸಾಲಿನಿಂದ ಶ್ರೀ ಕ್ಷೇತ್ರದಲ್ಲಿ ಮಕ್ಕಳಿಂದ ಮಹಾವೀರ ಜಯಂತಿ ಆಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಮಕ್ಕಳಿಂದಲೇ ಮಹಾವೀರ ಮೂರ್ತಿಯನ್ನು ಅಲಂಕರಿಸುವುದು. ಅವರೇ ತೊಟ್ಟಿಲು ತೂಗುವುದು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳೇ ನೆರವೇರಿಸುವಂತೆ ಆಯೋಜಿಸಲಾಗಿದೆ.  ಮಹಾವೀರರ ಸಾಧನೆ, ಸಂದೇಶ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಅವರ ಚಿತ್ರಕಲೆ, ಭಜನೆ, ಲೇಖನಗಳನ್ನು ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಸಮುದಾಯದತ್ತ ಶಾಲೆ ಕಾರ್ಯಕ್ರಮ
ಜಾವಗಲ್: ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು. ಮಾರ್ಗದರ್ಶಕ ಅಧಿಕಾರಿ ಹಿರಿಯ ಶಿಕ್ಷಕ ಬಿ. ರಾಮಲಿಂಗಯ್ಯ ವಿದ್ಯಾರ್ಥಿಗಳ ಪ್ರಗತಿ ಪರಿಶೀಲಿಸಿ, ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿ,  ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಸಂಬಂಧ ಉತ್ತಮವಾಗಿದ್ದಲ್ಲಿ ಪ್ರಗತಿ ಸಾಧ್ಯವೆಂದರು. ಎಸ್‌ಡಿಎಂಸಿ ಅಧ್ಯಕ್ಷ ಜೆ.ವಿ. ರುದ್ರೇಶ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಮರುಳಸಿದ್ದಪ್ಪ, ಶಿವಲಿಂಗಮೂರ್ತಿ ಮಾತನಾಡಿದರು. ಶಿಕ್ಷಕರಾದ ಸೌಮ್ಯ, ವಿದ್ಯಾ, ಸುನಂದ, ಜಯಲಕ್ಷ್ಮಿ, ರುದ್ರಯ್ಯ ಡಿಂಗಾಲಿ ಇದ್ದರು.

ಸೋಲಾರ್ ತಂತಿ ತಗುಲಿ ಬಾಲಕ ಸಾವು
ಆಲೂರು: ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಸೋಲಾರ್ ತಂತಿ ಸ್ಪರ್ಶಗೊಂಡು ಬಾಲಕನೊಬ್ಬ ಭಾನುವಾರ ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ಗೋಪಿನಾಥ್ ಎಂಬವರ ಪುತ್ರ ಲಿಖಿತ್ (9) ಮೃತಪಟ್ಟ ಬಾಲಕನಾಗಿದ್ದು, ಜೋಳದ ಒಲಕ್ಕೆ ಹಾಕಲಾಗಿದ್ದ ತಂತಿ ತಗುಲಿದ ಪರಿಣಾಮ ವೋಲ್ಟೇಜ್ ಹೆಚ್ಚಾಗಿ ಬಾಲಕ ಮೃತಪಟ್ಟಿದ್ದಾನೆ. ಆಲೂರು ಪಟ್ಟಣ ಪೊಲೀಸ್ ಠಾಣೆಯವರು ಮೊಕದ್ದಮೆ ದಾಖಲಾಗಿದೆ.

ಉನ್ನತ ಮೌಲ್ಯಗಳ ರೂಢಿಸಿಕೊಳ್ಳಲು ಕರೆ
ಹಾಸನ: ಸಂಸ್ಕಾರಯುಕ್ತ ನಡವಳಿಕೆ, ಉನ್ನತ ಮೌಲ್ಯಗಳನ್ನು ರೂಢಿಸಿಕೊಂಡು ತಂದೆ ತಾಯಿಯರಿಗೆ, ಓದಿದ ಕಾಲೇಜಿಗೆ, ಹುಟ್ಟಿದ ಊರಿಗೆ, ಸಮಾಜಕ್ಕೆ ಯೋಗ್ಯವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಪ್ರಜ್ಞಾವಂತ ಪ್ರಜೆಗಳಾಗಿ ಎಂದು ಸಕಲೇಶಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುಮಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.