ಅಂಕಗಳಿಗೆ ವಿದ್ಯಾಭ್ಯಾಸ ಸೀಮಿತ: ವಿಷಾದ
ಹಾಸನ: ಅಂಕಗಳಿಗೆ ಮಾತ್ರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಸೀಮಿತಗೊಳಿಸುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಕಾಳಚನ್ನೇ ಗೌಡ ವಿಷಾದಿಸಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮೇಲ್ಜಾಜಾತಿಯವರಿಗೆ ಹಾಗೂ ಉಳ್ಳವರಿಗೆ ಮಾತ್ರ ಶಿಕ್ಷಣದ ಎಲ್ಲಾ ಅವಕಾಶಗಳು ದೊರೆಯುತ್ತಿತ್ತು. ಪ್ರಸ್ತುತ ಸಮಾನತೆ ಎಂಬುದು ಎಲ್ಲೆಡೆ ಮನೆ ಮಾಡಿದ್ದು, ಬಡವ-ಶ್ರೀಮಂತ, ಮೇಲು- ಕೀಳು ಜಾತಿಗಳನ್ನು ಲೆಕ್ಕಿಸದೇ ಪ್ರತಿಯೊಬ್ಬ ವಿದ್ಯಾರ್ಥಿಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಲಿಕೆಗೆ ಅವಕಾಶ ದೊರೆಯುತ್ತದೆ. ಇದರೊಂದಿಗೆ ಸ್ಪರ್ಧೆಗಳೂ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧೆಯ ನಾಗಾಲೋಟಕ್ಕೆ ಸನ್ನದ್ಧರಾಗಬೇಕೆಂದು ಕಿವಿಮಾತು ಹೇಳಿದರು.
ಕಡ್ಡಾಯ ಮತದಾನಕ್ಕೆ ಕರೆ: ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಕೆ.ವಿ. ರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನಾತ್ಮಕವಾಗಿ ದೊರೆತಿರುವ ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಖೇನ ಸದೃಢ ರಾಷ್ಟ್ರ ನಿರ್ಮಿಸಲು ಸಹಕಾರಿಯಾಗಬೇಕಿದೆ ಎಂದು ಹೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿದರು.
ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಹಾಗೂ ಪ್ರಖ್ಯಾತ ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರನ್ನು ಗೌರವಿಸಲಾಯಿತು.
ಸಲಹೆ: ನಂತರ ಮಾತನಾಡಿದ ಆರ್.ಪಿ. ವೆಂಕಟೇಶಮೂರ್ತಿ, ಪ್ರಶಸ್ತಿ, ಸನ್ಮಾನಗಳ ಹಿಂದೆ ನಾವು ಹೋಗ ಬಾರದು. ಅವು ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದರಲ್ಲದೇ ಕಡ್ಡಾಯ ಮತದಾನದ ಪ್ರಜ್ಞೆ ಎಲ್ಲರಲ್ಲಿರಬೇಕು ಎಂದು ಸಲಹೆ ನೀಡಿದರು.
ಅಧ್ಯಯನದಿಂದ ಜ್ಞಾನ: ಚಿತ್ರಕಲಾವಿದ ಬಿ.ಎಸ್. ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಪ್ರೀತಿ- ಪ್ರೇಮದ ಜಂಜಾಟದಲ್ಲಿ ತಮ್ಮ ಸಮಯವನ್ನು ವ್ಯರ್ಥಮಾಡದೆ ವಿದ್ಯಾಭ್ಯಾಸದ ಕಡೆಗೆ ಚಿತ್ತ ಹರಿಸಬೇಕು.
ವೈಜ್ಞಾನಿಕ ಮನೋಭಾವ, ನಿರಂತರ ಅಧ್ಯಯನಗಳಿಂದ ಮಾತ್ರ ಜ್ಞಾನಬುತ್ತಿ ಸಂಪಾದಿಸಲು ಸಾಧ್ಯ. ಆದರೆ, ವೈಜ್ಞಾನಿಕ ಪ್ರಗತಿ ಹೆಚ್ಚಾಗುತ್ತಿರುವಂತೆ ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎಮ್.ಎಲ್. ಮುರಳೀಧರ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ. ಮಧುಶ್ರೀ, ಕ್ರೀಡಾ ನಿರ್ದೇಶಕ ಎನ್.ಎಸ್.ಎಸ್.ಅಧಿಕಾರಿಗಳಾದ ಕೃಷ್ಣಪ್ಪ, ಶಶಿ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗೇಗೌಡ ಸೇರಿದಂತೆ ವಿಭಾಗದ ಮತ್ತಿತರ ಪ್ರಾಧ್ಯಾಪಕರು ಇದ್ದರು.
ಗಾಳಿ, ಮಳೆಗೆ ಬಾಳೆತೋಟಕ್ಕೆ ಹಾನಿ, ಸಿಡಿಲಿಗೆ ಮನೆ ಜಖಂ
ಸಕಲೇಶಪುರ: ಬಿರುಗಾಳಿ ಹಾಗೂ ಮಳೆಗೆ ತಾಲೂಕಿನ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿದ್ದರೆ, ಸಿಡಿಲಿಗೆ ಮನೆಯೊಂದು ಜಖಂಗೊಂಡಿದ್ದು, ಬಾಳೆತೋಟ ನಾಶಗೊಂಡ ಘಟನೆ ಬುಧವಾರ ನಡೆದಿದೆ.
ಪಟ್ಟಣ ಸೇರಿದಂತೆ ಬೆಳಗೋಡು ಹಾಗೂ ಕಸಬಾ ಹೋಬಳಿಯಲ್ಲಿ ಗುಡುಗು ಸಿಡಿಲಿನ ಸಹಿತ ಸುರಿದ ಗಾಳಿ ಮಳೆಯಿಂದಾಗಿ ಜೆ.ಪಿ. ನಗರದ ರಾಮೇಗೌಡ ಎಂಬುವವರ ಮನೆಗೆ ಸಿಡಿಲು ಬಡಿದು ಮನೆ ಹೆಂಚುಗಳು ಪುಡಿಯಾಗಿದ್ದು, ಮನೆಯೊಡತಿಯ ಕೈಗೆ ಪೆಟ್ಟುಬಿದ್ದಿದೆ.
ಮಳಲಿ ಗ್ರಾಮದ ಪುಟ್ಟರಾಜು ಎಂಬುವವರ ಸುಮಾರು ಎರು ಎಕರೆ ನೇಂದ್ರ ಬಾಳೆ ತೋಟ ಬಿರುಗಾಳಿಯಿಂದಾಗಿ ನೆಲಸೇರಿದ್ದು ಲಕ್ಷಾಂತರ ರು. ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48 ರಾಟೇಮನೆ ಸಮೀಪ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

