ಹಾಸನ

ಹೊಳೆನರಸೀಪುರ ತಾಲೂಕಲ್ಲಿ ಶೇ. 79 ಮತದಾನ

Published On :

ಹೊಳೆನರಸೀಪುರ: ಪ್ರಸಕ್ತ ಲೋಕಸಭಾ ಚುನಾವಣೆಗೆ ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 79ರಷ್ಟು ಮತದಾನವಾಗಿದ್ದು, ಎಲ್ಲೆಡೆ ಯಾವುದೇ ಘರ್ಷಣೆ-ಗಲಭೆಗಳಿಲ್ಲದೇ, ಬಹುತೇಕ ಶಾಂತಿಯುತವಾಗಿ ಮತದಾನವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನದಲ್ಲಿ ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಕೋಡಿಹಳ್ಳಿ ಹಾಗೂ ಬಸವನಾಯಕನಹಳ್ಳಿ ಗ್ರಾಮಗಳಲ್ಲಿನ ಮತಗಟ್ಟೆಗಳಲ್ಲಿ ಅತಿ ಹೆಚ್ಚು ಅಂದರೆ ಶೇ. 96ರಷ್ಟು ಮತದಾನವಾಗಿದ್ದರೆ, ಪಡುವಲಹಿಪ್ಪೆಯಲ್ಲಿ ಶೇ. 91ರಷ್ಟು, ಪಟ್ಟಣದಲ್ಲಿನ ಕೃಷಿ ಇಲಾಖೆಯಲ್ಲಿನ ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ ಶೇ. 58ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿ ಮತದಾನ ಮಾಡಿದ ಗಣ್ಯರಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಕುಟುಂಬದೊಂದಿಗೆ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇನ್ನುಳಿದಂತೆ ಕಾಂಗ್ರೆಸ್ ನಾಯಕಿ ಅನುಪಮಾ ಪಟ್ಟಣದ 11ವಾರ್ಡ್‌ನಲ್ಲಿ ಮತದಾನ ಮಾಡಿದರು.
ಶಾಂತಿಯುತ ಮತದಾನ: ತಾಲೂಕಿನಲ್ಲಿ ಬೆಳಗಿನಿಂದ ಮತದಾನವು ಅಷ್ಟೇನೂ ಬಿರುಸಿನಿಂದ ನಡೆಯದೇ, ಮಧ್ಯಾಹ್ನದ ವೇಳೆಗೆ ಹಂತ ಹಂತವಾಗಿ ಮತದಾನದಲ್ಲಿ ಬಿರುಸು ಕಂಡಿತು. ಯಾವ ಮತಗಟ್ಟೆಗಳಲ್ಲಿಯೂ ಅಹಿತಕರ ಘಟನೆಗಳು, ಗುಂಪು ಘರ್ಷಣೆಗಳು ನಡೆದಿಲ್ಲ.
ಅಲ್ಲದೇ, ಈ ಬಾರಿಯ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಸಕಲ ಸಿದ್ಧತೆ ಹಾಗೂ ಭದ್ರತೆಯಿಂದ ನಡೆಸಿದ ಪರಿಣಾಮವಾಗಿ ಲೋಕಸಭಾ ಚುನಾವಣೆಯ ಆರಂಭದಿಂದ ಮತದಾನದ ದಿನದವರೆವಿಗೂ ಕಳೆದ ಹಲವು ಚುನಾವಣೆಗಳ ಮಾದರಿಯಲ್ಲಿ ಚುನಾವಣಾ ಕಾವು ಅಷ್ಟೇನೂ ಕಾಣದೇ ಹೋಗಿದ್ದು ವಿಶೇಷವಾಗಿತ್ತು.
ಕೈಕೊಟ್ಟಿದ್ದ ಮತಯಂತ್ರ:ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಗ್ಯಾರಳ್ಳಿ, ಮೂಡಲಹಿಪ್ಪೆ, ಐಚನಹಳ್ಳಿ ಗ್ರಾಮಗಳಲ್ಲಿನ ಮತಗಟ್ಟೆಗಳಲ್ಲಿ ಇವಿಎಂ ಮತಯಂತ್ರಗಳು ಕೈಕೊಟ್ಟ ಪರಿಣಾಮವಾಗಿ ಕೆಲ ಕಾಲ ಮತದಾನಕ್ಕೆ ತಡವಾಗಿದ್ದು, ಕೂಡಲೇ ಸದರಿ ಮತಯಂತ್ರಗಳನ್ನು ಬದಲಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಮತಕೇಂದ್ರಗಳಲ್ಲಿ ಇವಿಎಂ ಮತಯಂತ್ರಗಳು ಕೈಕೊಟ್ಟ ಪರಿಣಾಮವಾಗಿ ಮತದಾನದ ಅಂತ್ಯದಲ್ಲಿ ಮತದಾನ ಮಾಡಲು ಕಾಲಾವಕಾಶ ನೀಡಲಾಗುವುದು ಎಂದು ಇಲ್ಲಿನ ಸಹಾಯಕ ಚುನಾವಣಾಧಿಕಾರಿ ಸುಜ್ಞಾನಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.