ಅರಸೀಕೆರೆಗೆ ಸಮಸ್ಯೆಗಳದ್ದೇ ಹೊರೆ!
-ಪಿ. ಶಾಂತಕುಮಾರ್
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಏ.20
ಇಲ್ಲಿನ ನಾಗರಿಕರ ಮೂಲಭೂತ ಸಮಸ್ಯೆ ನಿವಾರಿಸುವಲ್ಲಿ ಪಟ್ಟಣದ ಪುರಸಭೆ ವಿಫಲವಾಗಿದೆ.
ಅಲ್ಪಸಂಖ್ಯಾತರು, ದಲಿತರೇ ಹೆಚ್ಚಾಗಿ ವಾಸಿಸುತ್ತಿರುವ ಹಾಸನ ರಸ್ತೆ ಬಡಾವಣೆಯ ಬಹುತೇಕ ಭಾಗಗಳಲ್ಲಿ ಸುತ್ತಮುತ್ತಲ ಪರಿಸರ ಕಲುಷಿತಗೊಂಡಿದ್ದು, ಅಶುಚಿತ್ವದ ವಾತಾವರಣ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಳ ಭೀತಿಯನ್ನು ಜನರು ಎದುರಿಸುತ್ತಿದರೂ ಪುರಸಭೆ ಎಚ್ಚೆತ್ತುಕೊಂಡು ಸರಿಪಡಿಸುವ ಕಾರ್ಯಕ್ಕೆ ಕೈಹಾಕದಿರುವುದು ಅದರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಾಸನ ರಸ್ತೆಯ 5ನೇ ವಾರ್ಡ್ ಈ ಹಿಂದೆ ಪುರಸಭೆಯ ಮಾಜಿ ಅಧ್ಯಕ್ಷ ಪಿ. ದೇವಕುಮಾರ್ ಪ್ರತಿನಿಧಿಸುತ್ತಿದ್ದು, ಈಗ ಜೆಡಿಎಸ್ನ ಸುರೇಶ್ ಸದಸ್ಯರಾಗಿದ್ದು, ಈ ವಾರ್ಡಿನ ನಾಲ್ಕನೇ ಕ್ರಾಸ್ನಲ್ಲಿ ರಾಜಕಾಲುವೆ ಹರಿದುಹೋಗಿದೆ. ಇದನ್ನು ಅನೇಕ ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಕಸಕಡ್ಡಿಗಳು ಕೊಳೆತು ಅಲ್ಲಿಯೇ ನಿಂತು ಅಸಹ್ಯಕರವಾದ ವಾತಾವರಣ ಸೃಷ್ಟಿಸಿದೆ. ಅಲ್ಲದೆ ಆ ಕಸಕಡ್ಡಿಗಳ ಮೇಲೆ ಗಿಡಗಂಟೆಗಳು ಬೆಳೆದು ಸೊಳ್ಳೆಗಳು ಹೆಚ್ಚಾಗಿ ಡೆಂಘೀ, ಮಲೇರಿಯಾ, ಚಿಕನ್ ಗುನ್ಯಾ ರೋಗಗಳ ಭೀತಿ ಜನರಲ್ಲಿ ಆವರಿಸಿದೆ.
ಕಳಪೆ ಕಾಮಗಾರಿ: ಈ ರಸ್ತೆಯ 3ನೇ ವಾರ್ಡ್ ಈ ಹಿಂದೆ ಪುರಸಭಾ ಉಪಾಧ್ಯಕ್ಷ ಶಾಂತರಾಜ್ ಪ್ರತಿನಿಧಿಸುತ್ತಿದ್ದು, ಈಗ ಜೆಡಿಎಸ್ನ ನಾಜೀಮ್ ಸದಸ್ಯರಾಗಿದ್ದಾರೆ. ಹಾಸನ ರಸ್ತೆಯ ಎಡಭಾಗದ ಎರಡನೇ ಕ್ರಾಸ್ನಲ್ಲಿ ಸೇತುವೆಯೊಂದು ಪುರಸಭೆಯ ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಮುರಿದುಬಿದ್ದು, ದೊಡ್ಡ ಕಂದಕ ನಿರ್ಮಾಣವಾಗಿ ದಶಕಗಳೇ ಉರುಳಿವೆ. ಆದರೂ ಇದನ್ನು ರಿಪೇರಿ ಮಾಡಿಸದ ಕಾರಣ ದ್ವಿ ಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ರಾತ್ರಿಯ ವೇಳೆ ಅಪಘಾತಕ್ಕೆ ಸಿಲುಕಿ ಗಾಯಗೊಂಡಿರುವ ಹಲವಾರು ಉದಾಹರಣೆಗಳು ಸಿಗುತ್ತವೆ. ಇದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಪುರಸಭೆ ಮುಂದಾಗದಿರುವುದು ವಿಪರ್ಯಾಸ.
ಇದರ ಸಮೀಪದಲ್ಲೇ ನಗರ ಪೊಲೀಸ್ ಠಾಣೆ ಶಿವಕುಮಾರ್ ಆಸ್ಪತ್ರೆ, ಅರ್ಬನ್ ಬ್ಯಾಂಕ್, ಜಗದ್ಗುರು ಶ್ರೀ ಕೋಡಿಮಠ ಪ.ಪೂ. ಕಾಲೇಜಿದ್ದು, ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ಈ ಚರಂಡಿಗಳತ್ತ ಗಮನ ಹರಿಸದಿರುವುದನ್ನು ಅರಿತ ರೇಲ್ವೆ ಇಲಾಖೆ ಕೂಡ ಚರಂಡಿಯನ್ನೇ ಮುಚ್ಚಿ ಭಾರಿ ವಾಹನಗಳು ಚಲಿಸದಂತೆ ಕಬ್ಬಿಣದ ತಡೆಗೋಡೆ ನಿರ್ಮಿಸಿದ್ದು, ಮಳೆಯ ನೀರಾಗಲಿ ಅಥವಾ ಕೊಳಚೆ ನೀರಾಗಲಿ ಹರಿಯದಂತಹ ವಾತಾವರಣ ನಿರ್ಮಾಣ ಮಾಡಿದೆ.
ಅಲ್ಲದೆ ಮೇಲ್ಭಾಗದ ಎರಡು ಬದಿಯಲ್ಲಿ ವಾಸಿಸುವ ಜನರು ಕಸಕಡ್ಡಿಗಳನ್ನು ಹಾಕಲು ಬೇರೆಯ ಸ್ಥಳವಿಲ್ಲದ ಕಾರಣ ಅದನ್ನು ಕೆಳಗೆ ಹಾಕುತ್ತಿರುವುದರಿಂದ ಅದು ಈ ಚರಂಡಿಗಳನ್ನು ತುಂಬಿ ಕೊಳೆತು ನಾರುತ್ತಿವೆ.
ಇನ್ನು ಕೆಲವೆಡೆ ತುಂಬಿ ಹೋಗಿರುವುದರಿಂದ ಮಳೆ ಬಂದಾಗ ನೀರು ಹರಿಯಲು ಸ್ಥಳವಕಾಶವಿಲ್ಲದೆ ಈ ಕೊಳೆತು ನಾರುತ್ತಿವೆ. ಇದರಿಂದ ಈ ರಸ್ತೆ ಹಾಗಾಗ ಹಾಳಾಗಿ ಗುಂಡಿಗೊಟರುಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ.
ಚರಂಡಿಯ ಮೇಲ್ಬಾಗದಲ್ಲಿ ಹಾಕಿರುವ ಕಲ್ಲುಗಳನ್ನು ಅಲ್ಲಲ್ಲಿ ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಪಾದಚಾರಿಗಳು ಇದರಲ್ಲಿ ಬಿದ್ದು, ತೊಂದರೆಯಾಗಿರುವ ಅನೇಕ ಘಟನೆಗಳು ನಡೆದಿದೆ. ಅಲ್ಲದೆ ಇದರಿಂದ ದುರ್ನಾತ ಇನ್ನು ಹೆಚ್ಚಾಗಿ ತೊಂದರೆ ಅನುಭವಿಸುವಂತಾಗಿದೆ.
ಈ ಎರಡು ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಿಯಾಗಿ ಅರಿವುವಂತೆ ಮಾಡಿ ಮೇಲ್ಭಾಗದ ಕಲ್ಲುಗಳನ್ನು ಸಮವಾಗಿ ಜೋಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ರೇಲ್ವೆ ಇಲಾಖೆಯ ಕಬ್ಬಿಣದ ತಡೆಗೋಡೆ ನಿರ್ಮಾಣಕ್ಕಾಗಿ ಚರಂಡಿಯನ್ನೇ ಮುಚ್ಚಿರುವುದರಿಂದ ಪರ್ಯಾಯ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕೆಂಬ ನಾಗರಿಕರ ಕೂಗಿಗೆ ಪುರಸಭೆ ಸ್ಪಂದಿಸಿ ಕೆಲಸ ಮಾಡದೆ ನಿದ್ರಾವಸ್ಥೆಯಲ್ಲಿರುವುದು ದುರ್ದೈವದ ಸಂಗತಿ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಪುರಸಭೆಯ ಆಡಳಿತ ನಿದ್ದೆಯಿಂದ ಎಚ್ಚೆತ್ತು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವರೆ ಕಾದು ನೋಡಬೇಕಾಗಿದೆ.
ಮೂಗು ಮುಚ್ಚಿಕೊಂಡು...
ಪಟ್ಟಣದಿಂದ ಹಾಸನ ಹಾಗೂ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಸನ ರಸ್ತೆಯಲ್ಲಿ ರೇಲ್ವೆ ಮೇಲ್ಸೇತುವೆ ಹಾದು ಹೋಗಿದ್ದು, ಕೆಳಭಾಗದ ಎರಡು ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದುಹೋಗಲು ನಿರ್ಮಿಸಿರುವ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡು ಅನೇಕ ವರ್ಷಗಳು ಕಳೆದು ಹೋದರೂ ಸ್ವಚ್ಛತೆಯಿಲ್ಲದೆ ಕೊಳೆತು ನಾರುತ್ತಿರುವುದು ದುರ್ನಾತ ಬೀರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

