ಹಾಸನ

ಜೈವಿಕ ಇಂಧನದಿಂದ ಆರ್ಥಿಕಾಭಿವೃದ್ಧಿ

Published On :

ಹಾಸನ: ಕೃಷಿಕರು ಹೊಂಗೆ, ಹಿಪ್ಪೆ, ಬೇವು, ಜಟ್ರೋಪ, ಸಿಮರೂಬ ಜೈವಿಕ ಇಂಧನ ಮರಗಳನ್ನು ಬದುವಿನ ಮೇಲೆ ಆಹಾರಧಾನ್ಯ ಬೆಳೆಗಳಿಗೆ ಪೈಪೋಟಿ ಇಲ್ಲದ ರೀತಿ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದು ಪರಿಸರ ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ಜೈವಿಕ ಇಂಧನ ಉತ್ಪಾದಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುವಂತೆ ನಬಾರ್ಡ್‌ನ ಸಿ.ಜಿ.ಎಂ. ಚಿಂತಾಲ್ ಕರೆ ನೀಡಿದರು.
ಮಡೆನೂರಿನ ಜೈವಿಕ ಇಂಧನ ಉದ್ಯಾನದಲ್ಲಿ ಮಂಗಳವಾರ ನಬಾರ್ಡ್, ಜೈವಿಕ ಇಂಧನ ಉದ್ಯಾನ ಹಾಗೂ ಕೃಷಿ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಎಣ್ಣೆ ತೆಗೆಯುವ ಯಂತ್ರಗಳ ವಿತರಣೆ ಹಾಗೂ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬೆನ್ಜ್ ಕಾರಿಗೆ ಜೈವಿಕ ಇಂಧನ: ಹರಿಯಾಣದಲ್ಲಿ ಜೈವಿಕ ಇಂಧನವನ್ನು ಬೆನ್ಜ್ ಕಾರು ಹಾಗೂ ವಿಮಾನಗಳಿಗೆ ಪ್ರಯೋಗಿಕವಾಗಿ ಬಳಸಲಾಗುತ್ತಿದೆ ಎಂದರು.
ಜೈವಿಕ ಇಂಧನ ತಯಾರದ ನಂತರ ದೊರೆಯುವ ತ್ಯಾಜ್ಯವನ್ನು ಗೊಬ್ಬರವಾಗಿ ಬಳಕೆ ಮಾಡುವುದರಿಂದ ಸಾವಯವ ಕೃಷಿಗೆ ಸಹಕಾರಿಯಾಗಲಿದೆ ಎಂದ ಅವರು ಕರ್ನಾಟಕವನ್ನು ಜೈವಿಕ ಇಂಧನ ರಾಜಧಾನಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಕೃಷಿಕರಿಗೆ ನಬಾರ್ಡ್‌ನಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಅಧಿಕ ಲಾಭ: ಜೈವಿಕ ಇಂಧನ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿ ತಡೆಯಬಹುದು. ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಪರಿಸರವನ್ನು ನಿತ್ಯ ಹಸಿರಾಗಿಸಬಹುದು.  ಉತ್ಪಾದಕರ ಸಂಘದ ಮೂಲಕ ಯಂತ್ರಗಳಿಂದ ಜೈವಿಕ ಇಂಧನ ತಯಾರಿಸಿ ಮಾರಾಟ ಮಾಡಿದಲ್ಲಿ ಅಧಿಕ ಲಾಭ ಗಳಿಸಬಹುದಾಗಿದೆ ಎಂದರು.
ಫಲವತ್ತತೆ ಹೆಚ್ಚಿಸಬಹುದು: ಅಂತಾರಾಷ್ಟ್ರೀಯ ಕೃಷಿ ಅರಣ್ಯ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ನವೀನ್ ಶರ್ಮ ಮಾತನಾಡಿ, ಭಾರತ ದೇಶ ಇಂಧನಕ್ಕಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಇದರ ಬದಲು ಅಗತ್ಯವಿರುವ ಇಂಧನ ಉತ್ಪಾದನೆಗೆ ಒತ್ತು ನೀಡಿ ಜೈವಿಕ ಇಂಧನ ಉತ್ಪಾಧಿಸುವ ಮೂಲಕ ನೈಸರ್ಗಿಕ ಪರಿಸರ ಉತ್ತಮಗೊಳಿಸಬಹುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದರು.  
ರೈತರ ಕೂಟ: ನಬಾರ್ಡ್ ಎ.ಜಿ.ಎಂ. ಮಂಗಳಾ ಮಾತನಾಡಿ, ರೈತರ ಕೂಟ ರಚಿಸಿ ಅದರ ಮೂಲಕ ಇಂಧನ ಉತ್ಪಾದನಾ ಯಂತ್ರಗಳನ್ನು ನೀಡಲಾಗುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೊರತುಪಡಿಸಿ ಉಳಿದ ಏಳು ತಾಲ್ಲೂಕುಗಳಲ್ಲಿ ರೈತರ ಕೂಟ ರಚಿಸಲಾಗಿದೆ ಎಂದರು.
ಅಭಿನಂದನೆ: ಮಡೆನೂರು ಕೃಷಿ ಕಾಲೇಜಿನ ಡೀನ್ ಡಾ.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಡೆನೂರು ಜೈವಿಕ ಇಂಧನ ಉದ್ಯಾನದ ಮುಖ್ಯಸ್ಥ ಡಾ. ಬಾಲಕೃಷ್ಣೇಗೌಡ ಅವರು ಉತ್ತಮ ಕೆಲಸ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಇಂಧನ ಉದ್ಯಾನಕ್ಕೆ ವಿಶೇಷ ಸ್ಥಾನಮಾನ ದೊರಕುವಂತೆ ಮಾಡಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಮಡೆನೂರು ಜೈವಿಕ ಇಂಧನ ಉದ್ಯಾನದ ಮುಖ್ಯಸ್ಥ ಡಾ. ಬಾಲಕೃಷ್ಣೇಗೌಡ ಸ್ವಾಗತಿಸಿದರು, ಡಾ. ಗಿರೀಶ್ ವಂದಿಸಿದರು. ಶಾಂತಮ್ಮ ಪ್ರಾರ್ಥಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.