ಹಾಸನ

ಮೃತ್ಯುವಿನ ಬಾಯಿಗೆ ಬಿದ್ರೂ ಬದುಕಿದರು!

Published On :

ಹಾಸನ: ಅರಕಲಗೂಡು ತಾಲೂಕಿನ ಬರಗೂರು ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ಆದರೆ, ಯಾವುದೇ ಸಾವು- ನೋವು ಸಂಭವಿಸಿಲ್ಲ.
ಪಟ್ಟಣದ ಹೊರವಲಯದ ಮುತ್ತಿಗೆ ಗೇಟ್ ಬಳಿ ಗೂಡ್ಸ್ ವ್ಯಾನ್, ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸುವ ಸಲುವಾಗಿ ಬಲಕ್ಕೆ ತಿರುಗಿಸಿದ ಪರಿಣಾಮ ಚಾಲಕನ ಹಿಡಿತಕ್ಕೆ ಸಿಗದೇ ವಾಹನ ಉರುಳಿದೆ. ಗೂಡ್ಸ್‌ನಲ್ಲಿ ಚಾಲಕ ಸೇರಿದಂತೆ ಮತ್ತೋರ್ವ ಕುಳಿತಿದ್ದರು.  
ಅಕ್ಕಪಕ್ಕದ ಗ್ರಾಮಸ್ಥರು ಕೂಡಲೇ ಸ್ಥಳಕ್ಕಾಗಮಿಸಿ ಹಗ್ಗ ಕಟ್ಟಿ ವಾಹನವನ್ನು ಮೇಲೆಳೆದು ನಿಲ್ಲಿಸಿದ್ದಾರೆ. ವಾಹನಕ್ಕೆ ಸಣ್ಣ ಪ್ರಮಾಣದ ಹಾನಿ ಆಗಿದ್ದು, ಯಥಾಸ್ಥಿತಿಯಲ್ಲಿ ಮಾಲೀಕ ಕೊಂಡೊಯ್ದಿದ್ದಾರೆ.
ಆಗ್ರಹ: ಇತ್ತೀಚೆಗಷ್ಟೇ ರಾಮನಾಥಪುರ- ಅರಕಲಗೂಡು ನಡುವಿನ ರಸ್ತೆಯಲ್ಲಿನ ಗುಂಡಿ ತಪ್ಪಿಸುವ ಸಲುವಾಗಿ ಕಳೆದ ತಿಂಗಳಷ್ಟೇ ಮತ್ತೊಂದು ಮಿನಿ ಲಾರಿ ಕೂಡ ಇದೇ ರೀತಿ ಗುಂಡಿಗೆ ನುಗ್ಗಿದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಚಾಲಕ ತೀವ್ರವಾಗಿ ಗಾಯಗೊಂಡಿದ್ದ. ಆದ್ದರಿಂದ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ  ಗುಂಡಿಗೆ ಮಣ್ಣು ಹಾಕುವ ಕೆಲಸ ನಿರ್ವಹಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಿಡಿಗೇಡಿಗಳಿಂದ ಶುಂಠಿ ಬೆಳೆ ನಾಶ
ಬೇಲೂರು: ಪಟ್ಟಣದ ಪಂಪ್ ಹೌಸ್ ರಸ್ತೆಯಲ್ಲಿ ಯಗಚಿ ನದಿ ದಂಡೆಯ ಬಳಿ ಆನಂದ್ ಎಂಬುವವರು ನಾಟಿ ಮಾಡಿದ್ದ 12 ಚೀಲ ಶುಂಠಿಯನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ಇತ್ತೀಚೆಗೆ ನಡೆದಿದೆ. ಬೀಜದ ಶುಂಠಿಯನ್ನು ಬಿತ್ತನೆ ಮಾಡಿ 3 ತಿಂಗಳು ಕಳೆದಿತ್ತು. ಗಿಡಗಳು ಹುಲುಸಾಗಿ ಬೆಳೆದಿತ್ತು. ಇದನ್ನು ಸಹಿಸದ ಕಿಡಿಗೇಡಿಗಳು ರಾತ್ರಿ ವೇಳೆ ಕಿತ್ತುಹಾಕಿದ್ದಾರೆ. ಆದರೆ, ಅದೃಷ್ಟವಷಾತ್ ಶುಂಠಿಯನ್ನು ತೆಗೆದುಕೊಂಡು ಹೋಗದೆ ಹಾಗೇ ಬಿಟ್ಟಿದ್ದಾರೆ. ಶುಂಠಿಯ ಮೌಲ್ಯ ಹಾಗೂ ಈವರೆಗೆ ಮಾಡಿರುವ ವೆಚ್ಚ ಸೇರಿ ರು. 75 ಸಾವಿರ ನಷ್ಟವಾಗಿದೆ ಎಂದು ರೈತ ಆನಂದ್ ತಿಳಿಸಿದ್ದಾರೆ. ಬೇಲೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳ ಪರಿಶೀಲಿಸಿದರು. ಶುಂಠಿ ಕಿತ್ತಿರುವ ಆರೋಪಿಗಳನ್ನು ಹಿಡಿದು ಬಂಧಿಸು ವಂತೆ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಸ್ವಾಮಿಗೌಡ ಒತ್ತಾಯಿಸಿದ್ದಾರೆ.
ಎಂಟು ಮಂದಿ ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ ನೇರ್ಲಿಗೆ ಗ್ರಾಮದ ಶಂಕರೇಗೌಡರ ತೋಟದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಪಾಂಡು ರಂಗಯ್ಯ, ಶಿವಣ್ಣ, ಸಿದ್ದಪ್ಪ, ಉಮಾ ಕಾಂತ, ಮಂಜುನಾಥ , ಸಣ್ಣವರದ ನಾಯಕ, ನೀಲಕಂಠಪ್ಪ , ಸಿದ್ದಬಸಪ್ಪ ಎಲ್ಲರೂ ತಾಲೂಕಿನ ನೇರ್ಲಿಗೆ ಗ್ರಾಮ ದವರು ಎಂದು ಗುರುತಿಸಲಾಗಿದೆ. ಪಣಕ್ಕಿಟ್ಟಿದ್ದ ರು. 3,155 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಹಿನ್ನಲೆಯಲ್ಲಿ ಜಾವಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.