ಹಾಸನ

ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು

Published On :

ಅರಸೀಕೆರೆ:  ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಕಂಡು ಸಹಿಸದ ಕೆಲವರು ಕುತಂತ್ರಿಗಳು ಅಭಿವೃದ್ದಿ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದರು.
ತಾಲೂಕಿನ ಬಾಣಾವರ ಮಾರ್ಗದಿಂದ ಬಿ. ಮಲ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 6.7 ಕಿ.ಮೀ ಉದ್ದದ ರಸ್ತೆಯ ಡಾಂಬರೀಕರಣ ಕಾಮಾಗಾರಿಗೆ ಬಿ.ಮಲ್ಲಾಪುರ ಗ್ರಾಮದಲ್ಲಿ ಗುದ್ದಲಿ ಪೂಜೆಯನ್ನು  ನೆರವೇರಿಸಿ ಚಾಲನೆ ನೀಡಿದರು.
ಶೇ. 80ರಷ್ಟು ಯಶಸ್ವಿ: ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ತಾವು ಕ್ಷೇತ್ರದ ಗ್ರಾಮೀಣ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶೇ.80 ರಷ್ಟು ಯಶಸ್ವಿಯಾಗಿದ್ದೇನೆ. ಇದಕ್ಕೆ ಅಡ್ಡಿ ಮಾಡುತ್ತಿರುವವರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 3.64 ಕೋಟಿ ರು.ಗಳ ವೆಚ್ಚದಲ್ಲಿ ಈ ರಸ್ತೆಯ ಅಭಿವೃದ್ದಿ ಕಾರ್ಯಕ್ಕೆ ಹಣ ಮಂಜೂರಾಗಿದ್ದು ತಾಲೂಕಿನ ಬಿ.ಮಲ್ಲಾಪುರ ಮಾರ್ಗವಾಗಿ ಬಸವನಹಳ್ಳಿ, ಬೈರಾಪುರ, ಉಪ್ಪಿನಹಳ್ಳಿ, ವೆಂಕಟಪುರ ಮಾರ್ಗವಾಗಿ ಬಾಣಾವರ ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ  ಕಲ್ಪಿಸುವ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡುವ ಮೂಲಕ ಈ ಭಾಗದ ಗ್ರಾಮೀಣಾ ಜನತೆಯ ಸುಗಮ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ ಎಂದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ಕ್ಷೇತ್ರದಲ್ಲಿನ ಪ್ರತಿಯೊಂದು ಸಮಾಜಕ್ಕೂ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಲ್ಲದೆ ನೂರಾರು ಪುರಾತನ ದೇವಾಲಯಗಳ ಜೀಣೋದ್ದಾರ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
 ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲಕ್ಷ್ಮಣ್, ಕುರುವಂಕ ಗ್ರಾಪಂ ಅಧ್ಯಕ್ಷ ಕರಿನಾಯಕ, ಬಾಣಾವಾರ ಗ್ರಾಪಂ  ಅಧ್ಯಕ್ಷ ಜಿ.ಕೆ.ಸತೀಶ್, ಶ್ಯಾನೇಗೆರೆ ಗ್ರಾಪಂ ಅಧ್ಯಕ್ಷ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಅಶೋಕ್, ಕಾಚೀಘಟ್ಟ ಗ್ರಾಪಂ ಅಧ್ಯಕ್ಷ ಮಂಜುನಾಥ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಮಂತ್ ಕುಮಾರ್ ಹಾಗೂ ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.