ಹೇಮಾವತಿ ನಾಲೆ ಒಡೆದ ಪ್ರಕರಣ ತನಿಖೆಗೆ ಎಚ್.ಡಿ. ರೇವಣ್ಣ ಆಗ್ರಹ
ಹಾಸನ: ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆಯದೇ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಮೂಲಕ ನೀರಾವರಿ ಸಚಿವರು ನಿರ್ಲಕ್ಷ್ಯ ಮತ್ತು ಅಜ್ಞಾನವನ್ನು ಮೆರೆದಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿ ಏತಕ್ಕೆ ಇದೆ ಎಂಬುದು ಸಹ ಸಚಿವರಿಗೆ ತಿಳಿದಿಲ್ಲ. ಸಮಿತಿಯಲ್ಲಿ ಈವರೆಗೂ ಒಂದು ಸಭೆಯನ್ನು ಕರೆದು ಚರ್ಚೆ ಮಾಡಿಲ್ಲ. ನಾನು ಸಚಿವನಾಗಿದ್ದಾಗ ರೈತರ ವ್ಯವಸಾಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ವಾಡಿಕೆ ಮಳೆಗಿಂತ ಮೊದಲ ನೀರನ್ನು ಬಿಡಲಾಗಿತ್ತು. ಆದರೆ ನೀರಾವರಿ ಸಚಿವರು ಈವೆರಗೂ ಯಾವುದೇ ತೀರ್ಮಾನ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಯೋಜನೆ ಅನುಷ್ಠಾನವಾಗಿಲ್ಲ: ಇನ್ನು ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಿಲ್ಲ. ಕಾವೇರಿ ಜಲಾನಯನ ಪ್ರದೇಶದವರಾದಂತಹ ಮುಖ್ಯಮಂತ್ರಿಗಳು ಸಹ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ. ರಾಜ್ಯ ಸರ್ಕಾರ ತಮ್ಮ ಬಜೆಟ್ ಮಂಡನೆ ಮಾಡಿ ಐದಾರು ತಿಂಗಳು ಕಳೆದಿದ್ದರು ಯೋಜನೆಗಳು ಅನುಷ್ಠಾನಗೊಂಡಿಲ್ಲ ಎಂದು ದೂರಿದರು.
ತನಿಖೆಗೆ ಆಗ್ರಹ: ಕಳೆದ 17 ವರ್ಷದಿಂದ ತುಮಕೂರಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಆದರೆ ತುಮಕೂರಿನವರು 1 ಎಕರೆಯನ್ನು ಅಚ್ಚುಕಟ್ಟು ಪ್ರದೇಶವೆಂದು ಘೋಷಣೆ ಮಾಡಿಕೊಂಡಿಲ್ಲ. ತುಮಕೂರಿನವರ ಒತ್ತಡಕ್ಕೆ ಮಣಿದು ಹೇಮಾವತಿ ಮೂಲಕ ಚನ್ನರಾಯಪಟ್ಟಣದ ನಾಲೆಗಳಿಗೆ ನೀರು ಹರಿಸಿದ ಪರಿಣಾಮವಾಗಿ ಇತ್ತೀಚೆಗೆ ಚನ್ನಪಟ್ಟಣ ಸಮೀಪ ನಾಲೆ ಒಡೆದು ಕೋಟ್ಯಂತರ ರು. ನಷ್ಟ ಉಂಟಾಗಿದೆ. ನಾಲೆ ನಿರ್ಮಾಣವಾದ ಒಂದೆರಡು ದಿನಗಳಲ್ಲಿಯೇ ನಾಲೆಯಲ್ಲಿ ನೀರು ಹರಿಸಿದ್ದರಿಂದ ನಾಲೆ ಒಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಇಲಾಖೆಯು ವಿದ್ಯುತ್ ಪರಿವರ್ತಕ (ಟಿಸಿ)ಗಳನ್ನು ಅಳವಡಿಸಲು 10 ಸಾವಿರ ರು.ಗಳನ್ನು ವಸೂಲಿ ಮಾಡುತ್ತಾರೆ. ಆದರೆ ಅದು ಒಂದು ತಿಂಗಳು ಸಹ ಬರೋದಿಲ್ಲ. ಈ ಬಗ್ಗೆ ಎಂಡಿಯನ್ನು ವಿಚಾರಿಸಿದರೆ ಅವರು ಅಸಹಾಯಕರಾಗಿದ್ದಾರೆ. ಇಲ್ಲಿರುವಂತಹ ಚೆಸ್ಕಾಂನ ಎಂಜಿನಿಯರ್ ಜನರಿಂದ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದ ಅವರು, ಸರಿಯಾಗಿ ವಿದ್ಯುತ್ ನೀಡದ ಕಾರಣ ಕುಡಿಯುವ ನೀರಿಗೆ ಹಾಗೂ ವ್ಯವಸಾಯಕ್ಕೆ ತೊಂದರೆ ಉಂಟಾಗಿದೆ ಎಂದರು. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹೊನ್ನವಳ್ಳಿ ಸತೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

