ಹಾಸನ

ಹಳೆ ವಿದ್ಯಾರ್ಥಿಗಳ ಸಂಗಮ ಮರೆಯಲಾಗದ ಅನುಭವ

Published On :

ಮಂಡ್ಯ: ಹಳೆಯ ವಿದ್ಯಾರ್ಥಿಗಳ ಸಂಗಮ ಮರೆಯಲಾಗದ ಅನುಭವ ಎಂದು ಹಿರಿಯ ವಿದ್ಯಾರ್ಥಿನಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಕೆ.ಎಂ. ಗಾಯಿತ್ರಿ ಶನಿವಾರ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳ ಸಮಾಗಮದ ಮಿಲನ ಸಿರಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನಲ್ಲಿ ತಾವು ಓದುತ್ತಿದ್ದ ವೇಳೆ ಆದ ಅನುಭವವನ್ನು ಕೆ.ಎಂ.ಗಾಯಿತ್ರಿ ಹೊಸ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ನಡೆದ ಘಟನೆಗಳನ್ನು ಆಗಾಗ್ಗೆ ನೆನೆಪು ಮಾಡಿಕೊಳ್ಳುತ್ತೇನೆ. ಸ್ನೇಹಿತೆಯರೊಂದಿಗೆ ಕಳೆದ ಆ ಕ್ಷಣಗಳು, ತಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ಸದಾ ಕಾಲ ಸ್ಮರಿಸುತ್ತೇನೆ. ಕಾಲೇಜಿನ ವಾತಾವರಣವನ್ನು ನೋಡಿದರೆ ಮಾತುಗಳೇ ಬರುತ್ತಿಲ್ಲ. ಮಹಿಳಾ ಸರ್ಕಾರಿ ಕಾಲೇಜು ಮಿನಿ ಗಂಗೋತ್ರಿಯೇ ಸರಿ ಎಂದರು.
ಕಾಲೇಜು ಪ್ರಾಂಶುಪಾಲೆ ಲೀಲಾ ಅಪ್ಪಾಜಿಯವರು ನನಗೂ ಗುರುಗಳಾಗಿದ್ದರು. ಸ್ಫೂರ್ತಿಯ ಚಿಲುಮೆಯಾಗಿ ನನ್ನ ಸಾಧನೆಗೆ ಪರೋಕ್ಷ ಮಾರ್ಗದರ್ಶಕರೂ ಆಗಿದ್ದಾರೆ ಎಂದು ಹೇಳಿದರು.
ಮುಖ್ಯವಾಹಿನಿಗೆ ಬರಲಿ: ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಸದಸ್ಯೆ ನಾಗರೇವಕ್ಕ, ಹೆಣ್ಣು ಮಕ್ಕಳನ್ನು ಕಳುಹಿಸದ ಒಂದು ಕಾಲವಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಪೋಷಕರ ಮನೋಭಾವ ಬದಲಾಗಿದೆ. ಸಮಾಜದಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿನಿಯರು ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಪ್ರಭಾವತಿ ಉದ್ಘಾಟಿಸಿದರು. ಪ್ರಾಂಶುಪಾಲೆ ಲೀಲಾ ಅಪ್ಪಾಜಿ, ಅನುಪಮ, ಶುಭಶ್ರೀ, ಭವಾನಿ ಲೋಕೇಶ್ ಉಪಸ್ಥಿತರಿದ್ದರು. ಹಳೆಯ ವಿದ್ಯಾರ್ಥಿಗಳು ತಾವೇ ತಯಾರಿಸಿದ ತಿಂಡಿ-ತಿನಿಸುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ ಅವರನ್ನೂ ಖುಷಿಪಡಿಸುತ್ತಿದ್ದರು. ಶಾವಿಗೆ-ಕಾಯಿ ಹಾಲು, ಒಬ್ಬಟ್ಟು, ಕಜ್ಜಾಯ, ಮುದ್ದೆ, ಮೊಳಕೆ ಕಟ್ಟಿದ ಕಾಳು ಸಾರು, ರವೆ ಉಂಡೆ, ನಿಪ್ಪಟ್ಟು, ಸಕ್ಕರೆ ಮಿಠಾಯಿ, ಕೋಡುಬಳೆ, ಪುರಿ ಉಂಡೆ, ಸಕ್ಕರೆ ಅಚ್ಚು, ಬಾದಾಮ್ ಪೂರಿ, ರವೆ ಇಡ್ಲಿ, ವಾಂಗೀಬಾತ್, ಬಿಸಿಬೇಳೆ ಬಾತ್, ಪುಳಿಯೊಗರೆ ಮಿಕ್ಸ್‌ಗಳು ಅಲ್ಲಿದ್ದವು. ಹಿರಿಯ ವಿದ್ಯಾರ್ಥಿಗಳು ಮಾಡಿದ ರುಚಿಯಾದ ತಿಂಡಿ ತಿನಿಸುಗಳನ್ನು ಕಿರಿಯ ವಿದ್ಯಾರ್ಥಿನಿಯರು ತಿಂದು ಸಂತೃಪ್ತ ಭಾವ ವ್ಯಕ್ತಪಡಿಸಿದರು.
ಕಾಲೇಜು ವಿದ್ಯಾರ್ಥಿಗಳಿಗಾಗಿ ಗ್ಲಾಸ್ ಜೋಡಿಸುವುದು, ತಲೆಯ ಮೇಲೆ ಹೆಸರುಕಾಳಿನ ಡಬ್ಬಿ ಇಟ್ಟುಕೊಂಡು ಅದರಿಂದ ಪಿನ್ ತೆಗೆಯುವುದು, ಬಟ್ಟೆ ಪಿನ್ ಜೋಡಿಸುವುದು, ಸ್ಟ್ರಾಗಳನ್ನು ತಲೆಗೆ ಹಾಕಿಕೊಳ್ಳುವುದು, ಛತ್ರಿಯೊಳಗೆ ಬಾಲ್ ಹಾಕುವುದು, ಹಿಂಬದಿಯಿಂದ ಬಕೆಟ್‌ಗೆ ಬಾಲ್ ಹಾಕುವುದು, ಕೈಗೆ ಹಣೆಬಟ್ಟು ಅಂಟಿಸುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವುದು ಸೇರಿದಂತೆ ಹತ್ತು ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿನಿಯರು ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.