ಹಾಸನ

ಮಳೆ: ಸಕಲೇಶಪುರ ತಾ. ಶಾಲಾ ಕಾಲೇಜುಗಳಿಗೆ 2 ದಿನ ರಜೆ

Published On :

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಅತ್ಯಧಿಕವಾಗಿ ಮಳೆಯಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಮಕ್ಕಳು ಹೋಗಿ ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿರುವುದರಿಂದ ಸಕಲೇಶಪುರ ಉಪವಿಭಾಗಾಧಿಕಾರಿ ಮಧುಕೇಶ್ವರ ಅವರು ಆ.6 ಮತ್ತು 7ರಂದು ಎರಡು ದಿನಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯವರ ಪ್ರಸ್ತಾವನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ನೀಡಿದ ಮೌಖಿಕ ಆದೇಶದಂತೆ ಸಕಲೇಶಪುರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಮತ್ತು ಅಂಗನವಾಡಿ, ಶಿಶುವಿಹಾರ ಕೇಂದ್ರಗಳಿಗೆ ಮಳೆ ಪ್ರಯುಕ್ತ ರಜೆ ನೀಡಿರುವುದಾಗಿ ಉಪವಿಭಾಗಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ
ಅರಸೀಕೆರೆ:  ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಸುಮಾರು 5 ಲಕ್ಷ ರು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಕ್ಷರ ದಾಸೋಹ ಅಡುಗೆ ಕೊಠಡಿಯನ್ನು ನಿವೃತ್ತ ಮುಖ್ಯ ಶಿಕ್ಷಕ ಶಿವಣ್ಣ ಉದ್ಘಾಟಿಸಿದರು.
ಬಾಯ್ಲರ್ ಸೌಲಭ್ಯ: ಬಿಇಓ ಎಸ್.ಪಿ. ನಟರಾಜಾ ಮಾತನಾಡಿ 500 ವಿದ್ಯಾರ್ಥಿಗಳಿಗಿಂತ ಅಧಿಕ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಶಾಲೆಗಳಿಗೆ ಸರ್ಕಾರವೇ ಅಡುಗೆ ತಯಾರಿಕೆಗಾಗಿ ಉಚಿತ ಬಾಯ್ಲರ್ ಸೌಲಭ್ಯ ಕಲ್ಪಿಸಿಕೊಡಲಿದೆ. ಇದರಿಂದಾಗಿ ಬಹುಬೇಗ ಅಡುಗೆ ಸಿದ್ಧಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸಂಭವನೀಯ ಅಪಾಯವನ್ನು  ತಡೆಯಲು ಸಾಧ್ಯವಿದೆ ಎಂದರು.  ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್, ಕಾರ್ಯದರ್ಶಿ ನಿಜಗುಣ, ಶಾಲಾ ಮುಖ್ಯ ಶಿಕ್ಷಕಿ ಅಂಬಿಕಾ, ವೀರಶೈವ ಸಮಾಜದ ಮುಖಂಡ ಗಂಜೀಗೆರೆ ಬಸವರಾಜ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾ. ಒಕ್ಕಲಿಗರ ನೌಕರರ ಸಂಘದ ಉದ್ಘಾಟನೆ ನಾಳೆ
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಒಕ್ಕಲಿಗರ ನೌಕರರ ಸಂಘದ ಉದ್ಘಾಟನೆ ಆ.7ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ದ್ಯಾವೇಗೌಡ ತಿಳಿಸಿದರು.  ಸಂಘದ ಉದ್ಘಾಟನೆಯನ್ನು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಲಿದ್ದು, ಸಂಸದ ಎಚ್.ಡಿ ದೇವೇಗೌಡ, ಎಚ್.ಡಿ ರೇವಣ್ಣ,  ಆದಿಚುಂಚನಗಿರಿ  ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕುಂದೂರು ಮಠದ ರಾಮಯ್ಯ ಪರದೇಶಿ ಸ್ವಾಮೀಜಿ ಭಾಗವಹಿಸಲಿದ್ದು, ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.   ಒಕ್ಕಲಿಗ ಸಮುದಾಯದಲ್ಲಿನ ಕಡು ಬಡವ ವಿದ್ಯಾರ್ಥಿಗಳಿಗೆ  ಆರ್ಥಿಕ ಸಹಾಯ ಮಾಡುವ ಮುಖೇನ ವ್ಯಾಸಂಗ ಮಾಡಲು ಸಹಾಯಹಸ್ತ ನೀಡುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು. ಸಹಕಾರ ಪತ್ತಿನ ಸೊಸೈಟಿ ತೆರೆದು  ಸಾಲ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.