ಹಾಸನ

ಅಕ್ರಮ ಮರಳು: ಗ್ರಾಮ ಸಹಾಯಕನ ಮೇಲೆ ಹಲ್ಲೆ

Published On :

ಆಲೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿ ತಡೆದು ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಚಾಲಕ ಗ್ರಾಮ ಸಹಾಯಕನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಮಚ್ಚು ತೋರಿಸಿ ಬೆದರಿಕೆ ಹಾಕಿ ಆತನನ್ನು ಲಾರಿಯಿಂದ ಹೊರದಬ್ಬಿ ಲಾರಿ ಸಮೇತ ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಮಗ್ಗೆ ಗ್ರಾಮ ಸಹಾಯಕ ಲೋಕೇಶ್ ಹಲ್ಲೆಗೊಳಗಾಗದ ವ್ಯಕ್ತಿ. ತಾಲೂಕಿನ ಕರಡಿಬೆಟ್ಟ ಎಸ್ಟೇಟ್ ರಸ್ತೆಯಲ್ಲಿ ಸೋಮವಾರ ಸಂಜೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೆಎ-2, ಎಸಿ-1369 ನಂಬರಿನ ಲಾರಿಯನ್ನು ಗ್ರಾಮ ಲೆಕ್ಕಿಗರಾದ ಮಹೇಶ್ ಮತ್ತು ಚಂದ್ರಶೇಖರ್ ಮಗ್ಗೆ ಗ್ರಾಮ ಲೆಕ್ಕಿಗರ ಕಚೇರಿ ಬಳಿ ಹಿಡಿದಿದ್ದರು. ಗ್ರಾಮ ಸಹಾಯಕ ಲೋಕೇಶ್ ಎಂಬವರನ್ನು ಲಾರಿಯೊಂದಿಗೆ ಆಲೂರಿಗೆ ಕಳುಹಿಸಿ ಮಹೇಶ್ ಹಾಗೂ ಚಂದ್ರಶೇಖರ್ ಬೈಕ್ನಲ್ಲಿ ಲಾರಿ ಹಿಂಬಾಲಿಸಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಲಾರಿ ಬೇರೆ ದಾರಿಯಲ್ಲಿ ಕೊಂಡೊಯ್ದ ಚಾಲಕ ಜತೆಗಿದ್ದ ಲೋಕೇಶ್ ಮೇಲೆ ಹಲ್ಲೆ ನಡೆಸಿ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಲೋಕೇಶ್ನನ್ನು ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲೂರು ಹಾಗೂ ಸಕಲೇಶಪುರ ತಾಲೂಕಿನ ಹೇಮಾವತಿ ನದಿ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಗೆ ನಡೆಯುತ್ತಿದೆ. ಕಳೆದ 3 ದಿನಗಳಲ್ಲಿ ತಹಸೀಲ್ದಾರ್ ಹಾಗೂ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ 30ಕ್ಕೂ ಹೆಚ್ಚು ಲಾರಿಗಳನ್ನು ಹಿಡಿದಿದ್ದಾರೆ. ಪ್ರತಿ ದಿನವೂ ಈ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಮರಳನ್ನು ಕದ್ದು ಸಾಗಣೆ ಮಾಡುತ್ತಿದ್ದಾರೆ. ಹೊಸ ಮರಳು ನೀತಿ ಜಾರಿ ಬಾರದ ಕಾರಣ ಎಲ್ಲೆಡೆ ಮರಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ವಿಪರೀತವಾಗಿದೆ. ಇತ್ತೀಚೆಗಷ್ಟೆ ಚನ್ನರಾಯಪಟ್ಟಣದ ತಹಸೀಲ್ದಾರ್ ಅವರ ಮೇಲೆ ಅಕ್ರಮ ಜಲ್ಲಿ ಸಾಗಾಣಿಕೆದಾರರು ಲಾರಿ ಹತ್ತಿಸಿ ಹತ್ಯೆಗೈಯಲು ಯತ್ನಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ಜರುಗಿರುವುದು ಸಾರ್ವಜನಿಕರಲ್ಲಿ ದಿಗ್ಬ್ರಮೆ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.