ಹಾಸನ

ಗುತ್ತಿಗೆ ನೌಕರರ ಮುಷ್ಕರ: ಏಡ್ಸ್ ಪೀಡಿತರ ಪರದಾಟ

Published On :

ಟಿ ಪಿ. ರವಿಕುಮಾರ್
ಕನ್ನಡಪ್ರಭ ವಾರ್ತೆ, ಹಾಸನ, ಫೆ. 3
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಗುತ್ತಿಗೆ ನೌಕರರು ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಎಚ್ಐವಿ (ಏಡ್ಸ್) ಸೋಂಕಿನಿಂದ ಬಳಲುತ್ತಿರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ನಗರದ ಶ್ರೀಜಯಚಾಮರಾಜೇಂದ್ರ ಆಸ್ಪತ್ರೆಯ ಎಆರ್ಟಿ ಕೇಂದ್ರದಲ್ಲಿ ಇಬ್ಬರು ವೈದ್ಯರು, ಆಪ್ತ ಸಮಾಲೋಚಕ, ಲ್ಯಾಬ್ ಟೆಕ್ನೀಷಿಯನ್, ಡಾಟಾ ಮ್ಯಾನೇಜರ್, ಫಾರ್ಮಸಿಸ್ಟ್ ಸೇರಿದಂತೆ 11 ಮಂದಿ ಸಿಬ್ಬಂದಿಗಳಿದ್ದಾರೆ. ತಾಲೂಕುಗಳಲ್ಲಿ ಇರುವ ಐಟಿಸಿಟಿಯಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಒಬ್ಬ ವೈದ್ಯರನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ಸಿಬ್ಬಂದಿಗಳು ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಗುತ್ತಿಗೆ ನೌಕರರ ಸಂಘದಿಂದ ನೇಮಕಗೊಂಡಿದ್ದಾರೆ.
ತೊಂದರೆ: ಈಗ ಜಿಲ್ಲಾಸ್ಪತ್ರೆಯಲ್ಲಿ ಡಾ. ನಿತೀನ್ ಎಂಬ ಒಬ್ಬ ಸರ್ಕಾರಿ ವೈದ್ಯ ಮಾತ್ರ ಆಂಟಿರಿಟ್ರೋವಿರಲ್ ಥೆರಪಿ (ಎಆರ್ಟಿ ಸೆಂಟರ್) ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮತ್ತೊಬ್ಬ ವೈದ್ಯೆ ಪೂರ್ಣಿಮಾ ಸೇರಿದಂತೆ ಜಿಲ್ಲೆಯಲ್ಲಿ ಇರುವ ಐಟಿಸಿಟಿ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವುದರಿಂದ ಎಚ್ಐವಿ ಸೋಂಕಿತರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ತೊಂದರೆಗೀಡಾಗಿದ್ದಾರೆ.
ಜಿಲ್ಲೆಯಲ್ಲಿ 6 ಸಾವಿರ ಮಂದಿ ಎಚ್ಐವಿ ಸೋಂಕಿತರಿದ್ದಾರೆ. ಇವರಿಗೆ ಚಿಕಿತ್ಸೆಯು ಬಹಳ ಮುಖ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅವರ ಪ್ರಾಣಕ್ಕೆ ಕುತ್ತು ಉಂಟಾಗಲಿದೆ. ಸಿಬ್ಬಂದಿಗಳು ಜ. 30ರಿಂದ ತಮ್ಮ ಮುಷ್ಕರವನ್ನು ಪ್ರಾರಂಭಿಸಿ 5 ದಿನ ಕಳೆದಿದ್ದು, ಇದರಿಂದಾಗಿ ಎಚ್ಐವಿ ಸೋಂಕಿತರು ಮಾನವ ಪ್ರತಿರೋಧನ ಶಕ್ತಿ ಚಿಕಿತ್ಸೆ (ಸಿಡಿ4 ರಕ್ತ ಚಿಕಿತ್ಸೆ) ಹಾಗೂ ಕಿಡ್ನಿ ಚಿಕಿತ್ಸೆ ಮಾಡಿಸಲು ಸಾಧ್ಯವಾಗುತ್ತಿಲ್ಲ.
ರೋಗಿಗಳು ವಾಪಸ್: ಜೊತೆಗೆ ಕೌನ್ಸಿಲಿಂಗ್ ಸರಿಯಾಗಿ ನಡೆಯುತ್ತಿಲ್ಲ, ಸೋಂಕಿತರಲ್ಲಿ ಸ್ಥೈರ್ಯ ತುಂಬುವಂತಹ ಕಾರ್ಯಗಳು ಸಹ ಆಗುತ್ತಿಲ್ಲ. ಹಾಗೆಯೇ ಔಷಧಿಗಳು ಸಹ ಸರಿಯಾಗಿ ಲಭ್ಯವಾಗದ ಕಾರಣ ಸೋಂಕಿತರ ಪಾಡು ಹೇಳತೀರದಾಗಿದೆ. ಜಿಲ್ಲೆಯಲ್ಲಿ ಕೇವಲ ಒಬ್ಬ ವೈದ್ಯ ಮಾತ್ರ ಎಚ್ಐವಿ ಏಡ್ಸ್ ಪೀಡಿತ ರೋಗಿಗಳ ಚಿಕಿತ್ಸೆಯ ಕಾರ್ಯ ನಡೆಸುತ್ತಿದ್ದಾರೆ. ಪ್ರತಿನಿತ್ಯ ಎಚ್ಐವಿ ಸೋಂಕಿತರು ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕೇವಲ ಒಬ್ಬ ವೈದ್ಯನಿಗೆ ಚಿಕಿತ್ಸಾ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಬಂದಂತಹ ರೋಗಿಗಳು ವಾಪಸ್ ತೆರಳುವಂತಾಗಿದೆ.
ಸಿಬ್ಬಂದಿ ಜ. 30ರಿಂದ ಪ್ರತಿಭಟನೆ ಪ್ರಾರಂಭಿಸಿದ ದಿನದಂದು 21 ಜನ ಎಚ್ಐವಿ ಸೋಂಕಿತರು, ಜ. 31ರಂದು 51 ಸೋಂಕಿತರು, ಫೆ. 1ರಂದು 65 ಸೋಂಕಿತರು ಹಾಗೂ ಫೆ.3ರಂದು 60ಕ್ಕೂ ಹೆಚ್ಚು ಸೋಂಕಿತರಿಗೆ ವೈದ್ಯ ನಿತಿನ್ ಚಿಕಿತ್ಸೆ ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಮುಷ್ಕರದಂದ ಚಿಕಿತ್ಸಾ ಕಾರ್ಯ ನಡೆಯದ ಕಾರಣ ಸೋಂಕಿತರು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ವಾಪಸ್ ಹೋಗುತ್ತಿದ್ದಾರೆ.
ಎಚ್ಐವಿ ಸೋಂಕಿತರಿಗೆ ತೊಂದರೆ ಆಗುತ್ತಿರುವುದರಿಂದ ಕೂಡಲೇ ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಮುಷ್ಕರ ಕೈಬಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.




ಎಆರ್ಟಿ ಕೇಂದ್ರ ಹಾಗೂ ಐಟಿಸಿಟಿ ಕೇಂದ್ರದ  ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಠಾವಧಿ ಮುಷ್ಕರ ನಡೆಸುತ್ತಿರುವುದರಿಂದ ಸೋಂಕಿತರಿಗೆ ತೊಂದರೆ ಉಂಟಾಗುತ್ತಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಆಗುತ್ತಿಲ್ಲ. ಔಷಧಿ ವಿತರಣೆಯಾಗುತ್ತಿಲ್ಲ. ಇದರಿಂದ ಸೋಂಕಿತರು ಸಂಕಷ್ಟ ಎದುರಿಸುವಂತಾಗಿದೆ.
ಟಿ  ಸುಕನ್ಯ, ಎಚ್ಐವಿ ರೋಗಿ


ಬೆದರಿಕೆ ಕರೆ
ಜಿಲ್ಲಾಸ್ಪತ್ರೆಯ ಎಆರ್ಟಿ ಸೆಂಟರ್ನಲ್ಲಿ ಕಾರ್ಯನಿರ್ವಹಿಸದೇ ಕೂಡಲೇ ಮುಚ್ಚಬೇಕು. ಇಲ್ಲವಾದಲ್ಲಿ ಮುಂದಾಗುವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಕರೆ ವೈದ್ಯ ನಿತಿನ್ಗೆ ಬಂದಿದೆ. ಆದರೆ, ವೈದ್ಯ ನಿತಿನ್ ಎಂದಿನಂತೆ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.