ಸರಳ ಕಾವ್ಯದಿಂದಲೇ ಜನಮಾನಸಕ್ಕೆ ಬೇಂದ್ರೆ ಹತ್ತಿರ
ಕ.ಪ್ರ.ವಾರ್ತೆ ಹಾಸನ ಜ. 3
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಸಹಜತೆಯಿಂದ ಕಾವ್ಯವನ್ನು ಅತ್ಯಂತ ಸರಳವಾಗಿ ರಚಿಸುವ ಮೂಲಕ ಜನಮಾನಸಕ್ಕೆ ಹತ್ತಿರವಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್. ಎಲ್. ಜನಾರ್ದನ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದ.ರಾ. ಬೇಂದ್ರೆ ಕಾವ್ಯ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರ ದ.ರಾ. ಬೇಂದ್ರೆಯವರ ಕಣತಿಗಳಲ್ಲಿ ಜನಪದರ ಬದುಕನ್ನು ಮತ್ತು ಭಾವವನ್ನು ಚಿತ್ರಿಸಿರುವ ರೀತಿ ಅನನ್ಯವಾಗಿದೆ ಎಂದರು.
ಶ್ರಾವಣ ಕವಿ ಎಂದೇ ಹೆಸರಾಗಿರುವ ಬೇಂದ್ರೆಯವರು ಭಾಷೆಯ ಸೊಗಡನ್ನು ಬಳಸಿಕೊಂಡಿರುವಂತೆ ಇತರರಿಗೆ ಸಾಟಿಯಾಗುತ್ತಾರೆ. ಬದುಕಿನಲ್ಲಿ ಸಂಕಟಗಳನ್ನು ಅನುಭವಿಸುತ್ತಲೇ ಬೆಂದು ಬದುಕಿದ ಬೇಂದ್ರೆ ಸಾಹಿತ್ಯ ಲೋಕದಲ್ಲಿ ಅದನ್ನೇ ಅಭಿವ್ಯಕ್ತಿಸಿದ್ದಾರೆ ಎಂದರು.
ಸ್ವಾರ್ಥದ ಬಗ್ಗೆ ಚಿಂತಿಸುವುದಿಲ್ಲ: ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸಿ.ಕೆ. ಹರೀಶ್ ಮಾತನಾಡಿ, ಕೆಲ ತಿಂಗಳ ಹಿಂದೆ ಸಾಧನಕೇರಿಗೆ ಭೇಟಿ ನೀಡಿದ್ದಾಗ ವಾಮನ ಬೇಂದ್ರೆಯವರನ್ನು ಮಾತನಾಡಿಸಿದ್ದೆ, ಆಗ ಅವರು ತಂದೆಯವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿ ಕೌಟುಂಬಿಕ ಕ್ಷೇಮದ ಬಗ್ಗೆ ನೀವು ಗಮನ ಹರಿಸುವುದಿಲ್ಲವೇಕೆ ಎಂದು ಪ್ರಶ್ನಿಸಿದ್ದಕ್ಕೆ ಬೇಂದ್ರೆಯವರು ತಂದೆಯಾಗಿ ನಾನು ಮಾಡಿದ ತಪ್ಪುಗಳನ್ನು ನೀನು ನಿನ್ನ ಮಕ್ಕಳಿಗೆ ಮಾಡಬೇಡ ಎಂದಿದ್ದರು. ಮನುಷ್ಯನೊಬ್ಬನನ್ನು ಬಿಟ್ಟರೆ ಯಾವ ಜೀವ ಸಂಕುಲವೂ ಸ್ವಾರ್ಥದ ಬಗ್ಗೆ ಚಿಂತಿಸುವುದಿಲ್ಲ ಎಂದು ಪದೇ ಪದೇ ನನ್ನ ಗಮನಕ್ಕೆ ತಂದಿದ್ದರು ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಗೊರೂರು ಶಿವೇಶ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ತಾಯಿಯ ಮೂಲಕ ತಮ್ಮನ್ನು ಪರಿಚಯಿಸಿಕೊಂಡ ಹೆಮ್ಮೆ ಬೇಂದ್ರೆಯವರದ್ದು, ಅವರು ತಮ್ಮ ತಾಯಿ ಅಂಬವ್ವ ಅವರ ಹೆಸರನ್ನು ಕಾವ್ಯನಾಮವಾಗಿ ಇಟ್ಟುಕೊಂಡು ಅಂಬಿಕಾತನಯ ದತ್ತ ಎಂದೇ ಪರಿಚಿತವಾಗಿದ್ದರು ಎಂದರು.
ಕರ್ನಾಟಕದಾದ್ಯಂತ ಪಸರಿಸಿದರು: ಸಂತಫಿಲೋಮಿನ ಕಾಲೇಜು ಉಪನ್ಯಾಸಕ ಐಚನಹಳ್ಳಿ ಕೃಷ್ಣಪ್ಪ ಮಾತನಾಡಿ, ಬೇಂದ್ರೆ ಯವರ ಸಾಹಿತ್ಯ ವಿರಾಟಟ್ಸ್ವರೂಪದಿಂದ ಕೂಡಿದೆ.
ಸಮಾಜದ ಎಲ್ಲ ಮಗ್ಗುಲುಗಳನ್ನು ಅನುಭವಗಳನ್ನು ತಮ್ಮ ಕವನಗಳ ಮೂಲಕ ಹೊರತಂದಿದ್ದಾರೆ. ಬೇಂದ್ರೆ ಎಂಬ ಸಾಹಿತ್ಯದ ಸೊಗಡನ್ನ ಉತ್ತರ ಕರ್ನಾಟಕದಿಂದ ಆರಂಭಗೊಂಡು ಇಡೀ ಕರ್ನಾಟಕದಾದ್ಯಂತ ಪಸರಿಸಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರ ಸಹಕಾರ ಅಗತ್ಯ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಮತೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನರ ಬಳಿಗೆ ಕಾರ್ಯಕ್ರಮವನ್ನು ತರುವ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದೆ. ಫೆ. 20ರಂದು ಗೊರೂರು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಪರಿಷತ್ತಿನ ಚಟುವಟಿಕೆಗಳಿಗೆ ಸಾರ್ವಜನಿಕ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಲೀಲಾವತಿ ವಾಸುದೇವ್, ಪರಿಷತ್ಕೋಶಾಧ್ಯಕ್ಷ ವಾಸುದೇವ್, ಅರಕಲಗೂಡು ಜಯಕುಮಾರ್, ಶಂಕರ್ ಇದ್ದರು. ಉದಯೋನ್ಮುಖ ಗಾಯಕ ಅರಕಲಗೂಡು ಅಜಿತ್ ಮತ್ತು ತಂಡದವರಿಂದ ಬೇಂದ್ರೆ ಗೀತ ಗಾಯನ ನಡೆಯಿತು. ಬೇಂದ್ರೆ ರಚಿತ ಗೀತೆಗಳು ಜನಮನಸೂರೆಗೊಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

