ಹಾಸನ

ರೈತರಿಂದ ವಿಧಾನಸೌಧ ಚಲೋ

Published On :

ಚನ್ನರಾಯಪಟ್ಟಣ: ಹಿರೀಸಾವೆ ಮತ್ತು ಜುಟ್ಟನಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಹಿರೀಸಾವೆ ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ವಿಧಾನಸೌಧದವರಗೆ ಕಾಲ್ನಡಿಗೆಯಲ್ಲಿ ಸಾಗಿದರು.
ಹಿರೀಸಾವೆಯ ಎಚ್.ಸಿ. ಶ್ರೀಕಂಠಯ್ಯ ಸರ್ಕಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನತೆ ಕಾಲ್ನಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹಿರೀಸಾವೆ ಹಾಗೂ ಜುಟ್ಟನಹಳ್ಳಿ ಕಾಮಗಾರಿ ವಿಳಂಬತೆಯನ್ನು ಖಂಡಿಸಿ ಹಾಗೂ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ಸುತ್ತಮುತ್ತಲಿನ ಜನತೆ ಕಾಲ್ನಡುಗೆಯಲ್ಲಿ ಪಾಲ್ಗೊಂಡರು.
ಶ್ರೀಕಂಠಯ್ಯರಿಂದ ಚಾಲನೆ: ಹಿರೀಸಾವೆ ಮತ್ತು ಜುಟ್ಟನಹಳ್ಳಿ ಏತ ನೀರಾವರಿ ಕಾಮಗಾರಿಗೆ 2004ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಸಿ. ಶ್ರೀಕಂಠಯ್ಯ ಅವರು ಚಾಲನೆ ನೀಡಿ ಕಾಮಗಾರಿಗೆ ಜನಿವಾರ ಕೆರೆ ಬಳಿ ಭೂಮಿ ಪೂಜೆ ನೆರವೇರಿಸಿದ್ದರು. ಆನಂತರ ಬಂದ ಸರ್ಕಾರ ರಾಜಕೀಯ ಹಗೆತನದಿಂದ ಕಾಮಗಾರಿಯನ್ನು ಪ್ರಾರಂಭಿಸದೇ 10 ವರ್ಷಗಳು ಕಳೆದಿದ್ದಾರೆ ಎಂದು ಆರೋಪಿಸಿದರು.
ಒಪ್ಪಿಗೆ ಸಿಕ್ಕಿರಲಿಲ್ಲ: ಕಾಲ್ನಡಿಗೆಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಕಳೆದ ಸರ್ಕಾರದಲ್ಲಿ ಹಿರೀಸಾವೆ ಮತ್ತು ಜುಟ್ಟನಹಳ್ಳಿ ಏತ ನೀರಾವರಿ ಕಾಮಗಾರಿಗೆ ರು.  50 ಕೋಟಿ ಹಣ ಮಂಜೂರಾಗಿದ್ದು, ಕಾಮಗಾರಿಗೆ ತಾಂತ್ರಿಕ ಒಪ್ಪಿಗೆ ದೊರೆತಿದೆ. ಕಾಮಗಾರಿಯನ್ನು ಮಂತ್ರಿ ಮಂಡಲ ಸಭೆಯಲ್ಲಿ ಒಪ್ಪಿಗೆ ಪಡೆಯುವುದಷ್ಟೇ ಬಾಕಿಯಿತ್ತು. ಆ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದ ಕಾರಣ ಕಾಮಗಾರಿಗೆ ಮಂತ್ರಿ ಮಂಡಲದ ಒಪ್ಪಿಗೆ ಸಿಗಲಿಲ್ಲ ಎಂದು ತಿಳಿಸಿದರು.
ಸಿಎಂ ಒಪ್ಪಿಗೆ: ಏತ ನೀರಾವರಿ ಯೋಜನೆಯ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಲೇಪನ ಮಾಡುವುದು ಬೇಡ ಯಾರ ಮೇಲೂ ಆಪಾದನೆ ಮಾಡದೆ, ರೈತರಿಗೆ ನೀರು ಕೊಡಿಸುವುದಷ್ಟೇ ತಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಹಿರೀಸಾವೆ ಭಾಗದ ರೈತರನ್ನು ಕರೆದೊಯ್ದು ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದ್ದು, ಅವರೂ ಕೂಡ ಸ್ಪಂದನೆ ನೀಡಿದ್ದಾರೆ ಎಂದು ತಿಳಿಸಿದರು.
ಸರ್ಕಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಚೇನಹಳ್ಳಿ, ಕಲ್ಲೆಸೋಮನಹಳ್ಳಿ, ಜುಟ್ಟನಹಳ್ಳಿ, ಹಳೇಬೀಡು ಮಾದಿಹಳ್ಳಿ ಏತ ನೀರಾವರಿ ಕಾಮಗಾರಿಗೆ ಆರ್ಥಿಕ ಮಂಜೂರಾತಿ ನೀಡಿ, ಸಮಿತಿ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ತಾವು ಹಿರೀಸಾವೆ ಜುಟ್ಟನಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯ್ ಕುಮಾರ್, ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ,  ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಮಧು ಕರಡೆ, ಹೀರೀಸಾವೆ ಹೋಬಳಿ ಅಧ್ಯಕ್ಷ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ್, ರೈತ ಸಂಘದ ನಾಗರಾಜು, ಕೃಷ್ಣೇಗೌಡ, ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.