ಹುಸಿಯಾಯ್ತು ಸಚಿವರ ಭರವಸೆ
- ಎಚ್.ವಿ. ರಾಘವೇಂದ್ರ
ಆಲೂರು: ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಫೆ. 10ರಿಂದಲೇ ಪ್ರಾರಂಭಿಸುವುದಾಗಿ ಅರಣ್ಯ ಸಚಿವ ರಮಾನಾಥ ರೈ ಅವರು ತಿಳಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಸರ್ಕಾರದಿಂದ ಆದೇಶ ದೊರೆತಿದ್ದು, ಕಾಡಾನೆಗಳನನ್ನು ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಮಾಗಡಿಹಳ್ಳಿ ಕ್ಯಾಂಪಿನಲ್ಲಿ ಕೇವಲ ಖಾಲಿ ಟೆಂಟನ್ನು ಹೊರತುಪಡಿಸಿದರೆ ಇನ್ಯಾವುದೇ ರೀತಿಯ ಕಾಡಾನೆ ಹಿಡಿಯುವ ತಯಾರಿ ನಡೆದಿಲ್ಲ! ಹೌದು, ಇದು ಸತ್ಯ.
ಸಚಿವರ ಆಶ್ವಾಸನೆ: ಸದನದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು ಕಾರ್ಯಾಚರಣೆಯನ್ನು ಶೀಘ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆದಿದ್ದಾಗ ಜ. 30ರಂದು ಸಂಬಂಧಪಟ್ಟ ಉನ್ನತಾಧಿಕಾರಿಗಳ ಸಭೆ ನಡೆಸಿ, ಫೆ. 5ರಿಂದಲೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಕಾರಣಾಂತರಗಳಿಂದಾಗಿ ಫೆ.10ಕ್ಕೆ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಆರ್ಎಫ್ಓ ಅವರೂ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದರು.
ಕಾರ್ಯಾಚರಣೆ ಯಾವಾಗ?: ಫೆ. 10ರಿಂದ ಕಾರ್ಯಾಚರಣೆ ಪ್ರಾರಂಭವಾಗಬೇಕಾದರೆ ಮೂರ್ನಾಲ್ಕು ದಿನಗಳ ಹಿಂದೆಯೇ ಸಾಕಾನೆಗಳೊಂದಿಗೆ ಮಾವುತರು, ಕಾವಾಡಿಗಳು, ಕಾಡುಕುರುಬರು ಸೇರಿದಂತೆ ಗುರಿಕಾರರು ಹಾಗೂ ಅರವಳಿಕೆ ಚುಚ್ಚಮುದ್ದಿನೊಂದಿಗೆ ವೈದ್ಯರು ಕ್ಯಾಂಪಿನಲ್ಲಿ ಬೀಡುಬಿಡಬೇಕಾಗಿತ್ತು. ಆದರೆ, ಈವರೆಗೂ ಕಾಡಾನೆಗಳೇ ಕ್ಯಾಂಪಿಗೆ ಬಂದಿಲ್ಲ. ಹಾಗಾದರೆ ಕಾರ್ಯಾಚರಣೆಯನ್ನು 10ರಿಂದ ಪ್ರಾರಂಭಿಸುವುದಾಗಿ ಸಾರ್ವಜನಿಕರಿಗೆ ಇವರು ಸುಳ್ಳು ಭರವಸೆ ನೀಡುತ್ತಿದ್ದಾರೆಯೇ? ಕಾರ್ಯಾಚರಣೆ ಪ್ರಾರಂಭವಾಗುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರ ಜನತೆ ಇದ್ದಾರೆ.
ಭಯದಲ್ಲಿ ಗ್ರಾಮಸ್ಥರು: ಅಲ್ಲದೆ ಕಾಡಾನೆಗಳು ಮಾದಿಹಳ್ಳಿ, ನಾಗಾವರ, ಕಲ್ಲಾರೆ, ಕಾಣಗೆರೆ, ಹೆಮ್ಮಿಗೆ, ಪುಡಿದೆಲೆ, ಅಡಿಬೈಲು, ಪುರಭೈರವನಹಳ್ಳಿ ಮುಂತಾದ ಗ್ರಾಮಗಳಲ್ಲಿ ಎಡೆಬಿಡದೆ ಪ್ರತಿದಿನ ದಾಳಿ ನಡೆಸುತ್ತಿದ್ದು, ಅಪಾಯಕಾರಿ ಒಂಟಿ ಸಲಗ ಗ್ರಾಮಗಳಿಗೆ ನುಗ್ಗಿ ಆತಂಕ ಉಂಟು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆ ಸರೋಜಮ್ಮ ಎಂಬವರನ್ನು ಪುರಭೈರವನಹಳ್ಳಿಯಲ್ಲಿ ಬಲಿ ತೆಗೆದುಕೊಂಡಿದ್ದ ಒಂಟಿ ಸಲಗವೇ ಶನಿವಾರ ಸಾರಿಗೆ ಬಸ್ಸನ್ನೇ ಅಡ್ಡಗಟ್ಟಿತ್ತು. ಅಲ್ಲದೇ, ಹಗಲು ವೇಳೆಯಲ್ಲೇ ಈ ಸಲಗ ನಿರ್ಭಯವಾಗಿ ಗ್ರಾಮದ ರಸ್ತೆಗಳಲ್ಲೇ ಓಡಾಡಿಕೊಂಡಿರುವುದು ಈ ಭಾಗದ ಜನರ ಭಯವನ್ನು ಇಮ್ಮಡಿಗೊಳಿಸಿದೆ. ಪ್ರತಿದಿನ ಲಕ್ಷಾಂತರ ರು. ಮೌಲ್ಯದ ಬೆಳೆ ನಾಶವಾಗುತ್ತಿದ್ದರೂ ಶೀಘ್ರ ಕಾಡಾನೆ ಹಿಡಿಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾದ ಜನತೆ ತಮಗೆ ಸಂಬಂಧವಿಲ್ಲದವರಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಡಿಸಿ ಮಾತಿಗೂ ಕಿಮ್ಮತ್ತಿಲ್ಲ
ಮದವೇರಿರುವ ಈ ಒಂಟಿ ಸಲಗ ಜನರು ಕಂಡರೆ ಅವರ ಮೇಲೆ ದಾಳಿ ನಡೆಸುವ ಚಾಳಿಗೆ ಬಿದ್ದಿದ್ದು, ಯಾವುದೇ ವಾಹನ ಸಿಕ್ಕಿದರೂ ದಾಳಿ ಮಾಡುತ್ತಿದೆ. ಔಪಚಾರಿಕವಾಗಿ ಸಲಗ ಹಿಡಿಯುವ ಕ್ಯಾಂಪ್ ಮಾಡಿ, ಕಾಟಾಚಾರಕ್ಕೆ ಮರಿಯಾನೆಯನ್ನು ಹಿಡಿದುಕೊಂಡು ಹೋಗಿರುವ ಅರಣ್ಯ ಇಲಾಖೆ ಸಿಬ್ಬಂದಿ, ಕನಿಷ್ಠ ಈ ಆನೆ ಇರುವಿಕೆಯನ್ನು ಗುರುತಿಸಿ ಗ್ರಾಮಸ್ಥರಿಗೆ ಮೈಕ್ಗಳ ಮೂಲಕ ಎಚ್ಚರಿಸುವಂತೆ ಜಿಲ್ಲಾಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ನೀಡಿದ್ದ ಆದೇಶವನ್ನೂ ಪಾಲಿಸುತ್ತಿಲ್ಲ. ಕಾಡಾನೆಗಳ ಹಿಂಡು ಇರುವ ಸ್ಥಳಗಳ ಬಗ್ಗೆಯು ಸಹ ಸಾರ್ವಜನಿಕರಿಗೆ ಮಾಹಿತಿ ನೀಡಿ ಅವರು ಎಚ್ಚರಿಕೆ ನೀಡುವಂತೆ ಡಿಸಿ ನೀಡಿದ್ದ ಸೂಚನೆಗೂ ಯಾವುದೇ ಮಾನ್ಯತೆಯನ್ನು ಅರಣ್ಯ ಇಲಾಖೆ ನೀಡಿದಂತಿಲ್ಲ.
ಮತ್ತೊಂದು ಬಲಿ ಬೇಕಾ?
ಎಲ್ಲಕ್ಕೂ ಮಿಗಿಲಾಗಿ, ಅರಣ್ಯ ಇಲಾಖೆ ಆನೆ ದಾಳಿ ಬಗ್ಗೆ ಈವರೆಗೂ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವನ್ನೇ ಕೈಗೊಂಡಿಲ್ಲ. ಆದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಕಾಡಾನೆಗೆ ಎದರುಬದರಾಗುತ್ತಿದ್ದಾರೆ. ಪುನಃ ಎನಾದರೂ ಕಾಡಾನೆ ದಾಳಿಗಿ ಸಿಲುಕಿ ಯಾರನ್ನಾದರೂ ಬಲಿ ಪಡೆದ ನಂತರ ಅರಣ್ಯ ಇಲಾಖೆಯವರು ಕ್ರಮಕೈಗೊಳ್ಳುತ್ತಾರೋ ಎಂಬ ಪ್ರಶ್ನೆ ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

