ದೇವರ ಕೃಪೆಯಿಂದ ಸಾರ್ಥಕತೆ: ಶೃಂಗೇರಿ ಶ್ರೀ
ಹೊಳೆನರಸೀಪುರ: ಸೃಷ್ಟಿ- ಸ್ಥಿತಿ ಮತ್ತು ಲಯಕ್ಕೆ ಪರಮಾತ್ಮನೇ ಕಾರಣನಾಗಿದ್ದು, ಆತನ ಕೃಪೆಯಿಂದಲೇ ಮನುಷ್ಯನ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದು ಶೃಂಗೇರಿ ಶಾರದಾ ಪೀಠಾಧ್ಯಕ್ಷ ಶ್ರೀ ಭಾರತೀತೀರ್ಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಚಾಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯವರ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ನೂತನ ದೇಗುಲವನ್ನು ಲೋಕಾರ್ಪಣೆಗೈದು ನಂತರ ನೆರೆದಿದ್ದ ಭಕ್ತಸಮೂಹಕ್ಕೆ ಆಶೀರ್ವಚನ ನೀಡಿದರು.
ಮನುಷ್ಯ ಅನಾದಿ ಕಾಲದಿಂದಲೂ ನಂಬಿಕೆಯಿಂದ ಬದುಕುತ್ತಾ ಬಂದಿದ್ದಾನೆ. ಭಗವಂತನೆಡೆಗೆ ಭಕ್ತಿ, ಶ್ರದ್ಧೆ ಎಂಬುದು ಮಾನವನಲ್ಲಿ ರಕ್ತವಾಗಿಯೇ ಬಂದಿರುತ್ತದೆ ಎಂದು ಹೇಳಿದ ಶ್ರೀಗಳು, ದೇವರನ್ನು ಪೂಜಿಸಿದವರೆಲ್ಲಾ ಭಗವದ್ಭಕ್ತರಾಗಲು ಸಾಧ್ಯವಿಲ್ಲ. ದ್ವೇಷವನ್ನು ತ್ಯಜಿಸಿ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣ, ನಾನು ಎಂಬ ಅಹಂಕಾರದ ಪರಿತ್ಯಾಗ, ಸುಖ ಮತ್ತು ದುಃಖದಲ್ಲಿ ಏಕರೂಪ ವ್ಯಕ್ತಿತ್ವವನ್ನು ಉಳ್ಳವನಾಗಿ ಇರುವವನು ಮಾತ್ರವೇ ಭಗವದ್ಭಕ್ತನಾಗಬಲ್ಲ ಎಂದು ಪೂಜ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇತಿಹಾಸ ತಿಳಿಸುವುದು: ಬೆಂಗಳೂರಿನ ಹಿರಿಯ ವಕೀಲ ಎಚ್. ಸುಬ್ರಹ್ಮಣ್ಯ ಜೋಯಿಸ್ ಮಾತನಾಡಿ, ಭಾರತದಲ್ಲಿನ ಸನಾತನ ಧರ್ಮವನ್ನು ಉಳಿಸುವಲ್ಲಿ ಸಂತವರೇಣ್ಯರ ಕಾರ್ಯ ಪ್ರಮುಖವಾಗಿದ್ದು, ಅರ್ವಾಚೀನವಾದ ಇತಿಹಾಸದ ಅಧ್ಯಯನದಿಂದ ಗೋಚರವಾಗುವುದೆಂದರೆ, ಎಲ್ಲಿ ಧರ್ಮಕ್ಕೆ ಚ್ಯುತಿ ಬರುತ್ತಿತ್ತೋ ಆಗ ಈ ಸಮಾಜದಲ್ಲಿ ಧಾರ್ಮಿಕ ಭಾವನೆ ಮತ್ತು ಚೈತನ್ಯವನ್ನು ಬೆಳೆಸಿ ಧರ್ಮ ಮತ್ತು ಆಚಾರವನ್ನು ಉಳಿಸಲು ಋಷಿ, ಮುನಿಗಳು ಹಾಗೂ ತಪಸ್ವಿಗಳು ಹುಟ್ಟುತ್ತಿದ್ದರು ಎಂದರು.
ಧಾರ್ಮಿಕ ಸಮಾರಂಭದಲ್ಲಿ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿದರು.
ಸನ್ಮಾನ: ಈ ಸಂದರ್ಭದಲ್ಲಿ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಶ್ರೀಗಳ ಸಮ್ಮುಖದಲ್ಲಿ ಅವರ ಆಶೀರ್ವಾದಗಳೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಶ್ರೀಗಳು ಸನ್ಮಾನಿಸಿದರು.
ಧಾರ್ಮಿಕ ಕಾರ್ಯಗಳು: ದೇವಾಲಯದ ಉದ್ಘಾಟನೆ ಪ್ರಯುಕ್ತವಾಗಿ ಸ್ವಸ್ತಿವಾಚನ, ಪುಣ್ಯಾಹ, ಕಲಶಾರಾಧನೆ, ರುದ್ರಹೋಮ, ದೇವತಾ ಪ್ರತಿಷ್ಠಾಂಗ ಪ್ರಧಾನ ಹೋಮಗಳು ಹಾಗೂ ನಾಗಪ್ರತಿಷ್ಠಾ ಸಂಬಂಧ ಪೂಜಾ ಕಾರ್ಯಕ್ರಮಗಳು ಶ್ರೀಗಳ ದಿವ್ಯಸಾನ್ನಿಧ್ಯದಡಿಯಲ್ಲಿ ನೆರವೇರಿದವು. ನಂತರ ಶ್ರೀಯವರ ಅಮೃತ ಹಸ್ತದಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನೆ, ಪೂಜೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಗಳು ನಡೆದವು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛಯಾಲಯದ ನ್ಯಾಯಾಧೀಶ ಅರವಿಂದಕುಮಾರ್, ಚೇನತ್ ನಾರಾಯಣ್, ನಾಗೇಂದ್ರನ್, ಕಾಲಭೈರವೇಶ್ವರ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪಟೇಲ್ ಸಿ.ಟಿ. ದೇವೇಗೌಡ, ಕಾರ್ಯದರ್ಶಿ ಶಿವಣ್ಣ, ದೇವಾಲಯದ ಪ್ರತಿಷ್ಠಾಪನಾ ಕಾರ್ಯದಲ್ಲಿನ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ಆಗಮಿಕರಾದ ಶೃಂಗೇರಿ ಶಾರದಾ ಪೀಠದ ವೇ.ಬ್ರ.ಶ್ರೀ ಸೀತಾರಾಮಶರ್ಮ ಹಾಗೂ ಹರಿಹರಪುರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅರ್ಚಕ ವೇ.ಬ್ರ.ಶ್ರೀ. ಕೃಷ್ಣಮೂರ್ತಿಭಟ್ಟ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

