ದಲಿತ ಮುಖಂಡ ಗಿರಿಯಪ್ಪಗೆ ಶ್ರದ್ಧಾಂಜಲಿ
ಹೊಳೆನರಸೀಪುರ: ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಮೊಟ್ಟ ಮೊದಲ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದ ಎನ್. ಗಿರಿಯಪ್ಪನವರ ನಿಧನದಿಂದಾಗಿ ದಲಿತ ಸಮುದಾಯಗಳಿಗೆ ಅಪಾರ ನಷ್ಟವುಂಟಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಕಾರಿಣಿ ಮುಖಂಡ ಎಂ. ಸೋಮಶೇಖರ್ ವಿಷಾದಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ದಂಡೋರ ರಿಜರ್ವೇಷನ್ ಹೋರಾಟ ಸಮಿತಿ ಭಾನುವಾರ ಆಯೋಜಿಸಿದ್ದ ದಲಿತ ಮುಖಂಡ ಎನ್. ಗಿರಿಯಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಬಾಗವಹಿಸಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ವರ್ಗರಹಿತವಾಗಿ ಎಲ್ಲಾ ವರ್ಗದ ಶೋಷಿತರ ನೊಂದವರ ದೌರ್ಜನ್ಯ ತುಳಿತಕ್ಕೆ ಒಳಗಾದವರ ಪರವಾಗಿ ಜಾತಿಪದ್ಧತಿ, ಅಸಮಾನತೆಯ ವಿರುದ್ದ ಸತತವಾಗಿ 40 ವರ್ಷಗಳ ಕಾಲ ದಲಿತ ಸಂಘರ್ಷ ಸಮಿತಿಯ ಮೂಲಕ ಗಿರಿಯಪ್ಪ ಹೋರಾಟ ನಡೆಸಿದ್ದರು ಎಂದರು.
ಆದರ್ಶಗಳು ನಮ್ಮೊಂದಿಗಿವೆ: ದಂಡೋರ ಸಮಿತಿಯ ಮೈಸೂರು ವಿಭಾಗೀಯ ಹಾಗೂ ಜಿಲ್ಲಾ ಸಮಿತಿ ಆಧ್ಯಕ್ಷ ಟಿ.ಆರ್. ವಿಜಯಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ರೊಫೆಸರ್, ಬಿ. ಕೃಷ್ಣಪ್ಪನವರಿಂದ ಸ್ಥಾಪಿತಗೊಂಡ ದಲಿತ ಸಂಘರ್ಷ ಸಮಿತಿಯು ಅಂದಿನ ದಿನಗಳಲ್ಲೇ ಚಂದ್ರಗುತ್ತಿ ಬೆತ್ತಲೆ ಸೇವೆ, ಸಿದ್ಲಿಪುರ ಭೂಹೋರಾಟ, ಕೋಲಾರದ ಅನುಸೂಯಮ್ಮನ ಕೊಲೆ ಪ್ರಕರಣದಂತಹ ಮಹತ್ತರ ಹೋರಾಟಗಳನ್ನು ಮಾಡಿದ್ದು ಇದೆಲ್ಲದರ ಸಾರಥ್ಯ ವಹಿಸಿ ದಲಿತ ಸಮುದಾಯಕ್ಕೆ ಶಕ್ತಿ ತುಂಬಿದ ಅನೇಕ ಮಹನೀಯರಲ್ಲಿ ಎನ್. ಗಿರಿಯಪ್ಪ ನವರೇ ಮೊದಲಿಗರು ಇಂದು ಅವರು ನಮ್ಮೊಡನೆ ಇಲ್ಲವಾದರೂ ಅವರು ತೋರಿರುವ ಮಾರ್ಗ, ಆದರ್ಶಗಳು ನಮ್ಮೊಡನಿವೆ ಎಂದರು.
ಹಿರಿಯ ಮುಖಂಡರಾದ ಡಿ.ಆರ್. ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರನ್ನು ನಾವೆಲ್ಲ ಶಕ್ತಿಯಾಗಿ ಪರಿಗಣಿಸಬೇಕೇ ಹೊರತು ನಮ್ಮ ಗುರುತಾಗಿ ಅಲ್ಲ ನಿಜವಾಗಿಯೂ ನಾವೆಲ್ಲ ಅಂಬೇಡ್ಕರ್ ಅನುಯಾಯಿಗಳಾಗಿದ್ದರೆ ಅವರ ಕನಸಾದ ಸಮಸಮಾಜ ನಿರ್ಮಾಣ, ಆಳುವ ವರ್ಗವಾಗದ ಹೊರತು ನಮ್ಮ ಪ್ರಗತಿ ಸಾಧ್ಯವಿಲ್ಲ ಎಂದರು.
ಈರೇಶ್ ಹಿರೇಹಳ್ಳಿ ಮಾತನಾಡಿ, ಕೇವಲ ಸಣ್ಣ ಜಂತು ಕೀಟಗಳನ್ನು ಸೃಷ್ಟಿ ಮಾಡಲಾಗದ ಮನುಷ್ಯ ಮುನ್ನೂರು ಕೋಟಿ ದೇವತೆಗಳನ್ನು ಸೃಷ್ಠಿ ಮಾಡಿರುವ ವ್ಯವಸ್ಥೆಯಲ್ಲಿ ಬಡವರ ದಲಿತರ ಅಭಿವೃದ್ಧಿ ಹೇಗೆ ಸಾಧ್ಯ? ಸಮಸಮಾಜಕ್ಕಾಗಿ ಬುದ್ಧನ ಮಾರ್ಗ ಅನುಸರಿಸಬೇಕು ಇಂತಹ ಕ್ರಾಂತಿಕಾರಿ ಹೋರಾಟಗಳನ್ನು ದಲಿತ ಸಂಘಟನೆಗಳು ಮಾಡಬೇಕಿದೆ ಎಂದರು.
ಇದಕ್ಕೂ ಮೊದಲು ಎನ್. ಗಿರಿಯಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖಂಡರಾದ ನಾಗೇಂದ್ರ , ಆದಿಜಾಂಬವ ನೌಕರ ಸಂಘದ ಉಪಾಧ್ಯಕ್ಷ ನಾಗಣ್ಣ, ಹಿರಿಯ ಮುಖಂಡ ಅಣ್ಣಾಜಪ್ಪ ಮಾತನಾಡಿದರು ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಎಂ.ನಾಗರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪರಿಶಿಷ್ಟ ಜಾತಿ ನೌಕರ ಸಂಘದ ವೆಂಕಟೇಶ್, ಆದಿಜಾಂಬವ ನೌಕರ ಸಂಘದ ಪ್ರಶಾಂತ್. ದೇವರಾಜು. ದಂಡೋರ ಸಮಿತಿಯ ಜವರಯ್ಯ ಚೆನ್ನಪ್ಪ ಸತೀಶ್. ಉಮೇಶ್, ಮಹದೇವ್ ಮಂಜುನಾಥ್, ಮಹೇಶ್, ದಲಿತ ಸಂಘರ್ಷ ಸಮಿತಿಯ ಭೈರಾಜು, ಜಗದೀಶ್, ಮಲ್ಲೇಶ್, ಮೋಹನ್ ಹಾಗೂ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

