ಹಾಸನ

ಕಾಡಾನೆ ದಾಳಿಗೆ ಮತ್ತೊಬ್ಬ ಬಲಿ

Published On :

ಆಲೂರು: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ಕಲ್ಲಾರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಇದರಿಂದ ಆಕ್ರೋಶಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು ಆರ್ಎಫ್ಒ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಉಲಸನಹಳ್ಳಿ ಗ್ರಾಮದ ಕೃಷ್ಣೇಗೌಡ (45) ಎಂಬಾತ ಮೃತಪಟ್ಟ ದುರ್ದೈವಿ. ಬೆಳಗ್ಗೆ 11.30ರಲ್ಲಿ ತೋಟಕ್ಕೆ ಕೆಲಸಗೆಂದು ಹೋಗುತ್ತಿದ್ದಾಗ ಏಕಾಏಕಿ ಎದುರಾದ ಒಂಟಿ ಸಲಗ ಆತನನ್ನು ಅಟ್ಟಿಸಿಕೊಂಡು ಹೋಗಿ ಸೊಂಡಲಿನಿಂದ ಎಸೆದು ಕಾಲಿನಿಂದ ಹೊಸಕಿ ಹಾಕಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಅಧಿಕಾರಿ ಮೇಲೆ ಹಲ್ಲೆ: ಆನೆ ತುಳಿತಕ್ಕೆ ಕೃಷ್ಣೇಗೌಡ ವ್ಯಕ್ತಿ ಸಾವನ್ನಪ್ಪಿರುವ ಕುಪಿತರಾದ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ ಆರ್ಎಫ್ಓ ದೇವರಾಜ್ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದರು. ಸ್ಥಳದಲ್ಲಿ ಇದ್ದ ಪೊಲೀಸರು ಜನರನ್ನು ಆರ್ಎಫ್ಓ ಅವರನ್ನು ಬಿಡಿಸಲು ಹರಸಾಹಸ ಪಡಬೇಕಾಯಿತು. ಪೊಲೀಸರಿಗೆ ಜಗ್ಗದ ಜನ ಆರ್ಎಫ್ಒ ಅನ್ನು ಮನಸೋಇಚ್ಛೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಅವರನ್ನು ಶವದ ಬಳಿಯೇ ಕೂರಿಸಿ ಜಿಲ್ಲಾಧಿಕಾರಿಗಳು ಬರುವ ತನಕ ದಿಗ್ಬಂಧನ ಹೇರಿದರು. ಸುಮಾರು 4 ತಾಸುಗಳ ಕಾಲ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಕದಡಲು ಬಿಡದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಮಧ್ಯಪ್ರವೇಶ: ಸಂಜೆ 4ಕ್ಕೆ ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಆಗಮಿಸಿ, ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೂ ಸಹ ಜನ ಆಕ್ರೋಶಭರಿತರಾಗಿ ಮಾತನಾಡಿದರು. ಗ್ರಾಮಸ್ಥರ ಮಾತನ್ನು ಸಮಾಧಾನದಿಂದಲೇ ಕೇಳಿದ ಜಿಲ್ಲಾಧಿಕಾರಿಗಳು 1 ತಾಸಿಗೂ ಹೆಚ್ಚು ಸಮಯವಾದರೂ ಜನರು ಜಿಲ್ಲಾಧಿಕಾರಿಗೆ ಮಾತನಾಡಲು ಬಿಡಲಿಲ್ಲ. ಇದರಿಂದ ಕುಪಿತರಾದ ಡಿಸಿ ಅವರು, ಜನರನ್ನು ಸಮಾಧಾನಪಡಿಸಲು ಮುಂದಾದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಕಳೆದ ಬಾರಿ ಪುರಭೈರವನಹಳ್ಳಿ ಮಹಿಳೆಯನ್ನು ಕಾಡಾನೆ ಬಲಿ ತೆಗೆದುಕೊಂಡ ಸಂದರ್ಭದಲ್ಲಿ ನೀವು  ಬಂದು ಎಲ್ಲರನ್ನೂ ಸಮಾಧಾನಗೊಳಿಸಿ, ಎಲ್ಲಾ ಆನೆಗಳನ್ನು ಹಿಡಿಯುವವರೆಗೂ ಇಲ್ಲಿಂದ ಕ್ಯಾಂಪ್ ತೆರವು ಗೊಳಿಸುವುದಿಲ್ಲ ಎಂಬ ಭರವಸೆ ನೀಡಿದ್ದಿರಿ. ಆದರೆ, ಪ್ರತಿದಿನವೂ ಕಾಡಾನೆಗಳ ಕಾಟ ಹೆಚ್ಚುತ್ತಿದ್ದು ಗ್ರಾಮಸ್ಥರು ಭೀತಿಯಿಂದ ಜೀವಿಸುತ್ತಿದ್ದಾರೆಂದು ದೂರಿದರು. ಏತನ್ಮಧ್ಯೆ, ಕಾಡಾನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಡಿಸಿ ನೀಡಿರುವ ಆದೇಶವನ್ನು ಅರಣ್ಯ ಇಲಾಖೆ ಅನುಷ್ಠಾನಗೊಳಿಸಿಲ್ಲ ಎಂದೂ ಅವರು ಜಿಲ್ಲಾಧಿಕಾರಿಗೆ ವಿವರಿಸಿದರು. ಅಲ್ಲದೇ, ಕರ್ತವ್ಯ ಮರೆತು ಮೋಜು- ಮಸ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದು, ಇದರಿಂದ ಕಾಡಾನೆ ಹಾವಳಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕ್ಷಮೆ ಕೋರಿದ ಡಿಸಿ: ಗ್ರಾಮಸ್ಥರ ದೂರನ್ನು ಕೇಳಿದ ಜಿಲ್ಲಾಧಿಕಾರಿಗೆ ಅನ್ಬುಕುಮಾರ್, ಘಟನೆಗೆ ವಿಷಾದ ವ್ಯಕ್ತಪಡಿಸಿವರಲ್ಲದೆ ಗ್ರಾಮಸ್ಥರ ಕ್ಷಮೆ ಯಾಚಿಸಿದರು. ನಂತರ ಮಾತನಾಡಿದ ಅವರು, ನಮಗೆ ತಿಳಿಸದೆ ಅರಣ್ಯ ಇಲಾಖೆಯವರು ಸಾಕಾನೆಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಕಾಡಾನೆಗಳನ್ನು ಹಿಡಿದರೆ ಅವುಗಳನ್ನು ಪಳಗಿಸಲು 25ಕ್ಕೂ ಹೆಚ್ಚು ಕ್ರಾಲ್ಗಳನ್ನು ನಿರ್ಮಾಣ ಮಾಡಬೇಕಾಗಿದ್ದು, ಅದಕ್ಕಾಗಿ ಕ್ಯಾಂಪ್ನಿಂದ ಆನೆಗಳನ್ನು ತೆಗೆದುಕೊಂಡು ಹೋಗಿದ್ದರು. ಆನೆಗಳು 2 ದಿನಗಳ ಹಿಂದೆಯೇ ಮಾಗಡಿಹಳ್ಳಿ ಕ್ಯಾಂಪ್ಗೆ ಬಂದು ಕಾರ್ಯಾಚರಣೆ ಮತ್ತೆ ಆರಂಭವಾಗಬೇಕಿತ್ತು. ಆದರೆ ತುಮಕೂರಿನಲ್ಲಿ ಕಾಡಾನೆಯೊಂದು ದಾಂಧಲೆ ನಡೆಸುತ್ತಿದ್ದ ಪರಿಣಾಮ ಅದನ್ನು ಕಾಡಿಗೆ ಅಟ್ಟಲು ಸಾಕಾನೆಗಳನ್ನು ತುಮಕೂರಿಗೆ ಹೋಗಿವೆ. ಈಗಾಗಲೇ ನಾಲ್ಕು ಆನೆಗಳು ಕ್ಯಾಂಪ್ಗೆ ಆಗಮಿಸಿದ್ದು, ಉಳಿದ 6 ಆನೆಗಳು ಬುಧವಾರ ಬರಲಿವೆ. ತಕ್ಷಣದಿಂದಲೇ ಕಾಡಾನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿಸಿಎಫ್ ರಂಗರಾವ್, ಡಿಎಫ್ಓ ಅಪ್ಪುರಾವ್, ಎಸಿ ಡಾ.ಮಧುಕೇಶ್ವರ್, ಎಎಸ್ಪಿ ರಶ್ಮಿ, ತಹಸೀಲ್ದಾರ್ ಶಾರದಾಂಬ, ಜಿಪಂ ಸದಸ್ಯ ಪುರುಷೋತ್ತಮ್, ಮುಖಂಡರಾದ ಕೆ.ಎಸ್. ಮಂಜೇಗೌಡ ಇದ್ದರು.

ಶಾಸಕ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಸಾಂತ್ವನ
ಆಲೂರು: ಆನೆ ತುಳಿತಕ್ಕೆ ತುತ್ತಾಗಿ ಕೃಷ್ಣೇಗೌಡ ಎಂಬ ರೈತ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರಿಂದ ಹಲ್ಲೆಗೊಳಗಾದ ಆರ್ಎಫ್ಒ ದೇವರಾಜ್ ಅವರನ್ನು ಜಿಲ್ಲಾಧಿಕಾರಿ ಅನ್ಬುಕುಮಾರ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಾಂತ್ವನಗೊಳಿಸಿದರು.
ಕಣ್ಣೀರಿಟ್ಟ ಆರ್ಎಫ್ಒ: ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಆರ್ಎಫ್ಒ ಮಾತನಾಡಿ, ಯಾವುದೇ ತಪ್ಪು ಮಾಡದೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನನ್ನ ಮೇಲೆ ವಿನಾಕಾರಣ ನಡೆದಿದ್ದು, ಇದರಿಂದ ನನಗೆ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಮನವಿ ಮಾಡಿದರು.
ಗ್ರಾಮಸ್ಥರಿಗೆ ಎಚ್ಚರಿಕೆ: ದೇವರಾಜ್ ಅವರನ್ನು ಸಮಾಧಾನಪಡಿಸಿ ಮಾತಾಡಿದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು. ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇನ್ನು ಮುಂದೆ ಯಾರಾದರೂ ಈ ರೀತಿ ನಡೆದುಕೊಂಡರೆ ನಾವು ಕಾನೂನು ರೀತಿ ಕ್ರಮಕೈಗೊಳ್ಳುವುದಾಗಿ ಖಡಕ್ ಆಗಿ ಎಚ್ಚರಿಕೆ ನೀಡಿದ ಅವರು, ಹಲ್ಲೆ ನಡೆಸಿದರುವ ಕಾನೂನನ್ನು ಕೈಗೆ ಎತ್ತಿಕೊಂಡಿರುವುದುದ ಸರಿಯಲ್ಲ. ನಿಮ್ಮಂತೆಯೆ ನಾವು ಸಹ. ಪೊಲೀಸರಿಗೆ ಆದೇಶ ನೀಡಿದರೆ ಏನಾಗುತ್ತೆದ ಎಂಬುದು ಗಮನದಲ್ಲಿ ಇರಲಿ. ಆದ್ದರಿಂದ ಇನ್ನು ಮುಂದೆ ಎಚ್ಚರಿಕೆಯಿಂದ ಇರಲು ತಿಳಿಸಿದರು.
ಶಾಸಕರು ಸೇರಿದಂತೆ ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕ ಪಂಚಾಯ್ತಿ ಸದಸ್ಯರು ಇದಕ್ಕೆ ದನಿಗೂಡಿಸಿದರು.
ಇತ್ತ, ಘಟನೆಯಿಂದ ಜರ್ಝರಿತರಾಗಿದ್ದ ಆರ್ಎಫ್ಒ ದೇವರಾಜು ಅವರಿಗೆ ಸಾಂತ್ವನ ಹೇಳಿದ ಶಾಸಕ ಕುಮಾರಸ್ವಾಮಿ, ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿದರು.

ರು. 5 ಲಕ್ಷ ಪರಿಹಾರ
ಮಂಗಳವಾರ ಆನೆ ದಾಳಿಗೆ ಬಲಿಯಾದ ಕೃಷ್ಣೇಗೌಡರ ಕುಟುಂಬಕ್ಕೆ ತಕ್ಷಣವೇ 20 ಸಾವಿರ ಹಣ ಜೊತೆಗೆ 5 ಲಕ್ಷ ರು. ಪರಿಹಾರವನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಇದಲ್ಲದೇ, ಕೃಷ್ಣೇಗೌಡರ ಮಕ್ಕಳಿಗೆ ತಾತ್ಕಾಲಿಕ ಕೆಲಸ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ರು. 15 ಲಕ್ಷ ನೀಡಿ: ಶಾಸಕ ಕುಮಾರಸ್ವಾಮಿ
ಕೃಷ್ಣೇಗೌಡರ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಚ್.ಕೆ.ಕುಮಾರಸ್ವಾಮಿ, ಮೃತರಿಗೆ ಕೇವಲ 5 ಲಕ್ಷ ರು. ಪರಿಹಾರ ನೀಡಿದರೆ ಸಾಲದು, ಕನಿಷ್ಠ 15 ಲಕ್ಷ ರು.ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬದ ವ್ಯಕ್ತಿಯೋರ್ವರಿಗೆ ಸರ್ಕಾರಿ ಕೆಲಸ ನೀಡಬೇಕು. ಮಕ್ನಾ ಸೇರಿದಂತೆ ಗಂಡಾನೆಗಳನ್ನು ಪ್ರಥಮವಾಗಿ ಹಿಡಿಯಬೇಕು ಎಂದಿರುವ ಅವರು, ಹಂತ ಹಂತವಾಗಿ ಉಳಿದ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಡಿಸಿ
ಸೋಮವಾರ ಕನ್ನಡಪ್ರಭದಲ್ಲಿ 'ಹುಸಿಯಾಯ್ತು ಸಚಿವರ ಭರವಸೆ' ಶೀರ್ಷಿಕೆಯ ಸುದ್ದಿಯಲ್ಲಿ 'ಮತ್ತೊಂದು ಬಲಿ ಬೇಕಾ?' ಎಂಬ ಉಪ ಶೀರ್ಷಿಕೆಯಲ್ಲಿ ಬಂದ  ವರದಿಯನ್ನು ಜಿಲ್ಲಾಧಿಕಾರಿ ಅನ್ಬುಕುಮಾರ್ ಈ ಸಂದರ್ಭದಲ್ಲಿ  ಪ್ರಸ್ತಾಪಿಸಿ, ವರದಿಯಲ್ಲಿ ಉಲ್ಲೇಖಿಸಿದ್ದ ರೀತಿಯಲ್ಲೇ ಮತ್ತೊಂದು ಬಲಿ ಉಂಟಾಗಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.