ಹೆಚ್ಚುತ್ತಿರುವ ಅಪರಾಧ ಪ್ರಕರಣ
-ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಅಪರಾಧಿಗಳನ್ನು ಮತ್ತು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇಲ್ಲಿನ ಪೊಲೀಸರು ಹಿಂದೆ ಬಿದ್ದಿದ್ದಾರೆ ಎನ್ನುವ ಅಸಮಾಧಾನ ಇಲ್ಲಿನ ನಾಗರಿಕರಲ್ಲಿ ಕಾಡತೊಡಗಿದೆ.
ಕಳಕೊಂಡವನು ಕೋಡಂಗಿ, ಕದ್ದವನೇ ವೀರಭದ್ರ ಎನ್ನುವ ಸ್ಥಿತಿ ತಾಲೂಕಿನಲ್ಲಿ ತಮ್ಮ ವಾಹನಗಳನ್ನು ಕಳೆದುಕೊಂಡವರದ್ದಾಗಿದೆ. ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಕಳವು ಮಾಡಿದ ಪ್ರಕರಣಗಳು ದಾಖಲಾಗುತ್ತಲೇ ಇದ್ದರೂ ಇದುವರೆವಿಗೂ ಪೊಲೀಸರು ಯಾವುದೇ ವಾಹನಗಳನ್ನೂ ಪತ್ತೆ ಮಾಡಿದ ಉದಾಹರಣೆಗಳು ಕಡಿಮೆಯೇ ಎನ್ನುವಂತಹ ಸ್ಥಿತಿ ಇದೆ.
ಕಳೆದ ಮೂರು ವರ್ಷಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕಳವಾದ ವಾಹನಗಳ ವಿವರವನ್ನು ಕಂಡಾಗ ಈ ಅನುಮಾನ ಸಾರ್ವಜನಿಕರಲ್ಲಿ ಬಾರದೇ ಇರದು. 2011ರಲ್ಲಿ 8 ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 4 ವಾಹನಗಳನ್ನು ಪತ್ತೆ ಹಚ್ಚಲಾಗಿದೆ. 2012ರಲ್ಲಿ 12 ವಾಹನ ಕಳವು ಪ್ರಕರಣದಲ್ಲಿ 8 ವಾಹನಗಳನ್ನು ಪತ್ತೆ ಹಚ್ಚಿದ್ದರೆ, 2013ನೇ ಸಾಲಿನಲ್ಲಿ 17 ವಾಹನಗಳು ಕಳುವಾಗಿದ್ದರೆ ಪೊಲೀಸರು ಪತ್ತೆ ಹಚ್ಚಿರುವ ಪ್ರಕರಣ ಕೇವಲ 2 ಮಾತ್ರ.
ವಾರದ ನಂತರ ದೂರು ನೀಡಿ: ಸಾರ್ವಜನಿಕರು ತಮ್ಮ ವಾಹನಗಳನ್ನು ಕಳೆದುಕೊಂಡಾಗ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೆ, ಒಂದು ವಾರ ಕಾದು ನೋಡಿ ನಿಮ್ಮ ವಾಹನ ವಾಪಸ್ ಸಿಗದಿದ್ದಲ್ಲಿ ನಂತರ ದೂರು ದಾಖಲಿಸಿ, ಎನ್ನುವ ಉತ್ತರ ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ದೊರಕುತ್ತದೆ ಎಂದು ವಾಹನಗಳನ್ನು ಕಳೆದುಕೊಂಡವರು ಹೇಳುತ್ತಿದ್ದಾರೆ.
ವಾಹನಗಳನ್ನು ಕದ್ದವರು ಮರಳಿ ತಂದು ನಿಲ್ಲಿಸುವುದು ದೂರದ ಸಂಗತಿಯಾದರೆ, ಕದ್ದ ವಾಹನವು ಎಲ್ಲಾದರೂ ಅಪಘಾತಕ್ಕೀಡಾದರೆ ಇಲ್ಲವೇ ಯಾವುದಾದರೂ ಅಪರಾಧ ಪ್ರಕರಣಕ್ಕೆ ಬಳಕೆಯಾಗಿ ಸಿಕ್ಕಿ ಬಿದ್ದರೆ ಆಗಲೂ ಪೊಲೀಸರು ವಾರದ ನಂತರ ದೂರು ದಾಖಲಿಸಿಕೊಳ್ಳುತ್ತಾರೆಯೇ ಎಂಬುದು ವಾಹನಗಳನ್ನು ಕಳೆದುಕೊಂಡವರ ಪ್ರಶ್ನೆ.
ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ, ವಾಹನ ಸಂಚಾರ ನಿಯಂತ್ರಣ, ವಾಹನಗಳ ಪಾರ್ಕಿಂಗ್ ಸುಧಾರಣೆ ಮೊದಲಾದ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿರುವ ಪೊಲೀಸ್ ಇಲಾಖೆ, ಅಪರಾಧಗಳ ಪತ್ತೆಯ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿರುವುದು ನಿರ್ಲಕ್ಷ್ಯಕ್ಕೋ, ಇಲ್ಲವೇ ತಾತ್ಸಾರದಿಂದಲೋ ಎನ್ನುವ ಗುಮಾನಿ ನಾಗರಿಕರ ಮನದಲ್ಲಿ ಹಾಗೆಯೇ ಉಳಿದಿದೆ.
ನೆನೆಗುದಿಯಲ್ಲಿ ಮೂರು ಪ್ರಮುಖ ಪ್ರಕರಣಗಳು
1. 2013ರ ಅಕ್ಟೋಬರ್ ತಿಂಗಳಿನಲ್ಲಿ ತಾಲೂಕಿನ ನ್ಯಾಮನಹಳ್ಳಿಯಲ್ಲಿನ ಕ್ರಷರ್ನಲ್ಲಿ ಸುಮಾರು ರು. 1.50 ಲಕ್ಷಕ್ಕೂ ಮಿಗಿಲಾದ ವಸ್ತುಗಳು ಕಳುವಾದ ಕುರಿತಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳವು ಪ್ರಕರಣ ಕ್ರಷರ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವುದನ್ನು ತೋರಿಸಿ, ಕಳುವು ಮಾಡಿದವರ ಸುಳಿವನ್ನು ಪೊಲೀಸರಿಗೆ ನೀಡಿದ್ದರೂ ಕೂಡ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮೀನ ಮೇಷ ಎಣಿಸುತ್ತಿರುವುದು ಏಕೆ ಎಂಬ ಅನುಮಾನ ಮೂಡತೊಡಗಿದೆ.
2. ಇದೇ ವರ್ಷ, ಜ. 26ರ ಗಣರಾಜ್ಯೋತ್ಸವ ದಿನದಂದು ತಾಲೂಕು ಆಡಳಿತದ ವತಿಯಿಂದ ಹಾರಿಸಲಾಗಿದ್ದ ರಾಷ್ಟ್ರಧ್ವಜವು ಧ್ವಜಸ್ಥಂಭದಿಂದ ಕಳಚಿ ನೆಲಕ್ಕೆ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಪವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ಹೆಸರನ್ನು ಬಹಿರಂಗಪಡಿಸುವಂತೆ ಎಬಿವಿಪಿ, ಕರವೇ ಮತ್ತು ಖುದ್ದಾಗಿ ತಹಸೀಲ್ದಾರರೇ ದೂರು ನೀಡಿದ್ದರೂ, ಇದುವರೆಗೂ ಪ್ರಕರಣದ ಕುರಿತಂತೆ ಯಾವುದೇ ಚಕಾರ ಪೊಲೀಸರಿಂದ ಬಂದಿಲ್ಲ.
3. ಇತ್ತೀಚೆಗೆ ಪಟ್ಟಣದಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಆಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ 23 ವಿದ್ಯಾರ್ಥಿಗಳ ಪೈಕಿ ಖಾಸಗಿ ಐಟಿಐ ಕಾಲೇಜಿಗೆ ಸೇರಿದ ಎಲ್ಲಾ 23 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ನಂತರ, ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಸಗಿ ಐಟಿಐ ಕಾಲೇಜಿನ ಮುಖ್ಯಸ್ಥನನ್ನು ಬಂಧಿಸಿ ವಿಚಾರಣೆಗೊಳಪಡಿಸುವುದು, ಅಲ್ಲದೇ ನಕಲಿ ವಿದ್ಯಾರ್ಥ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಅಸಲಿ ವಿದ್ಯಾರ್ಥಿಗಳ ಕಾನೂನು ಉಲ್ಲಂಘನೆಯ ಕುರಿತಂತೆಯೂ ಯಾವುದೇ ತನಿಖೆ ನಡೆದಿರುವ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲದಂತಾಗಿರುವುದು ಇಲ್ಲಿನ ಪೊಲೀಸ್ ವ್ಯವಸ್ಥೆಯ ಕುರಿತಂತೆ ನಾಗರಿಕರಲ್ಲಿ ಅನುಮಾನಗಳು ಮೂಡಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

