ಹಾಸನ

14 ಗ್ರಾಪಂಗಳ 14 ಸ್ಥಾನಗಳಿಗೆ ಮಾ. 2ರಂದು ಚುನಾವಣೆ

Published On :

ಹಾಸನ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯ 5 ತಾಲೂಕುಗಳ 14 ಗ್ರಾಮ ಪಂಚಾಯ್ತಿಗಳಲ್ಲಿ ನಾನಾ ಕಾರಣಗಳಿಂದ ತೆರವಾಗಿರುವ 14 ಸ್ಥಾನಗಳಿಗೆ ಮಾ. 2ರಂದು ಚುನಾವಣೆ ನಡೆಯಲಿದೆ.
ಪ್ರಮುಖ ದಿನಾಂಕ: ಫೆ. 12ರಂದು ಬುಧವಾರ ಜಿಲ್ಲಾಧಿಕಾರಿ ಚುನಾವಣಾ ಅಧಿ ಸೂಚನೆಯನ್ನು ಹೊರಡಿಸುವರು. ಫೆ. 12ರಂದು ಬುಧವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಫೆ. 20ರಂದು ಗುರುವಾರ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಫೆ. 22ರಂದು ಶನಿವಾರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕಡೆಯ ದಿನ.
ಮಾ. 2ರಂದು ಮತದಾನ: ಮತದಾನ ಅವಶ್ಯವಿದ್ದರೆ, ಮಾ. 2ರಂದು ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನವನ್ನು ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದರೆ ಮಾ. 4ರಂದು ಮಂಗಳವಾರ ಮರು ಮತದಾನ ನಡೆಯವುದು.
ಮಾ. 5ರಂದು ಮತಎಣಿಕೆ: ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಮಾ. 5ರಂದು ಬೆಳಗ್ಗೆ 8ರಿಂದ ಮತಗಳ ಎಣಿಕೆಯನ್ನು ಮಾಡಲಾಗುವುದು. ಮಾ. 5ರಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವುದು ಎಂದು ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಅಧಿಕಾರಿಗಳ ನೇಮಕ: ಈ ಚುನಾವಣೆಯನ್ನು ನಡೆಸಲು ಪ್ರತಿ ಗ್ರಾಮಪಂಚಾಯ್ತಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಚುನಾವಣೆ ನಡೆಸುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ  ಫೆ. 12 ರಿಂದ ಮಾ. 5 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
ಸಂಹಿತೆ ಜಾರಿಗೆ ತರಲು ಆಯಾ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಆರಕ್ಷಕ ವೃತ್ತ ನಿರೀಕ್ಷರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮ ನಿಷೇಧ: ಮತದಾನ ನಡೆಯುವ ಮಾ. 2ರಂದು (ಭಾನುವಾರ) ಅವಶ್ಯಕತೆಯಿದ್ದಲ್ಲಿ, ಅಂತಹ ಸ್ಥಳಗಳಲ್ಲಿ ಸಂತೆ ಜಾತ್ರೆಗಳನ್ನು ರದ್ದುಪಡಿಸಲಾಗುವುದು. ಮತದಾನದ ಪೂರ್ವ ಹಾಗೂ ಎಣಿಕೆ ದಿನದಂದು ಮದ್ಯಪಾನ ನಿಷೇಧವನ್ನು ಜಾರಿಗೆ ತರಲಾಗುವುದು. ನಾಮಪತ್ರಗಳನ್ನು ಆಯಾ ಚುನಾವಣಾಧಿಕಾರಿಗಳು ಗ್ರಾಮಪಂಚಾಯ್ತಿ ಕಚೇರಿಗಳಲ್ಲಿ ಸ್ವೀಕರಿಸುವರು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ೈ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಗ್ರಾ. ಪಂಗಳಲ್ಲಿ ಖಾಲಿ ಇರುವ ಸ್ಥಾನಗಳ ವಿವರ
ಟಿ ಅರಕಲಗೂಡು ತಾಲೂಕಿನ ಕತ್ತಿಮಲ್ಲೇನಹಳ್ಳಿ ಗ್ರಾಮ ಪಂಪಂಚಾಯ್ತಿ ಕ್ಷೇತ್ರ ಸಂಖ್ಯೆ 1-ಕತ್ತಿಮಲ್ಲೇನಹಳ್ಳಿಯಲ್ಲಿ ಸಾಮಾನ್ಯ(ಮಹಿಳೆ)ಗೆ ಮೀಸಲಾತಿ ನೀಡಲಾಗಿದೆ. ವಿಜಾಪುರ ಅರಣ್ಯ ಗ್ರಾಮ ಪಂಚಾಯ್ತಿಗೆ ಕ್ಷೇತ್ರದ ಸಂಖ್ಯೆ 5- ಕೆಂದಿಣ್ಣೆಕಾವಲು ಮತ್ತು ಸಂತೆಮರೂರು ಗ್ರಾಮ ಪಂಚಾಯ್ತಿಗೆ  7- ಮಾದಿಹಳ್ಳಿ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ, ಅಗ್ರಹಾರ ಗ್ರಾಮ ಪಂಚಾಯಿತಿಯ 3- ದೊಡ್ಡಹಳ್ಳಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾತಿ ಮತ್ತು ಬನ್ನೂರು ಗ್ರಾಮ ಪಂಚಾತಿಯ 5-ಹೊಡೇನೂರು ಕ್ಷೇತ್ರಕ್ಕೆ ಬಿ.ಸಿ.ಎಂ.ಎ.ಗೆ ಮೀಸಲಾತಿ ನೀಡಲಾಗಿದೆ.
ಟಿ ಅರಸೀಕೆರೆ ತಾಲೂಕಿನ ನೇರ್ಲಿಗೆ ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 3-ಗುಡ್ಡೇನಹಳ್ಳಿಗೆ ಬಿ.ಸಿ.ಎಂ.ಎ. (ಮಹಿಳೆ) ಮೀಸಲಾತಿ ಮತ್ತು ಶ್ಯಾನೆಗೆರೆ ಗ್ರಾಮ ಪಂಚಾಯ್ತಿ ಕ್ಷೇತ್ರ ಸಂಖ್ಯೆ 9- ಕೆಂಗುರುಬರಹಟ್ಟಿಯಲ್ಲಿ ಬಿ.ಸಿ.ಎಂ.ಎ.ಗೆ ಮೀಸಲಾತಿ ನೀಡಲಾಗಿದೆ.
ಟಿ ಬೇಲೂರು ತಾಲೂಕಿನ ಸವಾಸಿಹಳ್ಳಿ ಗ್ರಾಮ ಪಂಚಾಯ್ತಿ 1-ಸವಾಸಿಹಳ್ಳಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾತಿ, ತೊಳಲು ಗ್ರಾಮ ಪಂಚಾಯ್ತಿಯ 4-ಎನ್.ನಿಡಗೋಡು ಕ್ಷೇತ್ರಕ್ಕೆ ಬಿ.ಸಿ.ಎಂ.ಎ (ಮಹಿಳೆಗೆ) ಮೀಸಲು, ಕೋಗಿಲೆ ಮನೆ ಗ್ರಾಮ ಪಂಚಾಯ್ತಿಯ 5- ಹಾಡ್ಲಗೆರೆ ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ)ಗೆ ಮೀಸಲು ಮತ್ತು ಮಲಸಾವರ ಗ್ರಾಮ ಪಂಚಾಯ್ತಿಯ 3- ದೊಡ್ಡಸಾಲಾವರ ಕ್ಷೇತ್ರಕ್ಕೆ ಪರಿಶಿಷ್ಟ ಪಂಗಡ(ಮಹಿಳೆ)ಗೆ ಮೀಸಲಾತಿ ನೀಡಲಾಗಿದೆ.
ಟಿ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮ ಪಂಚಾಯ್ತಿಯ  1-ಅಣ್ಣಿಗನಹಳ್ಳಿ ಕ್ಷೇತ್ರಕ್ಕೆ ಪರಿಶಿಷ್ಟ ಪಂಗಡ(ಮಹಿಳೆ)ಗೆ ಮೀಸಲು ಮತ್ತು ಬಸವಾಘಟ್ಟ ಗ್ರಾಮ ಪಂಚಾಯ್ತಿಯ 2-ಬಿ. ಭೈರಾಪುರ ಕ್ಷೇತ್ರಕ್ಕೆ ಬಿ.ಸಿ.ಎಂ.ಎ.ಗೆ ಮೀಸಲಾತಿ ನೀಡಲಾಗಿದೆ.
ಟಿ ಹೊಳೆನರಸೀಪುರ  ತಾಲೂಕಿನ ಹಂಗರಹಳ್ಳಿ ಗ್ರಾಮ ಪಂಚಾಯ್ತಿಯ 1-ಹಂಗರಹಳ್ಳಿ ಕ್ಷೇತ್ರಕ್ಕೆ ಪರಿಶಿಷ್ಟ ಪಂಗಡ(ಮಹಿಳೆ)ಗೆ ಮೀಸಲಾಗಿದೆ ನೀಡಲಾಗಿದೆ.
ನೀತಿ ಸಂಹಿತೆ ಜಾರಿ
ಹಾಸನ: ಜಿಲ್ಲೆಯ 14 ಗ್ರಾಮ ಪಂಚಾಯ್ತಿಗಳಲ್ಲಿ ನಾನಾ ಕಾರಣಗಳಿಂದ ತೆರವಾಗಿರುವ 14 ಸ್ಥಾನಗಳಿಗೆ ಚುನಾವಣೆಯು ಉಲ್ಲೇಖಿತ ಆದೇಶದಂತೆ ಘೋಷಿತವಾಗಿದೆ. ಈ ಆದೇಶದಂತೆ ಮಾದರಿ ನೀತಿ ಸಂಹಿತೆಯು ಫೆ. 12ರಿಂದ ಮಾ. 5ರವರೆಗೆ ಜಾರಿಯಲ್ಲಿದೆ.
ಈ ಮಾದರಿ ನೀತಿ ಸಂಹಿತೆಯನ್ನು ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಾರಿಗೆ ತರಲು ತಾಲೂಕುವಾರು ಈ ಕೆಳಕಂಡಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಅರಕಲಗೂಡು ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕರನ್ನು ಅರಕಲಗೂಡು ತಾಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಅರಸೀಕೆರೆ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕರನ್ನು ಅರಸೀಕೆರೆ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಬೇಲೂರು ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕರನ್ನು ಅರಕಲಗೂಡು ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಹಾಸನ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕರನ್ನು ಹಾಸನ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಹೊಳೆನರಸೀಪುರ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕರನ್ನು ಹೊಳೆನರಸೀಪುರ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.