ಇಂದಿನಿಂದ ಸಲಗ ಹಿಡಿಯುವ ಕಾರ್ಯಾಚರಣೆ
ಆಲೂರು: ನರಹಂತಕ ಒಂಟಿ ಸಲಗವನ್ನು ಹಿಡಿಯುವ ಕಾರ್ಯಾಚರಣೆಯನ್ನು ಗುರುವಾರ ಪ್ರಾರಂಭಿಸುವುದಾಗಿ ಡಿಸಿಎಫ್ ಅಪ್ಪುರಾವ್ ತಿಳಿಸಿದರು.
ಅವರು ಬುಧವಾರ ಮಾಗಡಿಹಳ್ಳಿ ಕ್ಯಾಂಪಿನಲ್ಲಿ ಸಿದ್ಧತೆಗಳ ಪರಿಶೀಲನೆ ನಡೆಸಿ, ಕನ್ನಡಪ್ರಭದೊಂದಿಗೆ ಮಾತನಾಡಿದರು. ಈಗಾಗಲೇ ಒಟ್ಟು ಹತ್ತು ಆನೆಗಳು ಕ್ಯಾಂಪಿಗೆ ಆಗಮಿಸಿದ್ದು, ನಾಗರಹೊಳೆ, ಬಳ್ಳೆ ಆನೆಧಾಮದಿಂದ ಅರ್ಜುನ, ಮತ್ತಿಗೋಡಿನಿಂದ ಅಭಿಮನ್ಯು, ಬಲರಾಮ, ಭೀಮ, ಗೋಪಾಲಸ್ವಾಮಿ ಹಾಗೂ ವರಲಕ್ಷ್ಮಿ ಆನೆಗಳು, ಚಾಮರಾಜನಗರದ ಕೆ.ಗುಡಿಯಿಂದ ಶ್ರೀರಾಮ, ಗಜೇಂದ್ರ, ದುಬಾರೆಯಿಂದ ವಿಕ್ರಂ, ಹರ್ಷ ಆನೆಗಳು ಈಗಾಗಲೇ ಕ್ಯಾಂಪ್ಗೆಗೆ ಆಗಮಿಸಿವೆ ಎಂದರು.
ಬನ್ನೇರುಘಟ್ಟದಿಂದ ಡಾ. ಚೆಟ್ಟಿಯಪ್ಪ, ಹುಣಸೂರಿನಿಂದ ಡಾ. ಉಮಾಶಂಕರ್, ಬಂಡೀಪುರದಿಂದ ಡಾ. ನಾಗರಾಜ್ ಹಾಗೂ ಗುರಿಕಾರರಾದ ಕರಂಬಯ್, ಅಕ್ರಂ ಹಾಗೂ ಸ್ಥಳೀಯರಾದ ವೆಂಕಟೇಶ್ ಸೇರಿದಂತೆ ಇವರೊಂದಿಗೆ 10 ಜನ ಮಾವುತರು, 10 ಕಾವಾಡಿಗಳು, 40 ಕಾಡು ಕುರುಬರು ಆಗಮಿಸಿದ್ದಾರೆ. ಕಾರ್ಯಾಚರಣೆಗೆ ಬೇಕಾದ 14 ಸೆಣಬಿನ ಹಗ್ಗ, 10 ಕಬ್ಬಿಣದ ಸರಪಳಿಗಳು, ನಾಮದ, ಗಾದಿ ಸೇರಿದಂತೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಆನೆಗಳಿಗೆ ಹುಲ್ಲು, ಬೆಲ್ಲ ಹಾಗೂ ಸೊಪ್ಪನ್ನು ಸಿದ್ಧಗೊಳಿಸಲಾಗಿದೆ ಎಂದರು.
ಅರವಳಿಕೆ ಸಿದ್ಧ: ಭುವನೇಶ್ವರದ ನಂದನ್ಖಾನ್ ಜೂಯಾಲಜಿಕಲ್ ಪಾರ್ಕಿನಿಂದ 4 ಅರವಳಿಕೆ ಚುಚ್ಚುಮದ್ದಿನ ವಾಯಿಲ್ಗಳನ್ನು ತರಲಾಗಿದೆ. ಈಗ ನಮ್ಮ ಬಳಿ 12 ಆನೆಗಳಿಗೆ ನೀಡುವಷ್ಟು ಚುಚ್ಚುಮದ್ದು ಇದೆ ಎಂದರು.
ವಿಮೆ ಸೌಲಭ್ಯ: ಈಗಾಗಲೇ 10 ಕ್ರಾಲ್ಗಳನ್ನು ನಿರ್ಮಿಸಲಾಗಿದ್ದು, ಪಿರಿಯಾಪಟ್ಟಣದಲ್ಲಿ ಹೊಸದಾಗಿ 2, ಮತ್ತಿಗೋಡು ಆನೆಧಾಮದಲ್ಲಿ 4, ಸಕ್ಕರೆಬೈಲಿನಲ್ಲಿ 4 ಕ್ರಾಲ್ಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ. ಅಲ್ಲದೇ ಈ ಬಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಕಾಡುಕುರುಬರು, ಮಾವುತರು ಹಾಗೂ ಕಾವಾಡಿಗಳಿಗೆ ವಿಮೆ ಮಾಡಿಸಲಾಗುವುದು. ಅವರಿಗೆ ಪ್ರಾಣಾಪಾಯವಾದರೆ 5 ಲಕ್ಷ ರು. ನ ವಿಮೆ, ತೀವ್ರ ಗಾಯಗೊಂಡರೆ ರು. 2 ಲಕ್ಷ ವಿಮೆಯನ್ನು ಮಾಸಿಕವಾಗಿ ರು. 1,110 ಪ್ರೀಮಿಯಂ ಕಟ್ಟುವಂತೆ ಮಾಡಿಸಲಾಗಿದೆ ಎಂದು ಅಪ್ಪುರಾವ್ ವಿವರಿಸಿದರು.
ಜಾಗಗಳ ಗುರುತು: ಈ ಬಾರಿ ಪ್ರಥಮವಾಗಿ ಗ್ರಾಮಸ್ಥರು ಹೇಳಿದ ನರಹಂತಕ ಒಂಟಿ ಸಲಗವನ್ನೇ ಪ್ರಥಮವಾಗಿ ಹಿಡಿಯಲಾಗುವುದು. ಕಾಡಾನೆಗಳು ದೊಡ್ಡಬೆಟ್ಟ, ಚಿಕ್ಕಬೆಟ್ಟ, ರಂಗನಬೆಟ್ಟ, ಕೊಡಗಿನ ಉಂಬಳಿ ಬೆಟ್ಟಗಳಲ್ಲಿ ಗುಂಪುಗಳಾಗಿ ಬೀಡುಬಿಟ್ಟಿದ್ದರೆ, ಮಕ್ನಾ ಸೇರಿದಂತೆ ಇನ್ನೊಂದು ಗುಂಪು ಯಸಳೂರು ಅರಣ್ಯ ಪ್ರದೇಶದಲ್ಲಿವೆ ಎಂದು ಗುರುತಿಸಲಾಗಿದೆ. ಮೇ ಅಥವಾ ಜೂನ್ನೊಳಗೆ ಕಾರ್ಯಾಚರಣೆ ಪೂರ್ಣಗೊಳಿಸುವುದಾಗಿ ಅವರು ಹೇಳಿದರು. ಸಿಸಿಎಫ್ ರಂಗರಾವ್, ತಹಸೀಲ್ದಾರ್ ಶಾರದಾಂಬ, ಆರ್ಎಫ್ಓ ದೇವರಾಜ್ ಸೇರಿದಂತೆ 8 ತಾಲೂಕುಗಳ ರೇಂಜರ್ಗಳು ಇದ್ದರು.
9 ಮಂದಿ ವಿರುದ್ಧ ಮೊಕದ್ದಮೆ
ಮಂಗಳವಾರ ಬೆಳಗ್ಗೆ ಕಲ್ಲಾರೆ ಹಾಗೂ ಭರತೂರು ಬಳಿ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಆರ್ಎಫ್ಓ ದೇವರಾಜ್ ಮೇಲೆ ಹಲ್ಲೆ ನಡೆಸಿದ 9 ಜನರ ಮೇಲೆ ಬುಧವಾರ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೊಕದ್ದಮೆ ಕೈಬಿಡಿ: ಆದರೆ, ಈ ಸಂಬಂಧವಾಗಿ ಪ್ರತಿಕ್ರಿಯೆ ನೀಡಿರುವ ಕಾರಗೋಡು ಗ್ರಾಪಂ ಸದಸ್ಯೆ ಕಾವೇರಿ ನಂದಕುಮಾರ್, ಆವೇಶದಿಂದ ಹಲ್ಲೆ ಮಾಡಿದ್ದು, ಇದರಲ್ಲಿ ಯಾವುದೇ ದುರುದ್ದೇಶ ಇಲ್ಲದ ಕಾರಣ ಮೊಕದ್ದಮೆ ಕೈ ಬಿಡಬೇಕೆಂದು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಪ್ರಕರಣ ಕೈ ಬಿಡಬೇಕೆಂದು ಒತ್ತಾಯಿಸಿ ಕಲ್ಲಾರೆ, ಕಾಣಗೆರೆ, ಸುತ್ತಮುತ್ತಲ ಗ್ರಾಮಸ್ಥರು ಗುರುವಾರದಿಂದ ರಸ್ತೆಯಲ್ಲಿ ಶಾಂತಿಯುತ ಧರಣಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

