ಅಭಿವೃದ್ಧಿ ಎಂಬುದು ನಾಸ್ತಿ, ಕಡೆಗಣನೆಯೇ ಜಾಸ್ತಿ
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಈ ಬಾರಿಯ ಬಜೆಟ್ನಲ್ಲಿ ಹಾಸನ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ ಎಂಬ ಅಸಮಾಧಾನ ಜಿಲ್ಲೆಯೆಲ್ಲೆಡೆ ವ್ಯಕ್ತವಾಗಿದೆ.
ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಅಭಿವೃದ್ಧಿ ಹಾಗೂ ನಾನಾ ಹೊಸ ಯೋಜನೆಗೆ ಸಿದ್ದರಾಮಯ್ಯ ಮುಂದಾಗುವರು ಎಂಬ ಭಾವನೆಯನ್ನು ಜಿಲ್ಲೆಯ ಜನರು ಹೊಂದಿದ್ದರು. ಆದರೆ ಈ ಬಾರಿಯ ಬಜೆಟ್ ಅಭಿವೃದ್ಧಿಯ ಕನಸಿಗೆ ಮತ್ತೆ ಕಪ್ಪನೆಯ ಕಾರ್ಮೋಡ ಆವರಿಸಿಕೊಳ್ಳುವಂತೆ ಮಾಡಿದೆ ಎಂಬ ಟೀಕೆ ಜಿಲ್ಲೆಯ ಎಲ್ಲೆಡೆ ವ್ಯಕ್ತವಾಗಿದೆ.
ಜಿಲ್ಲೆಗೆ ಹೊಸ ಯೋಜನೆ ಘೋಷಣೆ ಮಾಡುವುದು ಹಾಗಿರಲಿ. ಕನಿಷ್ಠ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಬಜೆಟ್ನಲ್ಲಿ ಚಕಾರ ಎತ್ತಿಲ್ಲ. ರಾಜ್ಯದ ಪಶು ವೈದ್ಯಕೀಯ ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ರು. 77 ಕೋಟಿ ನಿಗದಿಪಡಿಸಲಾಗಿದೆ. ಆದರೆ ಮೂಲ ಸೌಲಭ್ಯಗಳಿಲ್ಲದೇ ನರಳುತ್ತಿರುವ ಹಾಸನ ಕೃಷಿ ಕಾಲೇಜಿಗೆ ಮತ್ತು ಹಾಸನದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಹಣ ನಿಗದಿ ಮಾಡಿಲ್ಲ.
17 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಾಸನ- ಬೆಂಗಳೂರು ರೇಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ತಮ್ಮ ಪಾಲಿನ ಶೇ.50ರಷ್ಟು ಹಣ ನೀಡಿ, ಅದಕ್ಕೆ ಅಡಚಣೆಯಾಗಿರುವ ಭೂ ಸ್ವಾಧೀನ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇತ್ತೀಚೆಗೆ ಆಡಳಿತ ಕಾಂಗ್ರೆಸ್ ಮುಖಂಡರು, ನಗರದ ಎನ್.ಆರ್. ವೃತ್ತದ ಮೂಲಕ ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುವ ರೈಲ್ವೆ ಹಳಿ ಸಮೀಪ ಮೇಲ್ಸೇತುವೆ ನಿರ್ಮಾಣಕ್ಕೆ ಬೇಕಾಗುವ ಹಣ ನಿಗದಿ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದ್ದರು.
ಆದರೆ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಕೇಂದ್ರ ವಿಮಾನಯಾನ ಪ್ರಾಧಿಕಾರ ಮತ್ತು ಕೇಂದ್ರದ ಗಮನಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿಲ್ಲ. ಹಾಸನದಲ್ಲಿ ಇರುವ ಮೈಸೂರು ವಿವಿಗೆ ವ್ಯಾಪ್ತಿಗೆ ಸೇರಿದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಹಾಸನದಲ್ಲಿ ಆರಂಭವಾಗಿ 23 ವರ್ಷಗಳು ಕಳೆದಿವೆ. ಅದರ ಅಭಿವೃದ್ಧಿಗೆ ಹಣ ನೀಡಿಲ್ಲ.
ರಸ್ತೆ ಅಭಿವೃದ್ಧಿ ನಾಸ್ತಿ: ಚಿಕ್ಕನಾಯಕನಹಳ್ಳಿ-ಹಾಸನ ಮತ್ತು ತಿಪಟೂರು ನಡುವಿನ 70 ಕಿಮೀ ರಸ್ತೆಯ ಅಭಿವೃದ್ಧಿಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳಲಾಗಿತ್ತು. ಆದರೆ ಕಾಮಗಾರಿ ಇನ್ನು ಆರಂಭವಾಗಿಲ್ಲ. ಆರಂಭದ ಬಗ್ಗೆ ಭರವಸೆ ನೀಡಿಲ್ಲ. ಚನ್ನಪಟ್ಟಣ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯ ಕಟ್ಟಡಕ್ಕೆ ರು.73 ಕೋಟಿ ಅನುದಾನದ ಅಗತ್ಯವಿತ್ತು. ಅದನ್ನು ಘೋಷಣೆ ಮಾಡಿಲ್ಲ.
ಬಿಜೆಪಿ ಸರ್ಕಾರವೂ ಕಡೆಗಣಿಸಿತ್ತು: ಹಿಂದಿನ ಬಿಜೆಪಿ ಸರ್ಕಾರವೂ ತನ್ನ ಅಧಿಕಾರವಧಿಯಲ್ಲಿ ಜಿಲ್ಲೆಗೆ ಯಾವುದೇ ರೀತಿ ಯೋಜನೆ ನೀಡದೆ ವಂಚಿಸಿತ್ತು. ಜೊತೆಗೆ ಜೆಡಿಎ ಸ್ ಸರ್ಕಾರದಲ್ಲಿ ಇದ್ದ ಸಂದರ್ಭದಲ್ಲಿ ಜಿಲ್ಲೆಗೆ ನೀಡಿದ ಹಲವು ಯೋಜನೆಗಳನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿತ್ತು.
ಬಿಜೆಪಿ ಸರ್ಕಾರ ಜಿಲ್ಲೆಯ ವಿರುದ್ಧ ತಾಳಿದಂತಹ ಮಲತಾಯಿ ಧೋರಣೆಯನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಹೋಗುತ್ತಿದೆ ಎಂಬ ಟೀಕೆ ನಡುವೆ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ತಳ್ಲಿ ಹಾಕುವಂತಿಲ್ಲ.
ಕಾಂಗ್ರೆಸ್ಗೆ ನೈತಿಕ ಹಕ್ಕಿಲ್ಲ
ಬಜೆಟ್ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಗಮನ ಕೊಟ್ಟಿಲ್ಲ. ಜಿಲ್ಲಾ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಬಿಟ್ಟು ಬೇರೆಲ್ಲಾ ಮಾತುಗಳನ್ನು ಆಡುತ್ತಿದ್ದಾರೆಯೇ ಹೊರತು. ಬಜೆಟ್ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ.
ಟಿ ಚನ್ನಂಗಿಹಳ್ಳಿ ಶ್ರೀಕಾಂತ್, ವಕೀಲರು
'ಜಿಲ್ಲೆಯ ಮಟ್ಟಿಗೆ ಭಾರೀ ನಿರಾಶೆ'
ಚನ್ನರಾಯಪಟ್ಟಣ: ಈ ಬಾರಿಯ ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಸೇರಿಸದೆ ಇರುವ ಕಾರ್ಯಕ್ರಮಗಳನ್ನು ರದ್ದು ಮಾಡಿರುವುದು ಖಂಡನೀಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರಿ, ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಲು ನಮ್ಮ ಗ್ರಾಮ ನಮ್ಮ ರಸ್ತೆ ಕಾರ್ಯಕ್ರಮ ಕೈ ಬಿಟ್ಟಿದ್ದಾರೆ. ಸುವರ್ಣ ಗ್ರಾಮ ಯೋಜನೆಯ ಬದಲಾಗಿ ಗ್ರಾಮೀಣ ವಿಕಾಸ ಯೋಜನೆ ಎಂದು ತಂದಿರುವ ಯೋಜನೆಯಲ್ಲಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಕನಿಷ್ಠ 50 ಕಿಮೀ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಕೇವಲ ಮೂಗಿಗೆ ತುಪ್ಪ ಸವರುವ ಕಾರ್ಯಕ್ರಮ ಇದಾಗಿದೆ ಎಂದು ಕಿಡಿ ಕಾರಿದರು.
ರಾಜ್ಯದ ಖಜಾನೆ ತುಂಬಿಸಲು ಬಡವರ ಬದಲಾಗಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಬೇಕಿತ್ತು. ಪ್ರತಿ ಗ್ರಾಪಂ ಕನಿಷ್ಠ 100 ಮನೆಗಳನ್ನು ನೀಡುವ ಕಾರ್ಯಕ್ರಮ ಜಾರಿಗೆ ತರಬೇಕಿತ್ತು. ಆದರೆ ಸರ್ಕಾರ ವಸತಿ ರಹಿತರ ಬಗ್ಗೆ ಗಮನ ಹರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

