ಎಂ. ಕೃಷ್ಣ ಅಂಧ ಮಕ್ಕಳ ಶಾಲೆಗೆ ರು. 1 ಲಕ್ಷ ದೇಣಿಗೆ
ಹಾಸನ: ನಗರದ ಎಸ್ಬಿಜಿ ಗ್ರೂಪ್ನ ಉದ್ಯಮಿ ಸುಜಾತ ನಾರಾಯಣ್ ಅವರು ಎಂ. ಕೃಷ್ಣ ಅಂಧ ಮಕ್ಕಳ ಪಾಠಶಾಲೆಯೂ ಸೇರಿದಂತೆ ಹಾಸನ ಅಂಧ ಮಕ್ಕಳ ಕಲ್ಯಾಣ ಹಾಗೂ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಅಭಿವೃದ್ಧಿಗಾಗಿ ರು. 1 ಲಕ್ಷ ಗಳನ್ನು ಸ್ಥಳೀಯ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಡಾ.ಹೆಚ್. ನಾಗರಾಜ್ ತಿಳಿಸಿದ್ದಾರೆ.
ರು. 1 ಲಕ್ಷಠೇವಣಿ ಪತ್ರವನ್ನು ಪಡೆದು ಮಾತನಾಡಿದ ಅಧ್ಯಕ್ಷರು, ಠೇವಣಿಯಿಂದ ಬರುವ ಆದಾಯವನ್ನು ಅಂಧ ಮಕ್ಕಳ ಅಗತ್ಯತೆಗೆ ಬಳಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ, ಸುಜಾತ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಸುರೇಶ್ ಗುರೂಜಿ, ಡಾ. ಹೆಚ್. ನಾಗರಾಜ್, ಜಿಲ್ಲಾ ಪಂಚಾಯ್ತಿ ಸಿಇಓ ಉಪೇಂದ್ರ ಪ್ರತಾಪ್ ಸಿಂಗ್, ಕಟ್ಟಾಯ ಶಿವಕುಮಾರ್ ಮತ್ತು ಹೇಮಂತ್ ಇದ್ದರು.
17 ರಂದು ಶಿಕ್ಷಕರ ಧರಣಿ
ಹಾಸನ: ರಾಜ್ಯ ಮಟ್ಟದ ಎಲ್ಲಾ ವಸತಿ ಶಾಲೆಗಳಲ್ಲಿ ಹೈಕೋರ್ಟ್ ಆದೇಶದಂತೆ ಮುಂದುರವರಿಯುತ್ತಿರುವ ಪ್ರಾಂಶುಪಾಲರು ಮತ್ತು ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಲು ಆಗ್ರಹಿಸಿ ಫೆ. 17ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಮರಣಾಂತ ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ಹಾಗೂ ಶಿಕ್ಷಕರ ಕ್ಷೇಮಾವಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಪೂರ್ಣಕಾಲಿಕ ಗೌರವಧನ ಶಿಕ್ಷಕರಾಗಿ ಖಾಲಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ವರ್ಷ 10ನೇತರಗತಿಯವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬರಲು ಹಗಲಿರುಳು ಶ್ರಮಿಸುತ್ತಿರುವ ಇವರ ಸೇವೆಯನ್ನು ಕಾಯಂ ಮಾಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಅಸಾಧಾರಣ ಮಕ್ಕಳರಾಷ್ಟ್ರ ಪ್ರಶಸ್ತಿಗೆ ಅರ್ಜಿ
ಹಾಸನ: ಶಿಕ್ಷಣ, ಕಲೆ, ಸಾಂಸ್ಸತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರಪ್ರಶಸ್ತಿಯನ್ನು ನೀಡುವ ಯೋಜನೆಯೊಂದನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ. ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರು. 20,000 ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ ಕೇಂದ್ರಾಢಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರು. 10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಶಿಕ್ಷಣ, ಕಲೆ, ಸಾಂಸ್ಕತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಫೆ. ರೊಳಗೆ ತಲುಪುವಂತೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆ.ಆರ್.ಪುರಂ 9ನೇ ಅಡ್ಡ ರಸ್ತೆ ಹಾಸನ ಇಲ್ಲಿಗೆ ಸಲ್ಲಿಸತಕ್ಕದ್ದು, ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.
ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ರಥ ಎಳೆದು ಮಿಂಚಿದ ಎಳೆಯರು
ಚನ್ನರಾಯಪಟ್ಟಣ: ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದಲ್ಲಿ ಆಯೋಜಿಸುವ ಮೂಲಕ ಮಕ್ಕಳಲ್ಲಿ ಹುದುಗಿರುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆ ಹೊರ ತರುವ ವೇದಿಕೆ ಒದಗಿಸಿತು.ಶುಕ್ರವಾರ ಬೆಳಗ್ಗೆಯಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲಿ ನೋಡಿದರಲ್ಲಿ ಪ್ಲೆಕ್ಸ್, ಬಂಟಿಂಗ್ಸ್, ಬಾಳೆ ಕಂಬಗಳಿಂದ ಕೂಡಿದ ತಳಿರು ತೋರಣಗಳು ಮತ್ತಷ್ಟು ಕಳೆ ತಂದವು. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೆರವಣಿಗೆಯನ್ನು ಕಂಡು ಬೇಸತ್ತಿದ್ದ ಪಟ್ಟಣದ ಜನತೆ ಮಕ್ಕಳ ಸಾಲು ಸಾಲು ಮೆರವಣಿಗೆ, ಚಿಣ್ಣರ ಕೋಲಾಟ, ಹಾಗೂ ಇತರೆ ಕಲಾ ಪ್ರದರ್ಶನಗಳು ಹಾಗೂ ಐವರು ಮಕ್ಕಳನ್ನು ಏಳು ಅಶ್ವವುಳ್ಳ ಸಾರೋಟಿನಲ್ಲಿ ಮೆರವಣಿಗೆ ಮಾಡುತ್ತಿದ್ದನ್ನು ಕಂಡ ಜನತೆ ನಿಜವಾಗಿ ಬೆಳೆವ ಪೈರಿಗೆ ಇಂದೇ ಉತ್ತಮ ನೀರು ಎರೆಯುತ್ತಿರುವವರನ್ನು ಕಂಡು ಆನಂದಿಸಿದರು. ಹಳೆ ಬೇರು ಹೊಸ ಚಿಗುರು: ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕು.ನಿಶಾಚಂದ್ರ ಜತೆ, ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಸಾಗಿ, ಮಕ್ಕಳನ್ನು ಸಾರೋಟಿನಲ್ಲಿ ಕುಳ್ಳಿರಿಸಿ ಮಾರುಕಟ್ಟೆ ಪ್ರಾಂಗಣದಿಂದ ಮಾಧ್ಯಮಿಕ ಶಾಲಾ ಆವರಣದವರೆಗೆ ಕಾಲ್ನಡಿಗೆಯಲ್ಲಿಯೇ ಸಾಗಿದರು.
ನಾಳೆ ಅರೆಸೇನಾ ಪಡೆ ಯೋಧರ ಸಭೆ
ಹಾಸನ: ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟದ ಸಭೆಯನ್ನು ಫೆ.16 ರಂದು ಭಾನುವಾರ ಬೆಳಗ್ಗೆ 10 ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದ ಪಕ್ಕದಲ್ಲಿರುವ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಕರೆಯಲಾಗಿದೆ. ಒಕ್ಕೂಟದ ಬೈಲಾ ತಿದ್ದುಪಡಿ ಮತ್ತು ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲಾಗುವುದರಿಂದ ಅರೆಸೇನಾ (ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಎಲ್ಲಾ ಮಾಜಿ ಯೋಧರು ತಪ್ಪದೆ ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಅಧ್ಯಕ್ಷ ಆರ್.ಎಂ. ಹನುಮಂತಪ್ಪ ಮನವಿ ಮಾಡಿದ್ದಾರೆ. ಮಾಹಿತಿಗೆ, ದೂ. 96868-11183 ಅಥವಾ 94836-02262
ರಸ್ತೆ ಸಂಚಾರ ಮಾದರಿ ಸಮೀಕ್ಷೆ
ಹಾಸನ: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ರಸ್ತೆ ಸಂಚಾರ ಸಮೀಕ್ಷೆ ನಡೆಸಲಾಗುತ್ತಿದ್ದು ಫೆ. 18ರಂದು ಬೆಳಗ್ಗೆ 6 ರಿಂದ ಫೆ. 20ರಂದು ಬೆಳಗ್ಗೆ 6 ರವರೆಗೆ ವಾಹನ ಸಂಚಾರ ಗಣತಿ ಕೇಂದ್ರಗಳನ್ನು ಸ್ಥಾಪಿಸಿ ಗಣತಿ ಕಾರ್ಯ ನಡೆಸಲಾಗುವುದು. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರು, ಗಣ್ಯರು ಹಾಗೂ ವಾಹನ ಚಾಲಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಇಲಾಖೆಗೆ ಅವಶ್ಯಕವಾಗಿ ಬೇಕಾಗಿರುವ ಮಾಹಿತಿಯನ್ನು ಸಹನೆಯಿಂದ ಒದಗಿಸುವಂತೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೋರಿದ್ದಾರೆ.
ದುರಸ್ತಿ ಪ್ರಯುಕ್ತ ಈಜುಕೊಳ ಸ್ಥಗಿತ
ಹಾಸನ: ನಗರಸಭೆಯ ಈಜು ಕೊಳದ ನೀರು ಬದಲಾವಣೆ ಮತ್ತು ಇನ್ನಿತರೆ ಚಿಕ್ಕಪುಟ್ಟ ದುರಸ್ತಿ ಕೆಲಸ ಕಾರ್ಯಗಳ ಕಾಮಗಾರಿ ಕೆಲಸವನ್ನು ಈಗಾಗಲೇ ನಿರ್ವಹಿಸುತ್ತಿರುವುದರಿಂದ ಫೆ. 28ರವರೆಗೆ ಈಜುಕೊಳವನ್ನು ಸ್ಥಗಿತಗೊಳಿಸಲಾಗಿದೆ. ಈಜುಕೊಳಕ್ಕೆ ಈಜಲು ಬರುವ ಸಾರ್ವಜನಿಕರು ಸಹಕರಿಸಬೇಕೆಂದು ಪೌರಾಯುಕ್ತ ವಿ.ಹೆಚ್. ಕೃಷ್ಣಮೂರ್ತಿ ಕೋರಿದ್ದಾರೆ.
ವಿದ್ಯುತ್ ವ್ಯತ್ಯಯ
ಹಾಸನ: ತುರ್ತು ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಫೆ. 15ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಹಾಸನ ನಗರದ ಹೊಸಲೈನ್ ರಸ್ತೆ, ಸಂತೆ ಪೇಟೆ ಸುತ್ತ ಮುತ್ತಲಿನ ಪ್ರದೇಶ, ಮೆಡಿಕಲ್ ಕಾಲೇಜ್, ಆರ್.ಸಿ. ರಸ್ತೆ, ಹೊಸಕೊಪ್ಪಲು, ಚನ್ನಪಟ್ಟಣ ಇಂಡಸ್ಟ್ರಿಯಲ್ ಏರಿಯಾ, ವಿಜಯನಗರ, ಬೈಲಹಳ್ಳಿ, ಹನುಮಂತಪುರ, ಎನ್.ಆರ್. ವೃತ್ತ, ಕಟ್ಟಿನ ಕೆರೆ ಮಾರ್ಕೆಟ್, ಡಿ.ಸಿ ಕಚೇರಿ ಮತ್ತಿತರೆಡೆ ವ್ಯತ್ಯಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

