ಹಾಸನ

ಮಕ್ಕಳ ಸಾಹಿತ್ಯ ಮತ್ತಷ್ಟು ಬೆಳೆಯಲಿ, ಬೆಳಗಲಿ

Published On :

ಕ.ಪ್ರ. ವಾರ್ತೆ, ಚನ್ನರಾಯಪಟ್ಟಣ, ಪೆ.14
ಮಕ್ಕಳು ಈ ದೇಶದ ಆಸ್ತಿ ಎಂದು ಹೇಳುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆಯತ್ತ ಮುಂದಾಗದಿರುವುದು ವಿಷಾದನೀಯ. ಇನ್ನು ಮುಂದಾದರು ಮಕ್ಕಳ ಸಾಹಿತ್ಯ ಎಲ್ಲೆಡೆ ಬೆಳಗಲಿ ಮೊಳಗಲಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಲಹೆ ನೀಡಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ದೀಪ ಬೆಳಗಿಸುವ ಮುಖೇನ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ಸಾಹಿತಿಗಳು ಮೊದಲು ಮಕ್ಕಳಿಗೆ ಅನುಕೂಲಕರ ಸಾಹಿತ್ಯವನ್ನು ನೀಡಲು ಮುಂದಾಗುತ್ತಿದ್ದರು. ಆದರೆ ಇಂದು ಅವುಗಳನ್ನು ಮರೆತಿರುವುದರಿಂದ ಮಕ್ಕಳು ಹೊಸ ಸಾಹಿತ್ಯ ತಿಳಿಯಲು ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಕಂಠಪಾಠಕ್ಕಿಂತ ನೀತಿ ಪಾಠ ಮುಖ್ಯ: ಪೋಷಕರು ತಮ್ಮ ಮಕ್ಕಳನ್ನು ಅಂಕದ ರೇಸಿನಲ್ಲಿ ಓಡಿಸುತ್ತಿದ್ದಾರೆ. ಆದರೆ ತಾವು ಅಂಕಕ್ಕೆ ಆದ್ಯತೆ ನೀಡಿರುವುದರಿಂದ ನೈತಿಕ ಶಿಕ್ಷಣದಿಂದ ಮಕ್ಕಳನ್ನು ವಂಚಿಸುತ್ತಿದ್ದು, ಪಠ್ಯ ಕಂಠಪಾಠದಲ್ಲಿ ನಾವು ಶಿಕ್ಷಣ ಅಳೆಯುತ್ತಿದ್ದೇವೆ. ಕಂಠಪಾಠಕ್ಕಿಂತ ಇಂದು ನೀತಿ ಪಾಠಗಳು ಮುಖ್ಯವಾಗಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯವಿದೆ ಎಂದರು.
ಭಾರತ ಕಥೆಗಳ ತವರು: ಇಂದು ಮಕ್ಕಳಿಗೆ ಕಥೆ ಏನು ಎಂಬುದನ್ನು ತಿಳಿಸುವ ಮಟ್ಟಕ್ಕೆ ತಾವು ಬಂದಿದ್ದು, ಹಿಂದೆ ಯಾವುದಾದರೊಂದು ಶಿಕ್ಷಣ ತೆಗೆದುಕೊಂಡರೂ ಅದು ಕಥೆಯಿಂದಲೇ ಪ್ರಾರಂಭವಾಗಿ ಕಥೆಯಿಂದಲೇ ಕೊನೆಗೊಳ್ಳುತ್ತಿತ್ತು.
 ಆದರೆ ಇಂದು ಪಠ್ಯ ಪುಸ್ತಕದಲ್ಲಿನ ಪಠ್ಯವನ್ನು ಕಂಠಪಾಠ ಮಾಡಿ ಒಪ್ಪಿಸಿದರೆ ಅದನ್ನು ನಾಳೆ ಮರೆಯುವ ಮಟ್ಟಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ವೃದ್ಧಾಶ್ರಮಕ್ಕೆ ಬೇಡ: ಮಕ್ಕಳು ಉತ್ತಮ ಗುಣವಂತರಾಗಿ ಬೆಳೆಯಲು ವೃದ್ಧರು ಮುಖ್ಯ ಕಾರಣಕರ್ತರಾಗಿದ್ದಾರೆ. ವೃದ್ಧರು ತಮ್ಮ ಬಿಡುವಿನ ಅವದಿಯಲ್ಲಿ ತಮ್ಮ ಮೊಮ್ಮಕ್ಕಳು ಹಾಗೂ ಮುಮ್ಮೊಕ್ಕಳ ಜತೆ ಸೇರಿ ಮಕ್ಕಳಂತೆ ಆಟವಾಡಿ ಅವರಿಗೆ ನೀತಿ ಪಾಠ ಹೇಳುವರಲ್ಲದೆ ಮಕ್ಕಳ ಮಟ್ಟಕ್ಕೆ ತಮ್ಮ ಮನಸ್ಸು ಹೊಯ್ದು ಅವರನ್ನು ಉತ್ತಮ ಗುಣವಂತರಾಗಲು ಸಹಕಾರಿಯಾಗಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳನ್ನು ಮರೆತು ವಿಭಜಿತ ಕುಟುಂಭಗಳಿಗೆ ಜೋತು ಬಿದ್ದು, ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವುದರಿಂದ ಮಕ್ಕಳಿಗೆ ನೀತಿ ಪಾಠವಿಲ್ಲದೆ ಅನ್ಯ ಮಾರ್ಗ ಹಿಡಿಯಲು ತಂದೆ ತಾಯಿಗಳು ನೇರ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಕಲೆ ಸಾಹಿತ್ಯ ಹಾಗೂ ಕ್ರೀಡಾ ಮನೋಭಾವವನ್ನು ಬತ್ತಿಸಿ ಕೇವಲ ಅಂಕದ ಗುರಿಯನ್ನಿಟ್ಟುಕೊಂಡು ಮಕ್ಕಳ ಮನಸ್ಸನ್ನು ತಾವು ಕಲುಷಿತಗೊಳಿಸುತ್ತಿದ್ದೇವೆ. ಮಕ್ಕಳಲ್ಲಿ ಹುದುಗಿರುವ ಕಲೆಯನ್ನು ಹೊರ ಸೂಸಲು ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಾಹಿತ್ಯ ಮನುಷ್ಯನಿಗೆ ಸುಸಂಸ್ಕೃತಿಯನ್ನು ಬಿತ್ತುತ್ತದೆ. ಕೇವಲ ಅಂಕ ಪಟ್ಟಿ ಕಟ್ಟಿಕೊಳ್ಳುವ ಬದಲು ಸಾಹಿತ್ಯದೆಡೆ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಲು ಕಾರಣರಾಗಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
 ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಬಾಲ್ಯದಿಂದಲೇ ಮಾತೃ ಭಾಷೆಯಲ್ಲಿಯೇ ವ್ಯಾಸಂಗ ಮಾಡಿದರೆ ಮಾತ್ರ ನಾಡು ನುಡಿ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ತಾಪಂ ಅಧ್ಯಕ್ಷೆ ಹೇಮಾವತಿ,
ಜಿಪಂ ಸದಸ್ಯರಾದ ಕುಸುಮಾ ಬಾಲಕೃಷ್ಣ, ದೇವಿಕಾ ಪ್ರಕಾಶ್, ಪುರಸಭಾಧ್ಯಕ್ಷ ಮಂಜಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಜನಾರ್ದನ್, ತಾಲೂಕು ಅಧ್ಯಕ್ಷ ಲೋಕೇಶ್, ವಲಯ ಅರಣ್ಯಾಧಿಕಾರಿ ಧರ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ ಪಾಂಡು ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನಂ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಯೋಗಶ್ರೀ, ಧನುಶ್ರೀ, ರಾಹುಲ್‌ರಾಜ್ ಹಾಗೂ ಬಿ.ಎನ್.ಕಾವ್ಯಮಕ್ಕಳ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣ ನಿರ್ವಹಿಸಿದರು.
'ದೇಶದ ಭವಿಷ್ಯ ಪಂಚಾಂಗದಲ್ಲಿಲ್ಲ'
ಚನ್ನರಾಯಪಟ್ಟಣ: ದೇಶದ ಭವಿಷ್ಯ ಪಂಚಾಂಗದಲ್ಲಿದೆ ಎಂಬಂತೆ ಇತ್ತೀಚಿನ ದಿನಗಳಲ್ಲಿ ಸೃಷ್ಟಿಸಿ ಕೆಲ ಶಾಸ್ತ್ರಜ್ಞರು ಜನತೆಯನ್ನು ನಂಬಿಸುತ್ತಿದ್ದಾರೆ. ಆದರೆ ದೇಶದ ಭವಿಷ್ಯ ಸಾಧನೆಯಲ್ಲಿದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಕುಮಾರಿ ನಿಶಾಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಮಾತನಾಡಿದ ಅವರು, ಮಕ್ಕಳಿಗೂ ಸಾಹಿತ್ಯದ ಅಭಿರುಚಿಯಿದೆ. ಆದರೆ ಅದನ್ನು ಬಿಂಬಿಸಲು ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ. ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡರೆ ಮಕ್ಕಳಲ್ಲಿ ಹುದುಗಿರುವ ಕಲೆ, ಸಾಹಿತ್ಯ ಹಾಗೂ ಸಂಗೀತ ಹೊರ ತೆಗೆಯಬಹುದು ಎಂದರು.
ಕನ್ನಡ ಸಾಹಿತ್ಯದ ಬೇರನ್ನು 7ನೇ ಶತಮಾನದಿಂದಲೂ ಕವಿಗಳು ಪೋಷಣೆ ಮಾಡುತ್ತಾ ಬಂದಿದ್ದು, ಪಂಪ, ರನ್ನ ಜನ್ನರು ಕನ್ನಡದ ಬೇರನ್ನು ನೆಟ್ಟರೆ,  ಮಧ್ಯದಲ್ಲಿ ಬಸವಣ್ಣ, ಅಕ್ಕಮಹಾದೇವಿ ಅವರು ಸೇರಿದಂತೆ ಹಲವರು ಅದನ್ನು ಬೆಳಸಿ ಹೆಮ್ಮರವಾಗಿಸಿದರು. 20ರ ಶತಮಾನದಲ್ಲಿ ಕುವೆಂಪು,  ಮಾಸ್ತಿ, ದ.ರಾ ಬೇಂದ್ರೆ, ನಂತರದಲ್ಲಿ ಗಿರೀಶ್ ಕಾರ್ನಾಡ್,  ಯು.ಆರ್ ಅನಂತಮೂರ್ತಿಯಂತಹ ದಿಗ್ಗಜ ಕವಿಗಳು ಕನ್ನಡ ಸಾಹಿತ್ಯ ಉಳಿಸಿ ಬೆಳೆಸಿದ್ದು, ಮುಂದಿನ ದಿನಗಳಲ್ಲಿ ನಾವು ಅದನ್ನು ಬೆಳಸಿಕೊಂಡು ಹೋಗುವ ಜವಬ್ದಾರಿ ತಮ್ಮದಾಗಿದೆ ಎಂದು ತಿಳಿಸಿದರು.
ಪಂಜೆ ಮಂಗೇಶರಾಯರು, ಜಿ.ಪಿ ರಾಜರತ್ನಂ, ಶಿಸು ಸಂಗಮೇಶರಂತಹ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದು, ಪೋಷಕರು ತಮ್ಮ ಮಕ್ಕಳಲ್ಲಿ ಹುದುಗಿರುವ ಒಂದಲ್ಲಾ ಒಂದು ಕಲೆಯನ್ನು ಪ್ರದರ್ಶಿಸಲು ಸಹಕಾರ ನೀಡಿದರೆ ಆತ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಅನುಮಾನವೇ ಇಲ್ಲ ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.