ಹಾಸನ

ದೇಶಕ್ಕಾಗಿ ಮಡಿದ ಶಿವಾಜಿ ಮಹಾನ್ ನಾಯಕ

Published On :

ಹಾಸನ: ರಾಷ್ಟ್ರದ ಏಳಿಗೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿ ದೇಶದ ನೆಲ, ಸಂಸ್ಕೃತಿಯ ಉಳಿವಿಗಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಛತ್ರಪತಿ ಶಿವಾಜಿ ಎಂದು ಶಾಸಕ ಎಚ್.ಎಸ್. ಪ್ರಕಾಶ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಶಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿಯವರು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಶಿವಾಜಿಯವರ ಜೀವನ ಚರಿತ್ರೆಯನ್ನು ಬಿಂಬಿಸುವ ಪ್ರಯತ್ನ ಅಗತ್ಯವಾಗಿದೆ. ಮರಾಠ ಜನಾಂಗದವರು ಅಲ್ಪಸಂಖ್ಯಾತರು ಎಂಬ ಪದ ಬಳಸಬಾರದು. ಸಮಾಜದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಬೇಕು ಎಂದರು.
ಕೃತಿ ರಚನೆಯಾಗಬೇಕು: ಈ ಜನಾಂಗದವರಿಗೆ ವಿದ್ಯೆ ಪಡೆಯಲು ಹೆಚ್ಚಿನ ಒತ್ತು ನೀಡಿ, ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬೆಳೆಯಲು ಅವಕಾಶ ನೀಡಬೇಕು.
ಮುಂದಿನ ಪೀಳಿಗೆಯ ನೆನಪಿಗಾಗಿ ಶಿವಾಜಿಯ ಪ್ರತಿಮೆ ನಿರ್ಮಿಸುವುದರೊಂದಿಗೆ ಅವರ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಕೃತಿಗಳನ್ನು ರಚಿಸಬೇಕು ಎಂದು ಹೇಳಿದರು.
ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಶಿವಾಜಿಯವರ ವ್ಯಕ್ತಿತ್ವ ಹಾಗೂ ಸಂಸ್ಕೃತಿ ನೆನಪು ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಏರ್ಪಡಿಸಲಾಗುತ್ತಿದೆ. ಶಿವಾಜಿಯವರ ಜೀವನ ಮೌಲ್ಯಗಳನ್ನು ಎಲ್ಲರ ಜೀವನದಲ್ಲಿ ಅಳವಡಿಸಿದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ವೃತ್ತಕ್ಕೆ ಶಿವಾಜಿ ಹೆಸರಿಡಿ: ಸಮಾರಂಭದಲ್ಲಿ ಸ್ವಾಗತ ಭಾಷಣ ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದ ಚಿಕ್ಕಮಗಳೂರು ತಹಸೀಲ್ದಾರ್ ಕುದ್ರಪ್ಪಾಜಿ ರಾವ್ ಮಾತನಾಡಿ, ಜನಾಂಗದವರಿಗೆ 2 (ಎ) ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಹಾಗೂ ಹಾಸನದಲ್ಲಿ ಯಾವುದಾದರೂ ವೃತ್ತಕ್ಕೆ ಶಿವಾಜಿಯವರ ನಾಮಕರಣ ಮಾಡಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಶಿವಾಜಿಯವರ ಜೀವನ ಮೌಲ್ಯಗಳನ್ನು ಕುರಿತಂತೆ ಹಾಸನ ತಹಸೀಲ್ದಾರ್ ಮುಂಜುನಾಥ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠಿ ಪರಿಷತ್ ಮುಖಂಡ ರಾಣೋಜಿರಾವ್ ಅವರು ಮಾತನಾಡಿದರು.
ಸಮಾರಂಭದ ಅಂಗವಾಗಿ ನಗರದ ಮುಖ್ಯ ಬೀದಿಗಳಲ್ಲಿ ಮರಾಠಿ ಜನಾಂಗದವರು ಶಿವಾಜಿಯವರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಹಾಸನಾಂಬ ಕಲಾಕ್ಷೇತ್ರಕ್ಕೆ ಕೊಂಡೊಯ್ದರು. ಸಂಘದ ವತಿಯಿಂದ ಜನಾಂಗ 300 ಜನರಿಗೆ ವೃದ್ಧಾಪ್ಯ ವೇತನ, ವಿದ್ಯಾರ್ಥಿ ವೇತನ ಅಂಗವಿಕಲರ ವೇತನ ಹಾಗೂ ವಿಧವಾ ವೇತನ ಚೆಕ್ ವಿತರಿಸಲಾಯಿತು. ಇದರೊಂದಿಗೆ ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮೂರ್ತಪ್ಪ ವಂದಿಸಿದರು.
ಸಮಾರಂಭದಲ್ಲಿ ಮರಾಠಿ ಜನಾಂಗದ ಪ್ರಮುಖರು ಜಿಲ್ಲೆಯ ನಾನಾ ತಾಲ್ಲೂಕಿನಿಂದ ಆಗಮಿಸಿದ ಮುಖಂಡರು ಅಪಾರ ಪ್ರಮಾಣದ ಮರಾಠಿ ಜನಾಂಗದ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.