ಸರ್ಕಾರದ ಅನುದಾನ ಬೇಕಾಬಿಟ್ಟಿ ನಿರ್ವಹಿಸಿದರೆ ಹೊಣೆ ಯಾರು?
ಹೊಳೆನರಸೀಪುರ: ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಮತ್ತು ಬಜೆಟ್ ಅನುಮೋದನಾ ಸಭೆಯಲ್ಲಿ ಕೆಲವೊಂದು ವಿಷಯಗಳ ಕುರಿತು ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ, ಆಡಳಿತ ಜೆಡಿಎಸ್ನ ಕೆಲ ಸದಸ್ಯರು ಕೂಡ ದನಿಗೂಡಿಸಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಗುರುವಾರ ಅಧ್ಯಕ್ಷೆ ಎಚ್.ಆರ್.ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಡುಬಂತು.
ಸಭೆಯಲ್ಲಿ ಜಾಕ್ವೆಲ್ ನಿರ್ಮಾಣಕ್ಕಾಗಿ ಲಕ್ಷಾಂತರ ರು ವೆಚ್ಚದಲ್ಲಿ ಇಲ್ಲಿನ ಪಂಪ್ಹೌಸ್ನಲ್ಲಿ ನಿರ್ಮಿಸಲಾಗಿದ್ದ ವಾಹನಗಳ ಶೆಡ್ನ್ನು ವರ್ಷ ಕಳೆಯುವ ಮೊದಲೇ ನೆಲಸಮಗೊಳಿಸಿದ್ದು, ಇದನ್ನು ಸದಸ್ಯರ ಗಮನಕ್ಕೇ ತರದೇ ಹೋದ ಕುರಿತಾದ ಚರ್ಚೆ ಸಂದರ್ಭದಲ್ಲಿ ಸರ್ಕಾರದ ಅನುದಾನ ಹೀಗೆ ಬೇಕಾಬಿಟ್ಟಿಯಾಗಿ ನಿರ್ವಹಿಸಿದರೆ ಹೊಣೆ ಯಾರದು, ವಿನಾಕಾರಣ ಲಕ್ಷಾಂತರ ರು. ಪೋಲು ಮಾಡಿದ್ದು ಎಷ್ಟು ಸರಿ ಎಂಬ ಕುರಿತಂತೆ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಎ.ಆರ್.ರವಿಕುಮಾರ್ ಮುಖ್ಯಾಧಿಕಾರಿ ನಿರ್ಧಾರದ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿ, ಮುಂದೆ ಈ ರೀತಿ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಜನರೇಟರ್ ಬಳಕೆ ಮಾಡಿದ್ದೇ ಕಡಿಮೆ: ಜೆಡಿಎಸ್ನ ಸದಸ್ಯರೇ ಹಲವು ವಿಷಯಗಳ ಚರ್ಚೆ ಸಂದರ್ಭದಲ್ಲಿ ಪುರಸಭೆಯ ಆಡಳಿತ ನಿರ್ವಹಣೆಯ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದರು. ಸದಸ್ಯ ಶ್ರೀಧರ್ ಪಂಪ್ಹೌಸ್ನಲ್ಲಿರುವ 24 ಲಕ್ಷ ರು. ಗಳ ಜನರೇಟರನ್ನು ಬಳಕೆ ಮಾಡಿದ್ದೇ ಕಡಿಮೆ. ಆದರೆ ಅದರ ನಿರ್ವಹಣೆಯ ಖರ್ಚನ್ನು ಮಾತ್ರ ಪ್ರತೀ ಬಾರಿ ತೋರುತ್ತೀರಿ, ಒಳಚರಂಡಿ ಸಂಪರ್ಕಗಳನ್ನು ಪೂರ್ಣಗೊಳಿಸದೇ, ರಸ್ತೆ ಕಾಮಗಾರಿ ಮಾಡಿಸುತ್ತೀರಿ. ನಂತರ ಒಳಚರಂಡಿ ಕಾಮಗಾರಿಗೆ ಇದ್ದ ರಸ್ತೆಯನ್ನೇ ಅಗೆಯುತ್ತೀರಿ ಎಂದು ಎಂಜಿನೀಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯ ಎ.ಆರ್.ರವಿಕುಮಾರ್ ಅವರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಎಷ್ಟೇ ಕೋಟಿ ಹಣ ಖರ್ಚು ಮಾಡಿದರೂ ವರ್ಷ ಮುಗಿಯುವ ಮೊದಲೇ ಅದೇ ರಸ್ತೆ ಮತ್ತು ಚರಂಡಿಯನ್ನು ಮತ್ತೆ ನಿರ್ಮಿಸಲು ಹಣ ನೀಡಲಾಗುತ್ತದೆ.
ರಾತ್ರಿ ವೇಳೆ ಕಾಂಕ್ರಿಟ್ ಕಾಮಗಾರಿ ಏಕೆ: ರಾತ್ರಿ ವೇಳೆ ಕಾಂಕ್ರಿಟ್ ಕಾಮಗಾರಿ ಏಕೆ ಮಾಡಿಸುತ್ತೀರಿ ಎಂದು ಮುಖ್ಯಾಧಿಕಾರಿ ಹಾಗು ಇಂಜಿನೀಯರರನ್ನು ಪ್ರಶ್ನಿಸಿದ್ದನ್ನು ಕಂಡಾಗ, ಇಲ್ಲಿನ ಪುರಸಭೆಯ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಸ್ಥಿತಿ ಹಾಗೂ ಅವುಗಳ ಕಳಪೆ ಗುಣಮಟ್ಟದ ಕುರಿತಂತೆ ಎಲ್ಲರಲ್ಲೂ ಇದ್ದ ಅನುಮಾನ ನಿಜವೇನೋ ಎನ್ನುವ ವಾಸ್ತವವನ್ನು ಜೆಡಿಎಸ್ ಸದಸ್ಯರೇ ಹೊರಹಾಕಿದ್ದು ಕಂಡುಬಂತು.
ಮುಂಗಡ ಹಣ ಮುಟ್ಟುಗೋಲು: ಪುರಸಭೆಯು ನಿರ್ಮಿಸಿದ್ದ ಮಳಿಗೆಗಳನ್ನು 30 ಸಾವಿರಕ್ಕೂ ಹೆಚ್ಚಿನ ಬಾಡಿಗೆಗೆ ಹರಾಜಿನಲ್ಲಿ ಕೂಗಿ, ಇದುವರೆವಿಗೂ ಪುರಸಭೆಗೆ ಬಾಡಿಗೆಯನ್ನೇ ಕಟ್ಟದೇ ಇರುವ ಕುರಿತಂತೆ ಅವರ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಂಡರೂ, ಪುರಸಭೆಗೆ ಕಟ್ಟಬೇಕಾದ ಬಾಕಿಗೂ ಸಾಲುವುದಿಲ್ಲ, ಹೀಗಿರುವ ಸ್ಥಿತಿಯಲ್ಲಿ ಪುರಸಭೆಯ ಆದಾಯಕ್ಕೆ ಧಕ್ಕೆಯಾಗಿರುವ ಕಾರಣ ಸದರಿ ಮಳಿಗೆಗಳನ್ನು ಪುರಸಭೆಯ ವಶಕ್ಕೆ ಪಡೆದು ಮರು ಹರಾಜು ನಡೆಸುವಂತೆ ಸದಸ್ಯ ಕೆ.ಆರ್.ಸುಬ್ರಹ್ಮಣ್ಯ ಸಭೆಯಲ್ಲಿ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು.
ಪುರಸಭೆಯ ಉಪಯೋಗಕ್ಕಾಗಿ ಜೆಸಿಬಿ ಯಂತ್ರವನ್ನು ಖರೀದಿಸುವ ಕುರಿತಂತೆ ಚರ್ಚೆ ನಡೆಸುವ ಸಂದರ್ಭದಲ್ಲಿ 4 ಟ್ರಾಕ್ಟರ್ಗಳಿದ್ದು, ಇರುವುದು ಇಬ್ಬರು ಚಾಲಕರು, ಜೆಸಿಬಿ ವಾಹನ ಕೊಳ್ಳುವ ಮೊದಲು ಅದಕ್ಕೆ ಆಪರೇಟರನ್ನು ನೇಮಿಸಿಕೊಳ್ಳಿ ಎಂದು ಕಾರ್ಯವೈಖರಿ ಸದಸ್ಯ ರಾಘವೇಂದ್ರ ಟೀಕಿಸಿದರು. ಸಾಮಾನ್ಯ ಸಭೆಯಲ್ಲಿ 2014-15ನೇ ಸಾಲಿನ ಆಯ-ವ್ಯಯವನ್ನು ಯಾವುದೇ ವಿರೋಧವಿಲ್ಲದೇ ಅನುಮೋದಿಸಲಾಯಿತು. ಉಪಾಧ್ಯಕ್ಷ ಎಚ್.ಕೆ.ರಘುರಾಮ್, ಮುಖ್ಯಾಧಿಕಾರಿ ಹರೀಶ್, ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

