ಸನಾತನ ಧರ್ಮದಿಂದ ಶಾಂತಿ
ಅರಸೀಕೆರೆ: ಸನಾತನ ಧರ್ಮ, ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ತಾಲೂಕು ದೈವಜ್ಞ ಬ್ರಾಹ್ಮಣ ಯುವಕ ಸಂಘದ 9ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ದೈವಜ್ಞ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶ್ರೀರಾಮನ ಆದರ್ಶ, ಕೃಷ್ಣನ ನೀತಿ, ಕರ್ಣನ ದಾನಗುಣ, ಸ್ವಾಮಿ ವಿವೇಕಾನಂದರ ರಾಷ್ಟ್ರೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಮನವಿ: ಇಂದಿನ ವೈಜ್ಞಾನಿಕ ಯುಗದಲ್ಲಿ ಜನರ ಜೀವನ ಶೈಲಿ ಬದಲಾಗಿದ್ದು ಸನಾತನ ಧರ್ಮವನ್ನು ಮರೆತು ಆಚಾರ- ವಿಚಾರ, ಸಂಸ್ಕೃತಿಗಳು ಬದಲಾಗಿ ಪಾಶ್ಚಿಮಾತ್ಯ ಸಂಸ್ಕೃತಿ ತಲೆಯೆತ್ತುತ್ತಿದ್ದು ಇದನ್ನು ತಡೆಗಟ್ಟುವ ದೃಷ್ಟಿಯಿಂದ ಸಮಾಜದ ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.
ಆಚಾರ- ವಿಚಾರ ಮರೆತಿದ್ದೇವೆ: ಉತ್ತರ ಕರ್ನಾಟಕದ ಸುಕ್ಷೇತ್ರ ಹೊನ್ನಾವರದ ಕರ್ಕಿ ಮಠ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಛಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂದಿನ ಯುವಜನಾಂಗ, ಮಹಿಳೆಯರು ದೃಶ್ಯ ಮಾಧ್ಯಮಗಳಿಗೆ ಮರುಳಾಗಿ ಆಚಾರ ವಿಚಾರ, ಧರ್ಮ, ಸಂಸ್ಕೃತಿಗಳನ್ನು ಮರೆತು ಧರ್ಮದ ಅಧಃಪತನಕ್ಕೆ ಕಾರಣವಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಕಿವಿಮಾತು: ಸನಾತನ ಧರ್ಮದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು ಮಾತೆಯರು ತಮ್ಮ ಜವಾಬ್ದಾರಿಯನ್ನರಿತು ಧರ್ಮದ ಆಚರಣೆ, ಸಂಧ್ಯಾವಂದನೆ, ದಿನನಿತ್ಯ ಪೂಜಾ ಪದ್ಧತಿ, ತಂದೆ-ತಾಯಿಗಳ, ಗುರು ಹಿರಿಯರ ಸಂಬಂಧಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಮೂಲಕ ಸಂಸ್ಕೃತಿವಂತರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ಭರವಸೆ: ಪುರಸಭಾ ಸದಸ್ಯ ಬಿ.ಎನ್. ವಿದ್ಯಾಧರ ಮಾತನಾಡಿ, ವಿದೇಶಿಯರು ಕೂಡ ಭಾರತದ ಧಾರ್ಮಿಕ ಪದ್ಧತಿಗೆ ಮಾರುಹೋಗಿ ಶಾಂತಿ ನೆಮ್ಮದಿಗಾಗಿ ಮಠ ಮಾನ್ಯಗಳು, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಭಾರತೀಯರಾದ ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುವುದು ಸರಿಯಲ್ಲ. ಜಗತ್ತಿಗೆ ಶಾಂತಿಯನ್ನು ಸಾರಿದ ಧರ್ಮ ನಮ್ಮದಾಗಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದ ಅವರು, ಸಮಾಜದವರು ಸಮುದಾಯ ಭವನ ನಿರ್ಮಿಸುವುದಾದರೆ ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ವಾರ್ಷಿಕೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ನಾನಾ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ತಾ. ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ್ ಎಂ. ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಪುರಸಭಾ ಸದಸ್ಯ ಪಾರ್ಥಸಾರಥಿ ಇನ್ನಿತರರು ವೇದಿಕೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

