ಹಾಸನ

ಕಾಲು ಬಾಯಿ ರೋಗ ತಡೆಗೆ ಕ್ರಮ

Published On :

ಅರಕಲಗೂಡು: ಸರ್ಕಾರಕ್ಕೆ ಸವಲಾಗಿದ್ದ ಜಾನುವಾರುಗಳಿಗೆ ತಗುಲುವ ಕಾಲು ಮತ್ತು ಬಾಯಿ ಜ್ವರ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ ಎಂದು ಶಾಸಕ ಎ. ಮಂಜು ತಿಳಿಸಿದ್ದಾರೆ. ತಾಲೂಕಿನ ಯಗಟಿ ಗ್ರಾಮದಲ್ಲಿ ಇತ್ತೀಚೆಗೆ ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ,ತಾಲೂಕಿನಲ್ಲಿ ಸುಮಾರು 29ಜಾನುವಾರುಗಳು ಈ ರೋಗದಿಂದ ಸಾವನಪ್ಪಿವೆ.ಅರ್ಜಿ ಸಲ್ಲಿಸಿದ ರೈತರಿಗೆ ಸಹಾಯಧನವನ್ನು ಈಗಾಗಲೇ ವಿತರಿಸಲಾಗಿದ್ದು,ಉಳಿದವರಿಗೆ ಸದ್ಯದಲ್ಲಿಯೇ ನೀಡಲಾಗುವುದು ಎಂದು ಹೇಳಿದರು. ಪಶುವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಒಟ್ಟು 1,12,993 ಜಾನುವಾರುಗಳು ಇದ್ದು, ಎಲ್ಲಕ್ಕೂ ಕೂಡ ತಪ್ಪದೇ ಲಸಿಕೆ ನೀಡಲಾಗುವುದು.ಇಲಾಖೆಯ ಸಿಬ್ಬಂದಿ ಪ್ರತಿ ದಿನವೂ ಕೂಡ ಬೆಳಗ್ಗೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಈ ಕಾರ್ಯಕ್ಕೆ ಒಟ್ಟು ಐದು ತಂಡಗಳನ್ನು ರಚಿಸಲಾಗಿದೆ. ರೈತರೂ ಕೂಡ ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ನಂಜುಂಡಸ್ವಾಮಿ, ಭಾಗ್ಯಮ್ಮ, ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಕುಮಾರ್, ಕಮಲಮ್ಮ, ಪರಮೇಶ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಭಾನುವಾರ ಕೃಷಿ ಉತ್ಸವ
ಅರಕಲಗೂಡು: ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ವತಿಯಿಂದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೃಷಿ ಉತ್ಸವ-2014 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಮಹಾಬಲ ಕುಲಾಲ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರ ಬೆಳಿಗ್ಗೆ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಲವು ರೀತಿಯ ಕೃಷಿಕರಿಗೆ ಉಪಯುಕ್ತವಾಗಬಲ್ಲ ಕಾರ್ಯಕ್ರಮಗಳು,ವಿಚಾರ ಗೋಷ್ಠಿಗಳು, ಕೃಷಿ ಉತ್ಪನ್ನಗಳ ಪ್ರದರ್ಶನಗಳು ನಡೆಯಲಿವೆ.  ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ನಡೆದಿರುವ ಕೃಷಿ ಮೇಳದಲ್ಲಿ 70 ಕೃಷಿ ಮಳಿಗೆಗಳು ಬರುವ ಸಾಧ್ಯತೆ ಇದ್ದು, ಮಾರಾಟ ಪ್ರದರ್ಶನ ನಡೆಯಲಿವೆ. ಕೃಷಿಗೆ ಸಂಬಂಧಿಸಿದ ಉತ್ಪನ್ನಗಳು ಮತ್ತು ಯಂತ್ರಗಳು ರಿಯಯಿತಿ ದರದಲ್ಲೂ ಮಾರಾಟ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಎಂದರು. ರೈತ ಬದುಕು ಕಟ್ಟಿಕೊಳ್ಳಲು ಪೂರಕವಾದ ಸಮಗ್ರ ಕೃಷಿಗೆ ಆದ್ಯತೆ ನೀಡಿ ಹಲವು ವಿಚಾರ ಸಂಕಿರಣದ ಜೊತೆಗೆ ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ, ಬೆಳಿಗ್ಗೆ 8.30ರಿಂದ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಕರುಗಳ ಪ್ರದರ್ಶನ ಹೀಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಕಾರ್ಯಕ್ರಮದ ವಿವರ: ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೆರವೇರಿಸಲಿದ್ದು, ಶಾಸಕ ಎ. ಮಂಜು ಅವರು ಅಧ್ಯಕ್ಷತೆ ವಹಿಸುವರು. ವಸ್ತು ಪ್ರದರ್ಶನದ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ, ಜಾನುವಾರು ಪ್ರದರ್ಶನದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ನೆರವೇರಿಸುವರು ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೃಷಿ ಉತ್ಪನ್ನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋವಿಂದಪ್ಪ, ಜಂಟಿ ಕಾರ್ಯದರ್ಶಿ ವಾಟಾಳ್ ರಮೇಶ್, ಅಬ್ದುಲ್ ರೆಹಮಾನ್, ಯೋಜನಾಧಿಕಾರಿ ಅಜಿತ್ ಹೆಗ್ಡೆ, ಬೇಲೂರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.     
ಮೈಸೂರಿನಲ್ಲಿ ಉದ್ಯೋಗ ಮೇಳ
ಅರಕಲಗೂಡು: ಕರ್ನಾಟಕ ರಾಜ್ಯ ಉದ್ಯೋಗ ಮತ್ತು ತರಬೇತಿ ಇಲಾಖೆ, ಕಾರ್ಮಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕರ್ನಾಟಕ ಉದ್ಯೋಗ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಜಿಲ್ಲಾಡಳಿತ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಫೆ. 23 ಹಾಗೂ 24ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಈ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಏಳನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐ.ಟಿ.ಐ, ಡಿಪ್ಲೋಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ತಾಲ್ಲೂಕಿನ ಆಸಕ್ತ ನಿರುದ್ಯೋಗ ಯುವಕ ಯುವತಿಯರು ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಅರಕಲಗೂಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಉದ್ಯೋಗ ಮಾಹಿತಿ ಅಧಿಕಾರಿ ಯೋಗನಾಥ್.ಎ.ಎಸ್. ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.